ಮಾಜಿ ಸಿಎಂ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಮತ್ತು ಇತರರ ವಿರುದ್ಧದ 12 ಕೋಟಿ ರೂ. ಬಿಡಿಎ ಕಿಕ್‌ಬ್ಯಾಕ್ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಕ್ಲೀನ್ ಚೀಟ್ ನೀಡಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯಕ್ಕೆ 'ಬಿ' ವರದಿ ಸಲ್ಲಿಸಲಾಗಿದ್ದು, ಇದು ಯಡಿಯೂರಪ್ಪ ಕುಟುಂಬಕ್ಕೆ ಸಂತಸದ ವಿಷಯವಾಗಿದೆ.
ಬೆಂಗಳೂರು: ರಾಜ್ಯದ ರಾಜಕೀಯ ವಲಯವನ್ನು ನಾಲ್ಕು ವರ್ಷಗಳ ಹಿಂದೆ ಅಲ್ಲೋಲ ಕಲ್ಲೋಲ ಮಾಡಿದ ಬಿಡಿಎ ವಸತಿ ಸಮುಚ್ಛಯ ಗುತ್ತಿಗೆ ಕಿಕ್ ಬ್ಯಾಕ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಯೇಂದ್ರ, ಉಚ್ಛಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಕುಟುಂಬದವರ ವಿರುದ್ಧದ ಆರೋಪಗಳಿಗೆ ಲೋಕಾಯುಕ್ತ ಪೊಲೀಸ್ ಕ್ಲೀನ್ ಚೀಟ್ ನೀಡಿದೆ.
25
ಆರೋಪ ಮತ್ತು ತನಿಖೆ
2020ರಲ್ಲಿ ಹೊಸಕೋಟೆ ಸಮೀಪದ ಕೊನಾದಾಸಪುರದಲ್ಲಿ 116 ಕೋಟಿ ರೂ. ವೆಚ್ಚದ ವಸತಿ ಸಮುಚ್ಛಯ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿತ್ತು. ಈ ಕಾಮಗಾರಿಯನ್ನು ಚಂದ್ರಕಾಂತ್ ರಾಮಲಿಂಗಂ ಅವರ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಹಾಗೂ ಗುತ್ತಿಗೆ ಪಡೆಯಲು ಗುತ್ತಿಗೆದಾರರು ಅಂದಿನ ಸಿಎಂ ಯಡಿಯೂರಪ್ಪ ಹಾಗೂ ಕುಟುಂಬಕ್ಕೆ ಲಂಚ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಗುತ್ತಿಗೆ ನೀಡಲು ಅಂದಿನ ಬಿಡಿಎ ಆಯುಕ್ತ ಜೆ.ಸಿ. ಪ್ರಕಾಶ್ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಲಾಗಿತ್ತು. ಗುತ್ತಿಗೆ ಸಿಗುವ ಪ್ರತಿಫಲವಾಗಿ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಹಾಗೂ ಸಂಬಂಧಿ ಸಂಜಯ್ ಶ್ರೀ ಪಾಲುದಾರಿಕೆಯ ಖಾಸಗಿ ಕಂಪನಿಗೆ, ಕೊಲ್ಕತ್ತಾ ಮೂಲದ 7 ಶೆಲ್ ಕಂಪನಿಗಳಿಂದ ಸುಮಾರು 4.5 ಕೋಟಿ ರೂ. ಹಣ ಜಮೆಯಾಗಿತ್ತು. ಒಟ್ಟಾರೆ, ಗುತ್ತಿಗೆಯಲ್ಲಿ ಯಡಿಯೂರಪ್ಪ ಕುಟುಂಬಕ್ಕೆ ಗುತ್ತಿಗೆದಾರರಿಂದ 12 ಕೋಟಿ ರೂ. ಕಿಕ್ ಬ್ಯಾಕ್ ಬಂದಿದೆ ಎಂದು ಆರೋಪಿಸಲಾಗಿತ್ತು.
35
ಲೋಕಾಯುಕ್ತ ಪೊಲೀಸರ ತನಿಖಾ ವರದಿ
ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇರುವ ಕಾರಣ ನೀಡಿ, ಲೋಕಾಯುಕ್ತ ತನಿಖಾಧಿಕಾರಿ ಮತ್ತು ಡಿವೈಎಸ್ಪಿ ಎಂ.ಎಚ್.ಸತೀಶ್ ಅವರು ಅಕ್ಟೋಬರ್ 15ರಂದು ಲೋಕಾಯುಕ್ತ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ. ಇದರಿಂದಾಗಿ ಆರೋಪಿಗಳಿಗೆ ಕ್ಲೀನ್ ಚೀಟ್ ನೀಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಅವರು ಈ ಪ್ರಕರಣವನ್ನು ಬಯಲಿಗೆಳೆದು ದೂರು ದಾಖಲಿಸಿದ್ದರು. ಈಗ ಲೋಕಾಯುಕ್ತ ನ್ಯಾಯಾಲಯವು ಅವರಿಗೆ ಆಕ್ಷೇಪಣೆ ಸಲ್ಲಿಸುವ ಅವಕಾಶ ನೀಡಿದೆ.
ನಾಲ್ಕು ವರ್ಷಗಳ ಹಿಂದೆ ಈ ಪ್ರಕರಣ ಬಹಿರಂಗವಾದಾಗ ರಾಜ್ಯ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿತ್ತು. ಯಡಿಯೂರಪ್ಪ ಹಾಗೂ ಕುಟುಂಬದವರ ವಿರುದ್ಧ ಬಂದ ಆಪಾದನೆ ವಿರೋಧಿಗಳಿಗೆ ದೊಡ್ಡ ಅಸ್ತ್ರವಾಗಿತ್ತು. ಆದರೆ ಇದೀಗ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಯಡಿಯೂರಪ್ಪ ಮತ್ತು ಪುತ್ರರಿಗೆ ಕ್ಲೀನ್ ಚೀಟ್ ದೊರೆತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. “ವಿರೋಧಿಗಳಿಗೆ ಹೊಡೆತ, ಬಿಜೆಪಿ ಶಿಬಿರಕ್ಕೆ ಶಕ್ತಿ” ಎಂಬ ಮಾತುಗಳು ಕೇಳಿಬರುತ್ತಿವೆ. ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರುದಾರರು ಆಕ್ಷೇಪಣೆ ಸಲ್ಲಿಸಿದ ನಂತರ ಪ್ರಕರಣ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಪ್ರಸ್ತುತ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ರಾಜಕೀಯವಾಗಿ ದೊಡ್ಡ ಕಳಂಕದಿಂದ ಮುಕ್ತರಾದಂತಾಗಿದೆ.
55
ಲೋಕಾಯುಕ್ತದಿಂದ ಕಳಂಕ ಮುಕ್ತ ಆರೋಪಿಗಳ ವಿವರ ಇಂತಿದೆ
ಎ1.ಬಿ.ಎಸ್.ಯಡಿಯೂರಪ್ಪ.ಮಾಜಿ ಮುಖ್ಯಮಂತ್ರಿ
ಎ2.ಬಿ.ವೈ.ವಿಜಯೇಂದ್ರ.ಬಿಎಸ್ ವೈ ಪುತ್ರ
ಎ3.ಶಶಿಧರ್ ಮರಡಿ (ಬಿಎಸ್‌ವೈ ಮೊಮ್ಮಗ)
ಎ4.ಸಂಜಯ ಶ್ರೀ (ಬಿಎಸ್‌ವೈ ಸಂಬಂಧಿ)
ಎ5.ಚಂದ್ರಕಾಂತ್ ರಾಮಲಿಂಗಂ (ಗುತ್ತಿಗೆದಾರ)
ಎ6.ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್
ಎ7.ಬಿಡಿಎ ನಿವೃತ್ತ ಆಯುಕ್ತ ಜೆ.ಸಿ.ಪ್ರಕಾಶ್
ಎ8.ಕ್ರೆಸೆಂಟ್ ರವಿ (ಮಧ್ಯವರ್ತಿ)
ಎ9 ವಿರೂಪಾಕ್ಷ ಮರಡಿ (ಬಿಎಸ್‌ವೈ ಅಳಿಯ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ