Screenshots on Mobile May Harm Memory Binghamton University Study ಪ್ರತಿಯೊಂದಕ್ಕೂ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಅಭ್ಯಾಸವು ನಿಮ್ಮ ಸ್ಮರಣಶಕ್ತಿಯನ್ನು ದುರ್ಬಲಗೊಳಿಸಬಹುದು ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ.
ಇತ್ತೀಚಿಗೆ ಯಾವುದನ್ನು ಬರೆದುಕೊಳ್ಳುವ ಅಥವಾ ನೋಟ್ಸ್ ಮಾಡಿಕೊಳ್ಳುವ ಅಭ್ಯಾಸವಿಲ್ಲ. ಪ್ರತಿಯೊಬ್ಬರ ಬಳಿ ಸ್ಮಾರ್ಟ್ ಫೋನ್‌ಗಳಿವೆ. ಯಾವುದೇ ಪ್ರಮುಖ ಮಾಹಿತಿ, ಚಿತ್ರ ಅಥವಾ ಸಂದೇಶಗಳು ಕಂಡರೆ ತಕ್ಷಣ ಸ್ಕ್ರೀನ್ ಶಾಟ್ ತೆಗೆಕೊಳ್ಳಲಾಗುತ್ತೆ. ಸ್ಕ್ರೀನ್ ಶಾಟ್ ತೆಗೆದುಕೊಳ್ತಾರೆ. ಹಿಂದೆಲ್ಲ ಮಾಹಿತಿ ಸಂಗ್ರಹಿಸಲು ನೋಟ್ಸ್ ಬರೆದುಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ನೋಟ್ಸ್ ಪೆನ್ನು ಹಿಡಿಯುವ ಅಭ್ಯಾಸವೇ ಮರೆತುಹೋಗಿದೆ. ಏನನ್ನಾದ್ರೂ ನೆನಪಲ್ಲಿಟ್ಟುಕೊಳ್ಳಲು ಸ್ಕ್ರೀನ್ ಶಾಟ್ ತೆಗೆದುಕೊಳ್ತಾರೆ. ಹೀಗೆ ಮಾಡುವುದರಿಂದ ನೆನಪಿನ ಶಕ್ತಿ ಇರುತ್ತಾ? ನಾಶವಾಗುತ್ತಾ? ಹೊಸ ಅಧ್ಯಯನ ವರದಿಯೊಂದು ಶಾಕಿಂಗ್ ಮಾಹಿತಿ ನೀಡಿದೆ.
ಸ್ಕ್ರೀನ್ ಶಾಟ್ ಅಭ್ಯಾಸದಿಂದ ಸ್ಮರಣಶಕ್ತಿ ದುರ್ಬಲ!
ಹೌದು ಹೊಸ ಅಧ್ಯಯನ ವರದಿ ಪ್ರಕಾರ ಪದೇಪದೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಅಭ್ಯಾಸವು ವಾಸ್ತವವಾಗಿ ಸ್ಮರಣಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಅಮೆರಿಕದ ಬಿಂಗ್ ಹ್ಯಾಮ್ಟನ್ ವಿಶ್ವವಿದ್ಯಾಲಯ ಈ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.
25
ಸಂಶೋಧನ ವರದಿಯಲ್ಲೇನಿದೆ?
ಪದೇಪದೆ ಫೋಟೋ ತೆಗೆದುಕೊಳ್ಳುವ, ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಅಭ್ಯಾಸವು ಮನುಷ್ಯನ ಸ್ಮರಣಶಕ್ತಿ ಸುಧಾರಿಸುವ ಬದಲು ದುರ್ಬಲಗೊಳಿಸುತ್ತದೆ ಎಂದು ವಿಜ್ಞಾನಿಗಳು, ಸಂಶೋಧನೆ ಮೂಲಕ ಕಂಡುಕೊಂಡಿದ್ದಾರೆ. ಸರಳವಾಗಿ ಹೇಳಬೇಕೆಂದರೆ ಫೋಟೋ ತೆಗೆದುಕೊಳ್ಳುವ ವ್ಯಕ್ತಿಯು ಅದನ್ನು ಎಚ್ಚರಿಕೆಯಿಂದ ನೋಡಿ ಮುಂದೆ ಸಾಗುವ ವ್ಯಕ್ತಿಯಷ್ಟು ಅದರ ಬಗ್ಗೆ ನೆನಪಿರುವುದಿಲ್ಲ. ಅರ್ಥಾಗಲಿಲ್ಲವೇ? ದಾರಿಯಲ್ಲಿ ಹೋಗುವಾಗ ಒಂದು ಮಾಹಿತಿ ಕಾಣುತ್ತೆ. ಅದರಲ್ಲಿ ಒಬ್ಬ ವ್ಯಕ್ತಿ ಆ ಮಾಹಿತಿಯನ್ನ ಫೋಟೋದಲ್ಲಿ ಕ್ಲಿಕ್ಕಿಸಿಕೊಳ್ಳುತ್ತಾನೆ. ಮತ್ತೊಬ್ಬ ಎಚ್ಚರಿಕೆಯಿಂದ ಆ ಸುದ್ದಿ ಓದುತ್ತಾನೆ. ಇಬ್ಬರಲ್ಲಿ ಎಚ್ಚರಿಕೆಯಿಂದ ಓದುವವನ ಸ್ಮರಣಶಕ್ತಿ ಚುರುಕಾಗಿರುತ್ತೆ. ಫೋಟೋ ತೆಗೆದವನು ಅದನ್ನ ತೆಗೆದ ಬಳಿಕ ಓದದೇ ಇರೋದರಿಂದ ಅದು ಗ್ಯಾಲರಿಯಲ್ಲೇ ಉಳಿದುಕೊಂಡು ಕೊನೆಗೊಂದು ಡಿಲಿಟ್ ಆಗಿರುತ್ತೆ.
35
ಪ್ರಯೋಗವನ್ನ ಹೇಗೆ ನಡೆಸಲಾಯ್ತು?
ಈ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಗೆ ವರ್ಣಚಿತ್ರಗಳು ಮತ್ತು ರೇಖಾಚಿತ್ರಗಳು ಸೇರಿದಂತೆ ಛಾಯಾಚಿತ್ರಗಳನ್ನು ತೋರಿಸಲಾಯಿತು. ಕೆಲವು ಕಲಾಕೃತಿಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಲು ಹೇಳಿದರು. ಇತರರು ಅವುಗಳನ್ನ ಫೋಟೋ ತೆಗೆದುಕೊಳ್ಳದೆ ಸರಳವಾಗಿ ಗಮನಿಸಲಾಯಿತು. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಕಲಾಕೃತಿಗಳ ಬಗ್ಗೆ ವಿವರವಾದ ಪ್ರಶ್ನೆಗಳನ್ನು ಕೇಳಲಾಯಿತು. ಫಲಿತಾಂಶ ಏನು ಬಂತೆಂದರೆ ವಿದ್ಯಾರ್ಥಿಗಳು ಸ್ಕ್ರೀನ್‌ಶಾಟ್ ಮಾಡಿದ ಛಾಯಾಚಿತ್ರಗಳ ಬಗ್ಗೆ ಕಡಿಮೆ ನೆನಪಿನಲ್ಲಿಟ್ಟುಕೊಂಡಿದ್ದರು, ಆದರೆ ಅವರು ಛಾಯಾಚಿತ್ರಗಳನ್ನು ತೆಗೆದುಕೊಳ್ಳದೆ ಕೇವಲ ಗಮನಿಸಿದವರು ಛಾಯಾಚಿತ್ರಗಳ ಬಗ್ಗೆ ಹೆಚ್ಚು ನಿಖರವಾದ ವಿವರಗಳನ್ನು ಹೊಂದಿದ್ದರು.
ಈ ಅಧ್ಯಯನದ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಅನೇಕ ವಿದ್ಯಾರ್ಥಿಗಳು ತಾವು ಸ್ಕ್ರೀನ್‌ಶಾಟ್ ಮಾಡಿದ ಫೋಟೋವನ್ನು ಮರೆತಿದ್ದರು. ಆದರೆ ಅವರು ಯಾವ ಫೋಟೋವನ್ನು ಹೊಂದಿಲ್ಲ ಎಂಬುದನ್ನು ಸ್ಪಷ್ಟವಾಗಿ ನೆನಪಿಸಿಕೊಂಡರು. ಸ್ಕ್ರೀನ್‌ಶಾಟ್ ತೆಗೆದುಕೊಂಡ ನಂತರ, ಮೆದುಳು ಆ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುವುದನ್ನು ನಿಲ್ಲಿಸುತ್ತದೆ ಎಂದು ಈ ಸಂಶೋಧನೆ ಸ್ಪಷ್ಟವಾಗಿ ತೋರಿಸಿತು.
ಸಂಶೋಧಕರ ಪ್ರಕಾರ, ಇದರ ಹಿಂದೆ ಹಲವಾರು ನಿರ್ದಿಷ್ಟ ಕಾರಣಗಳಿವೆ. ಮೊದಲ ಕಾರಣವೆಂದರೆ ಗಮನ ಬೇರೆಡೆ ಸೆಳೆಯುವುದು. ನಾವು ಫೋಟೋ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಂಡಾಗ, ನಮ್ಮ ಗಮನವು ಗುಂಡಿಗಳನ್ನು ಒತ್ತುವುದು ಮತ್ತು ಸ್ಕ್ರೀನ್ ಸರಿಮಾಡುವುದು, ಜೂಮ್ ಮಾಡುವುರ ಮೇಲೆ ಗಮನ ಕೇಂದ್ರಿಕರಿಸುತ್ತದೆ. ಆದರೆ ಈ ಶಕ್ತಿ ಹೆಚ್ಚಿಸಲು ಖರ್ಚಾಗುವುದಿಲ್ಲ. ಎರಡನೆಯ ಕಾರಣವೆಂದರೆ ಅರಿವಿನ ಆಫ್‌ಲೋಡಿಂಗ್. ಫೋನ್‌ನಲ್ಲಿ ಮಾಹಿತಿ ಸುರಕ್ಷಿತವಾಗಿದೆ ಎಂದು ಮೆದುಳಿಗೆ ಮನವರಿಕೆಯಾದಾಗ ಅದು ಅದನ್ನು ನೆನಪಿಟ್ಟುಕೊಳ್ಳುವುದನ್ನ ನಿಲ್ಲಿಸುತ್ತದೆ. ಅದಕ್ಕಾಗಿಯೇ ಜನರು ಫೋನ್ ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ ಏಕೆಂದರೆ ಅವುಗಳನ್ನು ಫೋನ್‌ನಲ್ಲಿ ಉಳಿಸಲಾಗುತ್ತದೆ.
55
ಸ್ಕ್ರೀನ್‌ಶಾಟ್‌ಗಳ ಬದಲಿಗೆ ಡೈರಿಯಲ್ಲಿ ಬರೆಯುವ ಅಭ್ಯಾಸ
ವಿಜ್ಞಾನಿಗಳು ಹೇಳುವಂತೆ, ನೀವು ಬಹಳ ಕಾಲದವರೆಗೆ ಮುಖ್ಯವಾದದ್ದು ನೆನಪಿನಲ್ಲಿ ಉಳಿಯಬೇಕೆಂದರೆ ನಿಮ್ಮ ಮೊಬೈಲ್ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಬದಲು ಅದನ್ನು ಡೈರಿಯಲ್ಲಿ ಅಥವಾ ಕಾಗದದ ಮೇಲೆ ಬರೆದಿಟ್ಟುಕೊಳ್ಳಬೇಕು. ಏಕೆಂದರೆ ಬರೆಯುವಾಗ ಮೆದುಳು ಮಾಹಿತಿಯನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳುತ್ತದೆ . ಆದರೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದರಿಂದ ಈ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಇದು ಮರೆವುಗೆ ಕಾರಣವಾಗುತ್ತೆ. ಸುಮಾರು 90 ಪ್ರತಿಶತ ಅಮೆರಿಕನ್ನರು ತಮ್ಮ ಫೋನ್‌ಗಳನ್ನು ಬಳಸುತ್ತಾರೆ. ಪ್ರತಿಯೊಬ್ಬರೂ ಪ್ರತಿದಿನ ಸುಮಾರು 20 ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಅವರ ಫೋನ್‌ಗಳಲ್ಲಿ ಈಗಾಗಲೇ ಸುಮಾರು 2,000 ಫೋಟೋಗಳು ಸಂಗ್ರಹವಾಗಿವೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಇದು ಭಾರತಕ್ಕೆ ಹೋಲಿಸಿದರೆ ಇನ್ನಷ್ಟು ಹೆಚ್ಚಾಗಿಯೇ ಇರುತ್ತದೆ. ಯಾಕೆಂದರೆ ಭಾರತದ ಯುವ ಜನರ ಬಳಿ ಸ್ಮಾರ್ಟ್ ಫೋಟೋಗಳಿವೆ. ಪ್ರತಿಯೊಂದನ್ನು ಫೋಟೋ, ಸ್ಕ್ರೀನ್ ಶಾಟ್ ತೆಗೆಯುವುದು ಸಾಮಾನ್ಯವಾಗಿದೆ.
ಮೊನ್ನೆ ಒಂದು ಘಟನೆ ನಡೆಯಿತು. ಮನೆ ಅಂಗಳಕ್ಕೆ ಕಾಡಾನೆ ಒಂದು ನುಗ್ಗಿತು. ಅದನ್ನ ಕಂಡು ಮನೆಯಾತ ಮೊಬೈಲ್ ತೆಗೆದವನೇ ಕ್ಯಾಮೆರಾ ಓಪನ್ ಮಾಡಿ ಫೋಟೊ ತೆಗೆಯಲು ನಿಂತೆ ಬಿಟ್ಟ. ಆನೆಯತ್ತ ಗಮನಹರಿಸಿ ಕ್ಯಾಮೆರಾ ಹಿಡಿದು ನಿಂತರೆ, ಅವನ ಹಿಂದೆ ಆನೆಗಳ ಹಿಂಡು! ಅದ್ಯಾವುದರ ಕಡೆಗೂ ಆತನ ಗಮನವಿಲ್ಲ! ಇದು ಎಷ್ಟು ಅಪಾಯಕಾರಿ ಅಲ್ಲವೇ?
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.