ಸಚಿವ ಜಮೀರ್ ಅಹಮದ್ ಖಾನ್ ಪುತ್ರನ ಸಿನಿಮಾ ಪೋಸ್ಟರ್ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಾಜೀವ್ ಗೌಡನಿಂದ ಕ್ಷಮೆ ಕೇಳಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ರಾಜ್ಯ ಸರ್ಕಾರದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಪುತ್ರ ಜೈದ್ ಖಾನ್ ಅವರ ಕಲ್ಟ್ ಸಿನಿಮಾದ ಪೋಸ್ಟರ್ ಅನ್ನು ರಸ್ತೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ರಾಜೀವ್ ಅವರು, ವಾಹನ ಸಂಚಾರಕ್ಕೆ ತೊಂದರೆಯುಂಟಾಗುವಂತೆ ಅಳವಡಿಕೆ ಮಾಡಿದ್ದನ್ನು ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರು ತೆರವುಗೊಳಿಸಿದ್ದರು.
ಅಷ್ಟಕ್ಕೂ ಈ ಬ್ಯಾನರ್ ಅಳವಡಿಕೆಗೆ ನಗರಸಭೆಯಿಂದ ಅನುಮತಿಯನ್ನೂ ಪಡೆದಿರಲಿಲ್ಲ. ಹೀಗಿದ್ದರೂ ಶಿಡ್ಲಘಟ್ಟ ವ್ಯಾಪ್ತಿಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋಲು ಅನುಭವಿಸಿದ್ದ ರಾಜೀವ್ ಗೌಡ ಅವರು ಮಹಿಳೆ ಎಂಬುದನ್ನೂ ನೋಡದೇ ರಾಜಕೀಯ ದರ್ಪದಿಂದ ಪೌರಾಯುಕ್ತೆ ಅಮೃತಾ ಗೌಡಗೆ ಅವ್ಯಾಚ್ಯವಾಗಿ ನಿಂದನೆ ಮಾಡಿದ್ದರು. ಜೊತೆಗೆ, ಕೊಲೆ ಬೆದರಿಕೆಯನ್ನೂ ಹಾಕಿದ್ದರು.
27
ಕ್ಷಮೆ ಕೇಳಿದ ರಾಜೀವ್
ಈ ಬಗ್ಗೆ ವರದಿ ಮಾಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮಹಿಳಾ ಅಧಿಕಾರಿ ಪರವಾಗಿ ನಿಂತು, ಕಾಂಗ್ರೆಸ್ ರಾಜೀವ್ ಗೌಡ ಹಾಗೂ ಪೌರಾಯುಕ್ತೆ ಅಮೃತಾ ಗೌಡ ಅವರನ್ನು ಫೋನ್‌ಗೆ ತೆಗೆದುಕೊಂಡು ಸರಿ-ತಪ್ಪು ವಿಚಾರಣೆ ಮಾಡಲಾಯಿತು. ಈ ವೇಳೆ ರಾಜೀವ್ ಗೌಡ ಮಹಿಳಾ ಅಧಿಕಾರಿ ಅಮೃತಾ ಗೌಡ ಅವರು ನನ್ನ ಸಹೋದರಿ ಸಮಾನ, ಅವರಿಗೆ ಮಾತನಾಡಿದ್ದು ತಪ್ಪಾಗಿದೆ ಎಂದು ಹೇಳಿ ಕ್ಷಮೆ ಕೇಳಿದ್ದಾರೆ.
37
ದೂರು ದಾಖಲಿಸಿದ ಪೌರಾಯುಕ್ತೆ ಅಮೃತಾ ಗೌಡ
ರಾಜಕೀಯ ದರ್ಪ ತೋರುವ ಮುಖಂಡರಿಗೆ ಬುದ್ಧಿ ಕಲಿಸಬೇಕಾದರೆ ಕಾನೂನಾತ್ಮಕವಾಗಿ ದೂರು ನೀಡಿ ಅರ್ ಶಿಕ್ಷೆಯಾಗುವಂತೆ ಮಾಡಬೇಕಿದೆ. ಹೀಗಾಗಿ, ರಾಜೀವ್ ಗೌಡ ವಿರುದ್ಧ ದೂರು ನೀಡುವಂತೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ಬೆಂಬಲ ವ್ಯಕ್ತಪಡಿಸಿತ್ತು.
ಇದರ ಬೆನ್ನಲ್ಲಿಯೇ ಪೌರಾಯುಕ್ತೆ ಅಮೃತಾ ಗೌಡ ಅವರು, ಕಾಂಗ್ರೆಸ್ ಮುಖಂಡ ರಾಜುಗೌಡ ವಿರುದ್ಧ ಶಿಡ್ಲಘಟ್ಟ ಠಾಣೆಗೆ ದೂರು ನೀಡಿದ್ದಾರೆ. ಅನಧಿಕೃತ ಹಾಗೂ ಅವೈಜ್ಞಾನಿಕವಾಗಿ ಅಳವಡಿಕೆ ಮಾಡಿದ್ದ ಬ್ಯಾನರ್ ತೆರೆವು ಗೊಳಿಸಿರುವ ಹಿನ್ನೆಲೆಯಲ್ಲಿ ರಾಜೀವ್ ಗೌಡ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲು ಮಾಡಿದ್ದಾರೆ.
ಒಬ್ಬ ಸರ್ಕಾರಿ ಅಧಿಕಾರಿ ಮಾತ್ರವಲ್ಲದೇ ಒಂದು ಹೆಣ್ಣು ಅಂತ ನೋಡದೆ ಏಕವಚನದಲ್ಲಿ ನಿಂದಿಸಿದ್ದಾರೆ. ಬೆಂಕಿ ಇಟ್ಟು ಸುಟ್ಟು ಹಾಕುವುದಾಗಿ ಬೆದರಿಸಿದ್ದಾರೆ. ಈ ಮೂಲಕ ನನ್ನನ್ನು ತೇಜೋವಧೆ ಮಾಡಿರುತ್ತಾರೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ನನ್ನ ಕುಟುಂಬ ಹಾಗೂ ನನಗೆ ಆಘಾತವಾಗಿದೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಆತ್ಮಸ್ಥೈರ್ಯ ಕಳೆದುಕೊಂಡಿದ್ದೇನೆ.
ಶಿಡ್ಲಘಟ್ಟ ಕೇಂದ್ರ ಸ್ಥಾನದಲ್ಲಿ ನಾನು ಒಬ್ಬಳೇ ವಾಸ ಮಾಡುತ್ತಿದ್ದೇನೆ. ಈ ಘಟನೆಯಿಂದ ಮುಂದೆ ಏನಾದರೂ ಆದರೆ ಅದಕ್ಕೆ ರಾಜು ಗೌಡ ಅವರೇ ನೇರ ಕಾರಣ. ಇವರ ವಿರುದ್ಧ ಸೆಕ್ಷನ್ 79, 132, 352, 199 ಹಾಗೂ 54 ಬಿಎನ್ಎಸ್ ಕಾಯ್ದೆ ಅಡಿ ಕ್ರಮ ಕೈಗೊಳ್ಳಲು ದೂರು ದಾಖಲು ಮಾಡಿದ್ದಾರೆ. ನಗರ ಸಭೆಯಲ್ಲಿ ಕೆಲಸ ಮಾಡುವ ನನಗೆ ಹಾಗೂ ನನ್ನ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಿಗೆ ಆಯುಕ್ತೆ ಅಮೃತ ಗೌಡ ಮನವಿ ಮಾಡಿದ್ದಾರೆ.
57
ಜೆಡಿಎಸ್ ಪಕ್ಷದಿಂದ ಆಕ್ರೋಶ
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಕಾಂಗ್ರೆಸ್ ಮುಖಂಡರ ಗೂಂಡಾಗಿರಿ ಜೋರಾಗಿದೆ. ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ಸಿನಿಮಾದ ಪ್ಲೆಕ್ಸ್ʼಗಳನ್ನು ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯವಾಗಿ, ಅಶ್ಲೀಲ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆಕ್ರೋಶ ಹೊರಹಾಕಿದೆ.
67
ರಾಜೀವ್ ಗೌಡ ಬಂಧನಕ್ಕೆ ಆಗ್ರಹ
ಶಿಡ್ಲಘಟ್ಟದ ಕೋಟೆ ಸರ್ಕಲ್ ರಸ್ತೆಗಳಲ್ಲಿ ಅನುಮತಿ ಪಡೆಯದೆ, ಅಕ್ರಮವಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸಿದ್ದಕ್ಕೆ, ಪೌರಾಯುಕ್ತೆ ಅಮೃತಗೌಡ ಅವರು, ರಸ್ತೆಯಲ್ಲಿ ಅಪಘಾತ ಹೆಚ್ಚಿದ್ದು, ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಮುಖಂಡ ದೂರವಾಣಿ ಕರೆ ಮಾಡಿ, ಬ್ಯಾನರ್ ತೆಗೆಸಿದವರನ್ನು ‘ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ, ಚಪ್ಪಲಿಯಲ್ಲಿ ಹೊಡೆಸುತ್ತೇನೆ, ಕಾರ್ಯಕರ್ತರನ್ನು ಕರೆಸಿ ದಂಗೆ ಎಬ್ಬಿಸುತ್ತೇನೆ ಎಂದು ಮಹಿಳಾಧಿಕಾರಿಗೆ ಅಶ್ಲೀಲವಾಗಿ ನಿಂದಿಸಿ ಬೆದರಿಕೆಯೊಡ್ಡಿದ್ದಾನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ ಅವರೇ ಪೌರಾಯುಕ್ತೆಗೆ ಧಮ್ಕಿ ಹಾಗೂ ಜೀವ ಬೆದರಿಕೆ ಹಾಕಿರುವ ಕಾಂಗ್ರೆಸ್ ಗೂಂಡಾ ರಾಜೀವ್ ಗೌಡನನ್ನು ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಜರುಗಿಸಿ. ಕರ್ನಾಕಟ ಕಾಂಗ್ರಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ, #KPCC ರಾಜ್ಯ ಸಂಯೋಜಕನಾಗಿರುವ ಬೀದಿ ರೌಡಿ ರಾಜೀವ್ ಗೌಡನನ್ನು ಮೊದಲು ಪಕ್ಷದಿಂದ ವಜಾ ಮಾಡಿ ಎಂದು ಜೆಡಿಎಸ್ ಪಕ್ಷದಿಂದ ಆಗ್ರಹಿಸಲಾಗಿದೆ.
77
ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡನ ವಿರುದ್ಧ ಎಎಪಿ ಯುವ ಘಟಕ ದೂರು
ಚಿಕ್ಕಬಳ್ಳಾಪುರ ನಗರದ ಪೌರಾಯುಕ್ತೆ ಅಮೃತ ಗೌಡ ರಿಗೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆಂಕಿ ಹಾಕಿ ಕಚೇರಿಯನ್ನೇ ಸುಡುತ್ತೇನೆಂದು ಬೆದರಿಕೆ ಹಾಕುವ ಮೂಲಕ ಭಯಭೀತ ವಾತಾವರಣ ಉಂಟು ಮಾಡಿರುವ ಪ್ರಕರಣದ ವಿರುದ್ಧ ಆಮ್ ಆದ್ಮಿ ಪಕ್ಷದ ಯುವ ಘಟಕ ಇಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರನ್ನು ಸಲ್ಲಿಸಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ' ಮಹಿಳಾ ಅಧಿಕಾರಿಯೊಬ್ಬರಿಗೆ ಸ್ಥಳೀಯ ಮುಖಂಡನೊಬ್ಬ ಈ ರೀತಿಯ ಪ್ರಾಣ ಹಾನಿ, ಮಾನಹಾನಿ ಹಾಗೂ ಪುರಸಭೆಯ ಸಿಬ್ಬಂದಿಗಳಿಗೆಲ್ಲ ಪ್ರಾಣ ಬೆದರಿಕೆ ಹಾಕಿರುವುದು ನಾಗರೀಕ ಸಮಾಜ ಸಹಿಸಲು ಸಾಧ್ಯವಿಲ್ಲ. ಈತನ ವಿರುದ್ಧ ಕೂಡಲೇ ಗೂಂಡ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಆಮ್ ಆದ್ಮಿ ಪಕ್ಷವು ಸದಾ ಪ್ರಾಮಾಣಿಕರೊಂದಿಗಿದ್ದು ಈ ರೀತಿಯ ಪುಡಿ ರಾಜಕಾರಣಿಗಳ ಅಟ್ಟಹಾಸವನ್ನು ಸಾರ್ವಜನಿಕರೆಲ್ಲರೂ ಒಕ್ಕೂ ರಲಿನಿಂದ ಖಂಡಿಸ ಬೇಕೆಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ