ಮಲೆನಾಡಲ್ಲಿ ಸುರಿದ ಭರಣಿ ಮಳೆಗೆ ಕಾಫಿ ಬೆಳೆಗಾರರು ಸಂತಸ

Published : May 07, 2024, 08:31 PM ISTUpdated : May 07, 2024, 08:32 PM IST

ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಲ ಪ್ರದೇಶದಲ್ಲಿ ಇಂದು ( ಮಂಗಳವಾರ )ಮಧ್ಯಾಹ್ನ ಧಾರಾಕಾರವಾಗಿ ಸುರಿದ ಭರಣಿ ಮಳೆ ಧರಣಿಯನ್ನು ತೊಳೆದಿದೆ. ಬರಗಾಲದ ಜೊತೆಗೆ ದಾಖಲೆ ಪ್ರಮಾಣದ ತಾಪಮಾನ ಏರಿಕೆಯಿಂದ ಕಾದ ಕಾವಲಿಯಂತಾಗಿದ್ದ ಇಳೆಗೆ ವರುಣ ತಂಪೆರೆದಿದ್ದಾನೆ. ನೆತ್ತಿಸುಡುವ ಬಿಸಿಲಿನಿಂದಾಗಿ ಮನೆಯಿಂದ ಹೊರ ಬರಲು ಹೆದರುತ್ತಿದ್ದ ಜನರು ಇಂದಿನ ಮಳೆಯಿಂದ ಸಂತಸಗೊಂಡಿದ್ದಾರೆ. ಬಿಸಿಗಾಳಿಯಿಂದ ಬಸವಳಿದಿದ್ದ ನಗರದ ಜನತೆ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.  

PREV
15
ಮಲೆನಾಡಲ್ಲಿ ಸುರಿದ ಭರಣಿ  ಮಳೆಗೆ ಕಾಫಿ ಬೆಳೆಗಾರರು ಸಂತಸ

ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಒಂದು ಗಂಟೆಗೂ ಹೆಚ್ಚು ಸಮಯ ಬಿರುಸಾಗಿ ಸುರಿದ ಆಲಿಕಲ್ಲು ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತಗೊಂಡವು, ಹಲವಾರು ತಿಂಗಳಿಂದ ಕಳಸ, ಕೊಳಕು, ತ್ಯಾಜ್ಯಗಳಿಂದ ತುಂಬಿಕೊಂಡಿದ್ದ ರಾಜಕಾಲುವೆ, ಚರಂಡಿಗಳೆಲ್ಲವೂ ತುಂಬಿ ಹರಿದು ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ.ಮಾರ್ಕೆಟ್ ರಸ್ತೆ, ಮಲ್ಲಂದೂರು ರಸ್ತೆ ಸೇರಿದಂತೆ ಹಲವೆಡೆ ನೀರು ರಸ್ತೆ ಮೇಲೆ ನದಿಯಂತೆ ಹರಿದಿದೆ. ಕೆಲವು ಕಡೆಗಗಳಲ್ಲಿ ಮಳೆನೀರಿನ ರಭಸಕ್ಕೆ ಒಳಚರಂಡಿಗಳು ಉಕ್ಕಿ ಹರಿದು ರಸ್ತೆಯೆಲ್ಲಾ ತುಂಬಿಕೊಂಡಿದ್ದು ಕಂಡು ಬಂತು.
 

25

ಉಪ್ಪಳ್ಳಿ ಸ್ಮಶಾನದಿಂದ ಮೂರು ಮನೆ ಹಳ್ಳಿ ವರೆಗೆ ಹಾದು ಹೋಗಿರುವ ರಾಜಕಾಲುವೆಯಲ್ಲಿ ಭಾರೀ ನೀರು ಹರಿಯಲಾರಂಭಿಸಿ ಹಲವು ತಿಂಗಳಿನಿಂದ ತುಂಬಿಕೊಂಡಿದ್ದ ಭಾರೀ ಪ್ರಮಾಣದ ಪ್ಲಾಸ್ಟಿಕ್, ಕೊಳಚೆ, ಇನ್ನಿತರೆ ತ್ಯಾಜ್ಯಗಳೆಲ್ಲವೂ ಕೊಚ್ಚಿಕೊಂಡು ಹೋಯಿತು.ಆದರೆ ಬೋಳರಾಮೇಶ್ವರ ದೇವಸ್ಥಾನ ಬಳಿ ಜಿಲ್ಲಾ ಸರ್ಕಾರಿ ನೌಕರರ ಭವವನದ ಹಿಂಭಾಗದಲ್ಲಿ ರಾಜಕಾಲುವೆ ಉಕ್ಕಿ ಮೇಲಕ್ಕೆ ಹರಿದ ಪರಿಣಾಮ ಪಕ್ಕದ ತಗ್ಗು ಪ್ರದೇಶದ ಮೈದಾನ ಮತ್ತು ಹತ್ತಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡಿದರು. ಕೊಳೆಚೆ ನೀರೆಲ್ಲವೂ ರಸ್ತೆಯಲ್ಲಿ ಹರಿದು ದುರ್ವಾಸನೆ ಬೀರಿತು.
 

35

ಇಷ್ಟೆಲ್ಲಾ ಅನಾಹುತ ಉಂಟಾದರೂ ಮಳೆ ನಡುವೆ ಸುರಿದ ಆಲಿಕಲ್ಲು ಜನರನ್ನು ಉಲ್ಲಸಿತಗೊಳಿಸಿತು. ಸುರಿಯುವ ಮಳೆಯಲ್ಲೇ ಹಲವರು ಆಲಿಕಲ್ಲುಗಳನ್ನು ಹೆಕ್ಕಿಕೊಂಡಿದ್ದು ಕಂಡು ಬಂತು. ಭರವಸೆಯ ಮಳೆಗಳಾದ ರೇವತಿ ಮತ್ತು ಅಶ್ವಿನಿ ಮಳೆಗಳು ನಿರೀಕ್ಷಿತ ಮಟ್ಟದಲ್ಲಿ ಸುರಿಯದೇ ನಿರಾಸೆ ಮೂಡಿಸಿದವಾದರೂ ಭರಣಿ ಮಳೆ ಆರ್ಭಟಿಸಿದ್ದು ಜನರಲ್ಲಿ ನೆಮ್ಮದಿ ತಂದಿದೆ. ಚಿಕ್ಕಮಗಳೂರು ನಗರದೆಲ್ಲಡೆ ಮಳೆಯಾಗಿದ್ದು, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದೆ.

45

ಅಗಸರ ಬೀದಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನೀರು ಹೊರಹಾಕಲು ಜನತೆ ಹರಸಾಹಸಪಟ್ಟರು. ಅಡುಗೆ ಮನೆಯೂ ಮಳೆ ನೀರಿನಿಂದ ಜಲಾವೃತಗೊಂಡು ಪರದಾಡುವಂತಾಯಿತು. ಮಾರ್ಕೆಟ್ ರಸ್ತೆಯಲ್ಲಿ ಮೂರ್ನಾಲ್ಕು ಮ್ಯಾನ್ಹೋಲ್ಗಳು ಮಳೆ ನೀರಿನ ರಭಸಕ್ಕೆ ಬಾಯ್ತೆರೆದುಕೊಂಡು ನೀರು ಉಕ್ಕಿ ಹರಿದ ಪರಿಣಾಮ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ರಸ್ತೆ ನದಿಯಂತಾಗಿತ್ತು. ಎಂಜಿ ರಸ್ತೆಯ ಎರಡನೇ ಕ್ರಾಸ್ನಲ್ಲಿ ಚರಂಡಿಯಲ್ಲಿ ನೀರು ಹರಿಯದೇ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಶೇಖರಣೆಗೊಂಡಿತ್ತು.ಆಗಾಗ ಭಾರೀ ಸದ್ದು ಮಾಡುತ್ತಿದ್ದ ಗುಡುಗು, ಸಿಡಿಲು ನಗರದ ಜನರು ನಡುಗುವಂತೆ ಮಾಡಿತು. ಬಿರುಗಾಳಿಯಿಂದಾಗಿ ಹಲವು ಮರಗಳ ರೆಂಬೆ, ಕೊಂಬೆಗಳು ಮುರಿದು ಬಿದ್ದವು. ಕೆಲವು ಮನೆಗಳ ಮೇಲ್ಚಾವಣಿಗೆ ಹಾನಿ ಸಂಭವಿಸಿತು. 

55

ಕಾಫಿ ಬೆಳೆಯುವ ಹಲವು ಪ್ರದೇಶದಲ್ಲೂ ಮಳೆಯಾಗಿರುವ ವರದಿಯಾಗಿದೆ. ಗಿಡದ ತುಂಬ ಹೂವರಳಿಸಿಕೊಂಡು ಮಳೆಗಾಗಿ ಕಾಯುತ್ತಿದ್ದ ಕಾಫಿ ಗಿಡಗಳಿಗೆ ಮಳೆಯಿಂದ ಒನ್ನಷ್ಟು ಚೈತನ್ಯಮೂಡಿಸಿದೆ. ಮಳೆಯಿಂದಾಗಿ ಹೀಚು ಕಟ್ಟಲು ಸಹಕಾರಿಯಾಗಿದ್ದು, ಬೆಳೆಗಾರರು ಖುಷಿ ಪಟ್ಟಿದ್ದಾರೆ.

- ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

Read more Photos on
click me!

Recommended Stories