ಕೆಎಸ್‌ಡಿಎಲ್ ಉತ್ಪನ್ನಗಳನ್ನು ಸದ್ಯಕ್ಕೆ 23 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಯೂರೋಪಿಯನ್ ರಾಷ್ಟ್ರಗಳಿಗೂ ಮೈಸೂರು ಸ್ಯಾಂಡಲ್ ಸೋಪ್, ಶವರ್ ಜೆಲ್ ಮುಂತಾದ ಗುಣಮಟ್ಟದ ಉತ್ಪನ್ನಗಳನ್ನು ಮತ್ತಷ್ಟು ರವಾನಿಸಲಾಗುವುದು. ಇದಕ್ಕೆ ಬ್ರಿಟನ್ನಿನ ಸಹಕಾರವೂ ನಮಗೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಾರುಕಟ್ಟೆ ವಿಸ್ತರಣೆ ನಡೆಯುತ್ತಿದೆ ಎಂದರು.
ಕೆಎಸ್‌ಡಿಎಲ್ ಸಂಸ್ಥೆಯು ಕಳೆದ ಸಾಲಿನಲ್ಲಿ 416 ಕೋಟಿ ರೂ. ಲಾಭ ಗಳಿಸಿದ್ದು, 2028ರ ವೇಳೆಗೆ ವಾರ್ಷಿಕ ವಹಿವಾಟನ್ನು 3,000 ಕೋಟಿ ರೂ.ಗಳಿಗೆ ಕೊಂಡೊಯ್ಯಲಾಗುವುದು. ಜತೆಗೆ ವಿಜಯಪುರದಲ್ಲಿ 50 ಎಕರೆ ವಿಸ್ತೀರ್ಣದಲ್ಲಿ ಉತ್ಪಾದನಾ ಘಟಕವನ್ನೂ ಆರಂಭಿಸಲಾಗುವುದು. ಸದ್ಯದಲ್ಲೇ ಸಂಸ್ಥೆಯ ವತಿಯಿಂದ ನಾನಾ ತರಹದ ಸುಗಂಧ ದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದರು.
ಈ ವೇಳೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಇದ್ದರು.