ಇಳೆಗೆ ಹಸಿರ ಹೊದಿಕೆಯ ಸ್ವಾಗತ. ಮುಗಿಲೆತ್ತರದ ಬೆಟ್ಟಗುಡ್ಡಗಳ ರಸ್ತೆಯುದ್ಧಕ್ಕೂ ದಟ್ಟ ಮಂಜಿನ ಕಣ್ಣಾಮುಚ್ಚಾಲೆ ಆಟ. ಹಸಿರ ವನರಾಶಿ ನಡುವೆ ಸಾಗೋ ಬೆಳ್ಮುಗಿಲ ಸಾಲು. ದಿನಕರನ ಕಿರಣಕ್ಕೆ ನಾಚಿ ನೀರಾಗೋ ವೈಯ್ಯಾರದ ಮಂಜು. ರಸ್ತೆಯುದ್ಧಕ್ಕೂ ಧುಮ್ಮಿಕ್ಕೋ ಜಲಪಾತದ ಸೊಬಗು. ಹೌದು, ಮಲೆನಾಡಲ್ಲೀಗ ದೃಶ್ಯ ಕಾವ್ಯವೇ ಮೇಳೈಸಿದೆ. ಪ್ರಕೃತಿಯ ತವರು ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತೂ ನಿಸರ್ಗ ಮಾತೆ ತನ್ನ ನೈಜ ಸೊಬಗನ್ನ ಅನಾವರಣಗೊಂಡಿದೆ. ಚಾರ್ಮಾಡಿಘಾಟಿ ರಸ್ತೆಯುದ್ಧಕ್ಕೂ ಧುಮ್ಮಿಕ್ಕಿ ಹರಿಯುತ್ತಿರೋ ಜಲಪಾತಗಳು ಹೊಸ ಲೋಕವನ್ನೇ ಸೃಷ್ಠಿಸಿವೆ.
ಮಳೆಗಾಲ ಬಂತೆಂದ್ರೆ ಸಾಕು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನ ವರ್ಣಿಸಲು ಪದಗಳೇ ಸಾಲದು. ನದಿಗಳು ಜೀವ ಕಳೆಯನ್ನ ಪಡೆದುಕೊಳ್ತಾವೆ. ಬಂಡೆಗಳ ಮೇಲಿನಿಂದ ಝುಳು-ಝುಳು ನಿನಾದ ಗೈಯುತ್ತಾ ಧುಮ್ಮಿಕ್ಕೋ ಜಲಧಾರೆಗಳುಪ್ರಕೃತಿಯೇ ಪ್ರಕೃತಿಗೆ ಮಾಡಿದ ಕ್ಷೀರಧಾರೆಯಂತೆ ಭಾಸವಾಗುತ್ತೆ. ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳು ಸಾಲು ಹಸಿರೊದ್ದು ಝೇಂಕರಿಸುತ್ತಿದ್ರೆ, ಮಂಜಿನ ಕಣ್ಣಾಮುಚ್ಚಾಲೆ ಆಟ ಪ್ರವಾಸಿಗರ ಪಾಲಿನ ಸ್ವರ್ಗವಾಗಿ ಮಾರ್ಪಟ್ಟಿದೆ. ಸತತ ಮಳೆಯಿಂದ ಚಾರ್ಮಾಡಿ ಘಾಟಿನ ರಸ್ತೆಯುದ್ಧಕ್ಕೂ ಹತ್ತಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಚಾರ್ಮಾಡಿಯ ಒಡಲಿನಿಂದ ಹಾಲ್ನೊರೆಯಂತೆ ಸೂಸೋ ಫಾಲ್ಸ್ಗಳು ನೋಡುಗರ ಕಣ್ಣನ್ನ ಕೊರೈಸುತ್ತಿದೆ.
ಬಾನೆತ್ತರದ ಶಿಖರದಿಂದ ರಭಸವಾಗಿ ಚಿಮ್ಮೋ ಜಲಪಾತಗಳು ರಮಣೀಯ ನೋಟವನ್ನ ಸೃಷ್ಠಿಸಿದ್ರೆ, ದಟ್ಟ ಕಾನನದ ನಡುವಿನ ಝುಳು-ಝುಳು ನಿನಾದದೊಂದಿಗೆ ಹರಿಯೋ ಝರಿಗಳು ಮನಕ್ಕೆ ಮುದ ನೀಡುತ್ವೆ. ಮುಗಿಲ ಚುಂಬಿಸೋ ಹಸಿರ ಬೆಟ್ಟದ ಮೇಲೆಲ್ಲ ಹರಡಿರೋ ಹಿಮದ ರಾಶಿ. ಬೆಳ್ಮುಗಿಲ ಸಾಲಿಂದ ಬಂಗಾರದ ಕಿರಣಗಳನ್ನ ಹೊರಸೂಸೋ ದಿನಕರನ ಚಿತ್ತಾರ. ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ಸಾಗೋ ಜಲಧಾರೆಯ ಮಂಜುಳಗಾನ. ಪ್ರಶಾಂತತೆಯಲ್ಲೂ ಹಸಿರ ಹೊದ್ದು ಮಲಗಿರೋ ದಟ್ಟ ಕಾನನಗಳು ಮಲೆನಾಡಲ್ಲೊಂದು ಲೋಕವನ್ನೆ ಸೃಷ್ಠಿಸಿವೆ.
ಹಸಿರ ಬೆಟ್ಟಗಳ ನಡುವೆ ಧುಮ್ಮಿಕ್ಕಿ ಹರಿಯೋ ಜಲಧಾರೆಯ ಕವಲು. ನೆಲಕ್ಕೆ ಮುತ್ತಿಕ್ಕಿ ಪುಟಿಯುವ ನೀರ ಹನಿಗಳೊಳಗಿನ ಜಲಪಾತಗಳ ವೈಭವ. ಮುಂಗಾರಿನ ಸಿಂಚನಕ್ಕೆ ಚಾರ್ಮಾಡಿ ತುಂಬೆಲ್ಲಾ ಜಲಪಾತಗಳ ಚಿತ್ತಾರವೇ ಅನಾವರಣಗೊಂಡಿದೆ.
ಒಟ್ಟಾರೆ, ದಟ್ಟವಾದ ಮಂಜು. ಚುಮು-ಚುಮು ಚಳಿ. ಜಡಿ ಮಳೆ ಮಧ್ಯೆ ಚಾರ್ಮಾಡಿಯ ರೋಮಾಂಚನ ಪಯಣ. ಹಾವು ಬಳುಕಿನ ಮೈಕಟ್ಟಿನ ಒಂದೊಂದು ತಿರುವಿನಲ್ಲೂ ಒಂದೊಂದು ಜಲಪಾತಗಳು. ಚಾರ್ಮಾಡಿ ನಿಜಕ್ಕೂ ಚಾರಣಿಗರ ಸ್ವರ್ಗ. ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕೋ ಜಲಧಾರೆಯ ಕವಲು.
ಪ್ರಕೃತಿ ಮಾತೆಯ ನಿಸರ್ಗದ ಚೆಲುವು. ಬಿಸಿಲು-ಮಳೆಯ ಲೀಲೆಗಳನ್ನ ಕಣ್ತುಂಬಿಕೊಂಡ ಕಣ್ಣುಗಳೇ ಧನ್ಯ. ಬೆಟ್ಟದ ತುಂಬೆಲ್ಲಾ ಮಂಜಿನ ರಾಶಿ. ಸೂರ್ಯನ ಕಿರಣಕ್ಕೆ ನಾಚಿ ನೋಡನೋಡ್ತಿದ್ದಂತೆ ಮಾಯ. ಕರ್ನಾಟಕದ ಊಟಿಯಂತೆ ಭಾಸವಾಗೋ ಚಾರ್ಮಾಡಿಯ ಸೌಂದರ್ಯ ಪ್ರಕೃತಿಯ ವಿಸ್ಮಯವೇ ಸರಿ