ಬಾಹ್ಯಾಕಾಶಕ್ಕೆ ಕಳಿಸಲಾಗಿದ್ದ ಮೆಂತೆ ಮತ್ತು ಹೆಸರು ಕಾಳು ಮತ್ತೆ ಧಾರವಾಡ ಕೃಷಿ ವಿವಿಗೆ‌ ವಾಪಸ್!

Published : Sep 10, 2025, 02:53 PM IST

ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಮೆಂತೆ ಮತ್ತು ಹೆಸರು ಕಾಳುಗಳು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ವಾಪಸ್ ಬಂದಿವೆ. ಬಾಹ್ಯಾಕಾಶದಲ್ಲೇ ಮೊಳಕೆಯೊಡೆದ ಈ ಕಾಳುಗಳ ಮೇಲೆ ಸಂಶೋಧನೆ ನಡೆಯಲಿದ್ದು, ಭವಿಷ್ಯದಲ್ಲಿ ಅಂತರಿಕ್ಷಯಾನಿಗಳಿಗೆ ಆಹಾರವಾಗುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು.

PREV
16

ಧಾರವಾಡ: ಬಾಹ್ಯಾಕಾಶಕ್ಕೆ ಕಳಿಸಲಾಗಿದ್ದ ಮೆಂತೆ ಮತ್ತು ಹೆಸರು ಕಾಳುಗಳು ಇದೀಗ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸುರಕ್ಷಿತವಾಗಿ ವಾಪಸ್ ಬಂದಿವೆ. ಕೃಷಿ ವಿಜ್ಞಾನದಲ್ಲಿ ಮಹತ್ವದ ಅಧ್ಯಯನಕ್ಕೆ ಇದು ಹೊಸ ದಾರಿಯನ್ನು ತೆರೆದಿದ್ದು, ವಿಜ್ಞಾನಿಗಳಲ್ಲಿ ಅಪಾರ ಕುತೂಹಲ ಹುಟ್ಟಿಸಿದೆ. ಜೂನ್ 25ರಂದು ಧಾರವಾಡ ಕೃಷಿ ವಿವಿಯ ಬಯೋ ಟೆಕ್ನಾಲಜಿ ವಿಭಾಗದ ವಿಜ್ಞಾನಿ ಡಾ. ರವಿಕುಮಾರ್ ಅವರ ಸಂಶೋಧನಾ ಯೋಜನೆಯಡಿ, ಆರು ಪ್ಲೇಟ್ ಮೆಂತೆ ಕಾಳುಗಳು ಹಾಗೂ ಆರು ಪ್ಲೇಟ್ ಹೆಸರು ಕಾಳುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಈ ಪ್ರಯೋಗದಲ್ಲಿ ಭಾರತೀಯ ಅಂತರಿಕ್ಷಯಾನಿ ಶುಭಾಂಶು ಶುಕ್ಲಾ ಅವರು ಸಹ ಭಾಗಿಯಾಗಿದ್ದರು.

26

ಶುಭಾಂಶು ಬಾಹ್ಯಾಕಾಶ ನಿಲ್ದಾಣದಲ್ಲೇ ಈ ಕಾಳುಗಳಿಗೆ ಇಂಜೆಕ್ಷನ್ ಮೂಲಕ ನೀರು ಎರಚಿ ಮೊಳಕೆ ಒಡೆಸುವ ಪ್ರಯೋಗ ನಡೆಸಿದರು. ಮೊಳಕೆಯಾದ ನಂತರ, ಕಾಳುಗಳನ್ನು -80 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂರಕ್ಷಣೆ ಮಾಡಲಾಗಿತ್ತು. ಜುಲೈ 15ರಂದು ಬಾಹ್ಯಾಕಾಶ ಯಾನ ಮುಗಿದು ಭೂಮಿಗೆ ವಾಪಸ್ ಬರಲಾಗಿದ್ದು, ಅಲ್ಲಿ ಸಂಗ್ರಹಿತವಾಗಿದ್ದ ಕಾಳುಗಳನ್ನು ಅಮೆರಿಕಾದಿಂದ ಮತ್ತೆ ಭಾರತಕ್ಕೆ ತಂದು ಧಾರವಾಡ ಕೃಷಿ ವಿವಿಗೆ ಎರಡು ದಿನಗಳ ಹಿಂದೆ ಹಸ್ತಾಂತರಿಸಲಾಯಿತು.

36

ಈಗ ಧಾರವಾಡ ಕೃಷಿ ವಿವಿಯಲ್ಲಿ ಸುರಕ್ಷಿತ

ಕಳೆದ ಎರಡು ದಿನಗಳ ಹಿಂದೆ ಧಾರವಾಡಕ್ಕೆ ತಲುಪಿದ ಈ ಕಾಳುಗಳನ್ನು ಕೃಷಿ ವಿವಿಯ ಬಯೋ ಟೆಕ್ನಾಲಜಿ ವಿಭಾಗದಲ್ಲಿ ವಿಜ್ಞಾನಿಗಳು ಮತ್ತೆ -80 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸ್ಟೊರೆಜ್ ಮಾಡಿ ಇಟ್ಟಿದ್ದಾರೆ. ಈ ಕಾಳುಗಳು ಬಾಹ್ಯಾಕಾಶದಲ್ಲೇ ಮೊಳಕೆಯಾದದ್ದು ವಿಶೇಷ ಅಂಶವೆಂದು ತಜ್ಞರು ತಿಳಿಸಿದ್ದಾರೆ.

46

ಮುಂದಿನ ಅಧ್ಯಯನ

ಡಾ. ರವಿಕುಮಾರ್ ಅವರ ಪ್ರಕಾರ, ಈಗಿನ ಹಂತದಲ್ಲಿ ಈ ಕಾಳುಗಳ ಮೇಲೆ ಎರಡು ತಿಂಗಳ ಕಾಲ ಸಮಗ್ರ ಅಧ್ಯಯನ ನಡೆಯಲಿದೆ. ಮುಖ್ಯವಾಗಿ,

  • ಬಾಹ್ಯಾಕಾಶದ ಶೂನ್ಯಗುರುತ್ವ ಪರಿಸರವು ಕಾಳುಗಳ ಬೆಳವಣಿಗೆಗೆ ಹೇಗೆ ಪರಿಣಾಮ ಬೀರಿದೆ?
  • ಅವುಗಳ ಪೋಷಕಾಂಶಗಳಲ್ಲಿ ಯಾವುದೇ ಬದಲಾವಣೆ ಉಂಟಾಗಿದೆಯೇ?
  • ಮಾನವ ದೇಹಕ್ಕೆ ಬಾಹ್ಯಾಕಾಶದಲ್ಲೇ ಬೆಳೆದ ಈ ಕಾಳುಗಳು ಸೂಕ್ತ ಆಹಾರವಾಗಬಹುದೇ?

ಎಂಬ ವಿಷಯಗಳನ್ನು ವಿಜ್ಞಾನಿಗಳು ಪರೀಕ್ಷಿಸಲಿದ್ದಾರೆ.

56

ಅಂತರಿಕ್ಷಯಾನಿಗಳಿಗೆ ಆಹಾರ ಪೂರೈಕೆ ಸಾಧ್ಯತೆ

ಭವಿಷ್ಯದಲ್ಲಿ ಬಾಹ್ಯಾಕಾಶಕ್ಕೆ ದೀರ್ಘಾವಧಿ ಪ್ರಯಾಣ ಮಾಡುವ ಅಂತರಿಕ್ಷಯಾನಿಗಳಿಗೆ ನೈಸರ್ಗಿಕ ಆಹಾರವನ್ನು ಒದಗಿಸುವಲ್ಲಿ ಇಂತಹ ಪ್ರಯೋಗಗಳು ಮಹತ್ತರ ಪಾತ್ರ ವಹಿಸಬಹುದೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಬಾಹ್ಯಾಕಾಶದಲ್ಲೇ ಮೊಳಕೆಯಾದ ಈ ಮೆಂತೆ ಮತ್ತು ಹೆಸರು ಕಾಳುಗಳು ಮುಂದಿನ ದಿನಗಳಲ್ಲಿ ಅಂತರಿಕ್ಷಯಾನಿಗಳ ಆಹಾರವಾಗುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಯಲಿದೆ.

66

ವಿಜ್ಞಾನಿಗಳ ವಿಶ್ವಾಸ

ಡಾ. ರವಿಕುಮಾರ್ ಅವರು, “ಈ ಕಾಳುಗಳನ್ನು ಸುಮಾರು ಆರು ತಿಂಗಳ ಕಾಲ -80 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಳ್ಳಬಹುದು. ನಂತರ ಅವುಗಳ ಜೀವಶಕ್ತಿ ಹಾಗೂ ಗುಣಮಟ್ಟವನ್ನು ಹೋಲಿಕೆ ಮಾಡಲಾಗುವುದು. ಇದು ಭಾರತದ ಕೃಷಿ ವಿಜ್ಞಾನ ಹಾಗೂ ಬಾಹ್ಯಾಕಾಶ ಸಂಶೋಧನೆಗೆ ಮಹತ್ತರ ಸಾಧನೆ” ಎಂದು ತಿಳಿಸಿದ್ದಾರೆ.

Read more Photos on
click me!

Recommended Stories