ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಯೋಜನೆಯಂತೆ, 110.20 ಎಕರೆ ಜಮೀನನ್ನು 29 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ.
ಕುಣಿಗಲ್ ಸ್ಟಡ್ ಫಾರಂ ಪ್ರದೇಶಕ್ಕೆ ಸ್ಥಳಾಂತರಿಸುವ ಮಹತ್ವದ ನಿರ್ಧಾರ
ಬೆಂಗಳೂರು: ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್ (ರೇಸ್‌ಕೋರ್ಸ್) ಅನ್ನು ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿರುವ ಕುಣಿಗಲ್ ಸ್ಟಡ್ ಫಾರಂ ಪ್ರದೇಶಕ್ಕೆ ಸ್ಥಳಾಂತರಿಸುವ ಮಹತ್ವದ ನಿರ್ಧಾರವನ್ನು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರದಂತೆ, ಕುಣಿಗಲ್ ಸ್ಟಡ್ ಫಾರಂನಲ್ಲಿರುವ 101.24 ಎಕರೆ ಭೂಮಿ ಹಾಗೂ ಬೆಂಗಳೂರು–ಹಾಸನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹೆಚ್ಚುವರಿ 8.36 ಎಕರೆ ಜಮೀನು ಸೇರಿ ಒಟ್ಟು 110.20 ಎಕರೆ ಪ್ರದೇಶವನ್ನು ಬೆಂಗಳೂರು ಟರ್ಫ್ ಕ್ಲಬ್‌ಗೆ 29 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಈ ಜಮೀನಿಗೆ ಮಾರ್ಗಸೂಚಿ ದರದ ಶೇ.2.5 ರಷ್ಟು ವಾರ್ಷಿಕ ಬಾಡಿಗೆ ವಿಧಿಸಲಾಗುತ್ತದೆ.
27
ಎರಡು ವರ್ಷಗಳಲ್ಲಿ ಸ್ಥಳಾಂತರಕ್ಕೆ ಟರ್ಫ್ ಕ್ಲಬ್ ಒಪ್ಪಿಗೆ
ಬೆಂಗಳೂರು ಟರ್ಫ್ ಕ್ಲಬ್ ಮಂಡಳಿಯು, ಸಂಪುಟದ ತೀರ್ಮಾನದ ಹಿನ್ನೆಲೆಯಲ್ಲಿ, ಎರಡು ವರ್ಷಗಳೊಳಗೆ ಸಂಪೂರ್ಣವಾಗಿ ಕುಣಿಗಲ್‌ಗೆ ಸ್ಥಳಾಂತರಗೊಳ್ಳಲು ಸಮ್ಮತಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಕುಣಿಗಲ್‌ನಲ್ಲಿ ರೇಸ್‌ಕೋರ್ಸ್ ಚಟುವಟಿಕೆಗಳಿಗೆ ಅಗತ್ಯವಾದ ಬಹುತೇಕ ಮೂಲಸೌಕರ್ಯಗಳು ಸಿದ್ಧವಾಗಿವೆ.
37
1923ರ ಇತಿಹಾಸದ ರೇಸ್‌ಕೋರ್ಸ್
ಬೆಂಗಳೂರು ರೇಸ್‌ಕೋರ್ಸ್‌ಗೆ ಶತಮಾನಕ್ಕೂ ಅಧಿಕ ಇತಿಹಾಸವಿದ್ದು, 1923ರ ಸೆಪ್ಟೆಂಬರ್ 9ರಂದು ಮೈಸೂರು ಮಹಾರಾಜರು ಕುದುರೆ ಓಟದ ಸ್ಪರ್ಧೆ ಹಾಗೂ ತರಬೇತಿಗಾಗಿ 83.14 ಎಕರೆ ಜಮೀನನ್ನು ಮೀಸಲಿಟ್ಟಿದ್ದರು. ನಂತರ ಈ ಜಾಗವು ಲೋಕೋಪಯೋಗಿ ಇಲಾಖೆ (PWD) ವ್ಯಾಪ್ತಿಗೆ ಬಂದಿತ್ತು. ರೇಸ್‌ಕೋರ್ಸ್ ಸ್ಥಳಾಂತರವಾದ ಬಳಿಕ, ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಈ ಅಮೂಲ್ಯ ಜಾಗವನ್ನು ಹಸಿರು ಪ್ರದೇಶ (Green Zone)ವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಟರ್ಫ್ ಕ್ಲಬ್‌ಗೆ ನೀಡಲಾಗಿದ್ದ 83.14 ಎಕರೆ ಜಮೀನಿಗೆ ಸಂಬಂಧಿಸಿದಂತೆ 2010ರ ಜನವರಿ 1ರಿಂದ ಬಾಡಿಗೆ ದರ ಪರಿಷ್ಕರಣೆ ಆಗಿರಲಿಲ್ಲ ಎಂಬುದನ್ನು ಆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, 2010ರಿಂದ ಅನ್ವಯವಾಗುವಂತೆ ಆಯಾ ಸಾಲಿನ ಒಟ್ಟು ಆದಾಯದ ಶೇ.2 ರಷ್ಟು ಮೊತ್ತವನ್ನು ಬಾಡಿಗೆಯಾಗಿ ವಸೂಲಿ ಮಾಡಲು ಸಂಪುಟ ತೀರ್ಮಾನಿಸಿದೆ.
57
ಸುಮಾರು ₹39.45 ಕೋಟಿ ಬಾಡಿಗೆ
2009ರವರೆಗೆ ಬೆಂಗಳೂರು ಟರ್ಫ್ ಕ್ಲಬ್ ವರ್ಷಕ್ಕೆ ಕೇವಲ ₹25.94 ಲಕ್ಷ ಮಾತ್ರ ಬಾಡಿಗೆ ಪಾವತಿಸುತ್ತಿತ್ತು. ನಂತರವೂ ಯಾವುದೇ ಪರಿಷ್ಕರಣೆ ಇಲ್ಲದೆ ಅದೇ ಮೊತ್ತವನ್ನು ಪಾವತಿಸಲಾಗುತ್ತಿದ್ದು, ಇದರಿಂದ ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆಗೆ ಭಾರೀ ಆರ್ಥಿಕ ನಷ್ಟ ಉಂಟಾಗಿತ್ತು. ಸಂಪುಟದ ಲೆಕ್ಕಾಚಾರದ ಪ್ರಕಾರ, ಆದಾಯದ ಶೇ.2 ರಷ್ಟು ಬಾಡಿಗೆ ವಿಧಿಸಿದ್ದರೆ ವಾರ್ಷಿಕ ಸುಮಾರು ₹39.45 ಕೋಟಿ ಬಾಡಿಗೆ ಪಾವತಿಸಬೇಕಾಗಿತ್ತು. ಹೀಗಾಗಿ ಹಿಂದಿನ ಸಾಲುಗಳ ಆದಾಯವನ್ನು ಆಧರಿಸಿ ಬಾಕಿ ಬಾಡಿಗೆ ಸಂಗ್ರಹಿಸಲು ಸರ್ಕಾರ ತೀರ್ಮಾನಿಸಿದೆ.
67
ಸ್ಥಳಾಂತರದ ಹಿಂದಿನ ಕಾರಣವೇನು?
ಬೆಂಗಳೂರು ಟರ್ಫ್ ಕ್ಲಬ್ ನಗರ ಮಧ್ಯಭಾಗದಲ್ಲಿರುವುದರಿಂದ, ವಿಶೇಷವಾಗಿ ರೇಸ್ ದಿನಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ. ಇದಕ್ಕೆ ಪರ್ಯಾಯವಾಗಿ, ಕುಣಿಗಲ್‌ನಲ್ಲಿ 1992ರಿಂದಲೇ ಖಾಸಗಿ ಸಂಸ್ಥೆಯೊಂದು “ಕುಣಿಗಲ್ ಸ್ಟಡ್” ಹೆಸರಿನಲ್ಲಿ ರೇಸ್‌ಕೋರ್ಸ್ ನಡೆಸುತ್ತಿದ್ದು, ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳು ಈಗಾಗಲೇ ಲಭ್ಯವಿವೆ. ಅಲ್ಲದೆ, ಕುಣಿಗಲ್ ಪ್ರದೇಶದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯೂ ಇಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಬೆಂಗಳೂರು ರೇಸ್‌ಕೋರ್ಸ್‌ನ್ನು ಕುಣಿಗಲ್‌ಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕುಣಿಗಲ್: ಪಟ್ಟಣದ ಸ್ಟಡ್ ಫಾರಂ ಜಾಗದಲ್ಲಿ ಬೆಂಗಳೂರಿನ ರೇಸ್ ಕೋರ್ಸ್ ಪ್ರಾರಂಭಿಸುವ ಕುರಿತು ಪ್ರತಿಕ್ರಿಯೆ ನೀಡಿದ ಕುಣಿಗಲ್ ಶಾಸಕ ಡಾ. ರಂಗನಾಥ್ ರೇಸ್ ಕೋರ್ಸ್ ನಿಂದ ಸ್ಥಳೀಯ ಅಭಿವೃದ್ಧಿಗಳು ಆಗಲಿದ್ದು ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ. ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಇತಿಹಾಸ ಪ್ರಸಿದ್ಧ ಪಾರಂಪರಿಕ ಕುದುರೆಗಳ ತಾಣವಾದ 420 ಎಕರೆ ಪ್ರದೇಶದಲ್ಲಿರುವ ಈ ಜಾಗದ ಬಗ್ಗೆ ಸಾಕಷ್ಟು ಕುತೂಹಲವದೆ. ಇಲ್ಲಿನ ಕುದುರೆಗಳನ್ನು ಬೀಜದ ಕುದುರೆ ಎಂದು ಸಹ ಕರೆಯಲಾಗುತ್ತದೆ. ಮತ್ತು ಈ ಸ್ಥಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ತಾಣವಾಗಿದೆ. 111 ಎಕ್ರೆ ಪ್ರದೇಶದಲ್ಲಿ 250 ಕುದುರೆಗಳನ್ನು ತಳಿ ಸಂವರ್ಧನೆಗಾಗಿ ಬಳಸಲಾಗುತ್ತಿದ್ದು ನೂರಾರು ಮಂದಿ ಕಾರ್ಮಿಕರು ಪ್ರತಿದಿನ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಯೋಜನೆಯಿಂದ ವಾರ್ಷಿಕ 500 ಕೋಟಿಗಿಂತ ಹೆಚ್ಚು ಆದಾಯ ಬರಲಿದ್ದು ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯಾಗಲಿದೆ. ಈ ಯೋಜನೆಯಿಂದ ಕೆಲವರಿಗೆ ತೊಂದರೆ ಆಗಬಹುದು ಅಂತಹ ಸಮಸ್ಯೆಗಳನ್ನು ಬಗೆಹರಿಸೋಣ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ