ಸ್ಯಾಂಡಲ್‌ವುಡ್ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಅಪರೂಪಕ್ಕೆ ಅಭಿಮಾನಿಗಳ ಮುಂದೆ ಬರುವ ರಾಧಿಕಾ ಇದೀಗ ಮತ್ತೊಂದು ಹೊಸ ಸಿನಿಮಾ ಪ್ರಾರಂಭಿಸಿದ್ದಾರೆ. ಅದು ಬಾಲಿವುಡ್ ಸ್ಟಾರ್ ಜೊತೆ ಎನ್ನುವುದೇ ವಿಶೇಷ.
ರಾಧಿಕಾ ರೊಮ್ಯಾನ್ಸ್ ಮಾಡುತ್ತಿರುವುದು ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಜೊತೆ. ಹೌದು ರಾಧಿಕಾ ಮತ್ತು ಶ್ರೇಯಸ್ ಮೊದಲ ಬಾರಿಗೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಸಿನಿಮಾರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳ ರಾಧಿಕಾ ದಿಢೀರ್ ಸಿಹಿ ಸುದ್ದಿ ನೀಡಿದ್ದು ಅಭಿಮಾನಿಗಳಿಗೆ ಸಂತಸ ನೀಡಿದೆ.
ರಾಧಿಕಾ ಮತ್ತು ಶ್ರೇಯಸ್ ಹೊಸ ಸಿನಿಮಾಗೆ ಅಜಾಗ್ರತ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ ಈಗಾಗಲೇ ಅದ್ದೂರಿ ಮುಹೂರ್ತ ಕೂಡ ನೆರವೇರಿದ್ದು ಚಿತ್ರೀಕರಣ ಪ್ರಾರಂಭವಾಗಿದೆ. ಮುಹೂರ್ತ ಫೋಟೋಗಳು ವೈರಲ್ ಆಗಿವೆ.
ಅಜಾಗ್ರತ ಸಿನಿಮಾ ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ರವಿರಾಜ್ ನಿರ್ಮಿಸುತ್ತಿದ್ದಾರೆ. ಎಂ.ಶಶಿಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿಶೇಷ ಎಂದರೆ ಏಳು ಭಾಷೆಗಳಲ್ಲೂ ಈ ಚಿತ್ರ ಬರಲಿದ್ದು ಡಬ್ ಮಾಡದೆ, ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಯಲಿದೆ ಎಂದು ಸಿನಿಮಾತಂಡ ಬಹಿರಂಗ ಪಡಿಸಿದೆ.
ರಾಧಿಕಾ ಕೊನೆಯದಾಗಿ ರವಿ ಬೊಪಣ್ಣ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ರಾಧಿಕಾ ನಟನೆಯ ಯಾವ ಸಿನಿಮಾಗಳು ಕೂಡ ಹೇಳಿಕೊಳ್ಳುವಂತ ಸಕ್ಸಸ್ ಕಾಣುತ್ತಿಲ್ಲ. ಹಾಗಾಗಿ ದೊಡ್ಡ ಬ್ರೇಕ್‌ಗಾಗಿ ರಾಧಿಕಾ ಎದುರು ನೋಡುತ್ತಿದ್ದಾರೆ.
ಸದ್ಯ ಅಜಾಗ್ರತ ಮೂಲಕ ಬರ್ತಿರುವ ರಾಧಿಕಾಗೆ ಈ ಸಿನಿಮಾ ಸಕ್ಸಸ್ ತಂದುಕೊಡುತ್ತಾ ಎಂದು ಕಾದುನೋಡಬೇಕಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.