ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅನ್ನೋದು ಉತ್ತರಕನ್ನಡ ಜಿಲ್ಲೆಯ ಜನರ ದೊಡ್ಡ ಕನಸ್ಸು. ಜಿಲ್ಲೆಯಲ್ಲಿ ಹಲವಾರು ವರ್ಷದಿಂದ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ.
ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ಸಾವಿರಾರು ಜನರು ಸಾವನ್ನಪ್ಪಿದ್ದು, ಸರ್ಕಾರ ಕಣ್ಣು ತೆರೆಯುವಂತೆ ಹೋರಾಟಗಳು ನಡೆಯುತ್ತಲೇ ಇವೆ. ಪ್ರತೀ ಚುನಾವಣೆಯಲ್ಲಿ ಇದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅನ್ನೋದು ಚುನಾವಣೆಯ ವಿಷಯ ವಸ್ತು ಸಹ ಆಗಿದ್ರೂ ಚುನಾವಣೆ ಮುಗಿದ ಬಳಿಕ ಯಾವ ಸರಕಾರ ಕೂಡಾ ಸ್ಪಂದಿಸಿಲ್ಲ.
ಇದೀಗ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಬಂಗಾರಮಕ್ಕಿ ಮಹಾಸಂಸ್ಥಾನದ ಶ್ರೀ ಮಾರುತಿ ಗೂರೂಜಿ ಬೆಂಗಳೂರಿನ ಪ್ರಸಿದ್ದ ಸುಧೀಕ್ಷ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಜಿಲ್ಲೆಯಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಜಿಲ್ಲೆಯ ಹೊನ್ನಾವರದ ಅಳ್ಳಂಕಿ ಗ್ರಾಮದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತಿದ್ದು ಇಂದು ಸುಮಾರು 5.30 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ಮುಂದಾದ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಸುಮಾರು 120ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದಲ್ಲಿ ಸುಮಾರು 150 ಬೆಡ್ ನ ಆಸ್ಪತ್ರೆ ನಿರ್ಮಿಸಿ ನಂತರ ಹಂತ ಹಂತವಾಗಿ ಮೆಡಿಕಲ್ ಕಾಲೇಜು ನಿರ್ಮಿಸುವ ಮೂಲಕ 3 ಸಾವಿರ ಬೆಡ್ ಆಸ್ಪತ್ರೆ, ಏರ್ ಅಂಬ್ಯುಲೆನ್ಸ್ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸೇವೆ ಕೊಡಲು ಚಿಂತನೆ ನಡೆಸಲಾಗಿದೆ.