ಶಿವನ ಮೊರೆ ಹೋದ ಗಣೇಶ: ಚಂದಮಾಮ ಶೈಲಿಯ ಸಿನಿಮಾ 'ಪಿನಾಕ' ಎಂದ ಗೋಲ್ಡನ್‌ ಸ್ಟಾರ್‌!

First Published | Jan 3, 2025, 2:07 PM IST

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಹೊಸ ಸಿನಿಮಾ ‘ಪಿನಾಕ’ ಘೋಷಣೆ ಆಗಿದೆ. ಈ ಚಿತ್ರದ ಕುರಿತು ಬಹಳ ಎಕ್ಸೈಟ್‌ ಆಗಿರುವ ಗಣೇಶ್‌ ಇದೊಂದು ಆಧುನಿಕ ಜಗತ್ತಿಗೆ ಕನೆಕ್ಟ್ ಆಗಿರುವ ಚಂದಮಾಮ ಶೈಲಿಯ ಸಿನಿಮಾ ಎಂದು ಹೇಳಿದ್ದಾರೆ. ಗಣೇಶ್ ಮಾತುಗಳು ಇಲ್ಲಿವೆ.

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಹೊಸ ಸಿನಿಮಾ ‘ಪಿನಾಕ’ ಘೋಷಣೆ ಆಗಿದೆ. ಜೊತೆಗೆ ಟೀಸರ್‌ ಕೂಡ ಬಿಡುಗಡೆ ಆಗಿದೆ. ಈ ಟೀಸರ್‌ನಲ್ಲಿ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ ಗಣೇಶ್‌. ಅವರ ಪಾತ್ರದ ಕೈಯಲ್ಲಿರುವ ತ್ರಿಶೂಲ, ಹಿಂಬಾಲಿಸಿ ಬರುವ ನಂದಿ ಎಲ್ಲವೂ ಶಿವನನ್ನು ಹೋಲುತ್ತದೆ. ಪಿನಾಕ ಎಂದರೆ ಶಿವನಿಗೆ ಇರುವ ಮತ್ತೊಂದು ಹೆಸರು ಕೂಡ. ಅಲ್ಲಿಗೆ ಗಣೇಶ್‌ ತಮ್ಮ ಹೊಸ ಸಿನಿಮಾದಲ್ಲಿ ಶಿವನ ಮೊರೆ ಹೋಗಿದ್ದಾರೆ. ಈ ಚಿತ್ರದ ಕುರಿತು ಬಹಳ ಎಕ್ಸೈಟ್‌ ಆಗಿರುವ ಗಣೇಶ್‌ ಇದೊಂದು ಆಧುನಿಕ ಜಗತ್ತಿಗೆ ಕನೆಕ್ಟ್ ಆಗಿರುವ ಚಂದಮಾಮ ಶೈಲಿಯ ಸಿನಿಮಾ ಎಂದು ಹೇಳಿದ್ದಾರೆ. ಗಣೇಶ್ ಮಾತುಗಳು ಇಲ್ಲಿವೆ.

- ಕೆಲವು ಕತೆಗಳು ಪುರಾಣ ಕತೆಗಳು ಅಂದುಕೊಂಡರೂ ಅದಕ್ಕೆ ಐತಿಹಾಸಿಕ ಮಹತ್ವ ಇರುತ್ತದೆ. ಇದು ಪುರಾಣ ಮತ್ತು ಇತಿಹಾಸ ಎರಡರ ಸಮ್ಮಿಶ್ರಣ ಇರುವ ಕಥೆ. ಪ್ರತಿಯೊಬ್ಬರಲ್ಲೂ ಎರಡೂ ವಿಶಿಷ್ಟ ಶಕ್ತಿಗಳಿರುತ್ತವೆ. ಆ ಕುರಿತು ಈ ಸಿನಿಮಾ ಮಾತನಾಡುತ್ತದೆ.

Tap to resize

- ನಿರ್ಮಾಪಕ ವಿಶ್ವಪ್ರಸಾದ್‍ ಜೊತೆಗೆ ಒಂದು ಚಿತ್ರ ಮಾಡಬೇಕೆಂಬ ಪ್ರಸ್ತಾಪ ಬಂದಾಗ ಅವರ ಬಳಿ ಅವರೇ ನಿರ್ಮಿಸಿದ ‘ಕಾರ್ತಿಕೇಯ 2’ ಚಿತ್ರದ ಬಗ್ಗೆ ಹೇಳಿದೆ. ನಮ್ಮ ಚಂದಮಾಮ ಶೈಲಿಯ ಕಥೆಯನ್ನು ಆಧುನಿಕ ಜಗತ್ತಿಗೆ ಹೊಂದುವಂತೆ ಕತೆ ಯಾಕೆ ಮಾಡಬಾರದು ಎಂಬ ಐಡಿಯಾ ಹೇಳಿದಾಗ ಅವರು ಈ ಕಥೆಯ ಎಳೆ ಹೇಳಿದರು. ಬಹಳ ಇಷ್ಟವಾಯಿತು. ಈ ಕತೆ ಸುಮಾರು 500 ವರ್ಷಗಳ ಹಿಂದೆ ಕಥೆ ಶುರುವಾಗಿ ಈ ಕಾಲದವರೆಗೆ ಬರುತ್ತದೆ.

- ಇಂಥದ್ದೊಂದು ಕತೆಗಾಗಿ ನಾನು ಬಹಳ ಸಮಯದಿಂದ ಕಾಯುತ್ತಿದ್ದೆ. ಈ ಥರದ ಕಥೆಗಳನ್ನು ಯಾರೂ ತಂದಿರಲಿಲ್ಲ. ಈಗ ಈ ಕಥೆ ಮತ್ತು ಇಂಥದ್ದೊಂದು ಪ್ರಯೋಗ ಮಾಡುವ ನಿರ್ಮಾಪಕರು ಸಿಕ್ಕಿದ್ದಾರೆ.
 

- ‘ಮುಂಗಾರು ಮಳೆ’ಯಿಂದ ಇಲ್ಲಿಯವರೆಗೂ ಮಾಡಿದ ಪಾತ್ರಗಳ ಬಗ್ಗೆ ನನಗೆ ಖುಷಿ ಇದೆ. ಇದು ಅವೆಲ್ಲಕ್ಕಿಂತ ಬೇರೆ ಆಯಾಮದ ಪಾತ್ರ.

- ಕಳೆದ ಒಂದೂವರೆ ವರ್ಷಗಳಿಂದ ಈ ಚಿತ್ರದ ಬರವಣಿಗೆ ಕೆಲಸ ನಡೆಯುತ್ತಿದೆ. ಈಗ ಚಿತ್ರಕಥೆ ಸಂಪೂರ್ಣವಾಗಿದ್ದು ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

- ಇದೊಂದು ಸಾಹಸಮಯ ಥ್ರಿಲ್ಲರ್‌ ಚಿತ್ರ. ಮೇಲ್ನೋಟಕ್ಕೆ ಅಘೋರಿಯ ಪಾತ್ರ ಎಂದನಿಸಿದರೂ ಆಳದಲ್ಲ ಹಾಗಿಲ್ಲ. ಸಾಕಷ್ಟು ಕಾಮಿಡಿ ಅಂಶಗಳೂ ಇವೆ.

‘ಪಿನಾಕ’ ಚಿತ್ರವನ್ನು ನೃತ್ಯ ನಿರ್ದೇಶಕರಾಗಿದ್ದ ಧನಂಜಯ್ ನಿರ್ದೇಶಿಸುತ್ತಿದ್ದಾರೆ. ತೆಲುಗಿನಲ್ಲಿ ‘ಕಾರ್ತಿಕೇಯ 2’, ‘ವೆಂಕಿ ಮಾಮಾ’, ‘ಓ ಬೇಬಿ’ ಮುಂತಾದ ಚಿತ್ರ ನಿರ್ಮಾಣ ಮಾಡಿದ್ದ ವಿಶ್ವಪ್ರಸಾದ್ ನಿರ್ಮಿಸುತ್ತಿದ್ದಾರೆ.

ಧನಂಜಯ್‍, ‘ಗಣೇಶ್‍ ಎಷ್ಟು ತಮಾಷೆಯಾಗಿ ಇರುತ್ತಾರೋ, ಅಷ್ಟೇ ಗಂಭೀರವಾಗಿಯೂ ಇರಬಲ್ಲರು. ಆ ಎರಡೂ ಮುಖಗಳನ್ನು ತೋರಿಸುವ ಪ್ರಯತ್ನ ಈ ಸಿನಿಮಾ. ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಇರುವ ಚಿತ್ರ’ ಎಂದರು. ನಿರ್ಮಾಪಕ ವಿಶ್ವಪ್ರಸಾದ್‍, ‘ಅತೀಂದ್ರಿಯ ಶಕ್ತಿ ಮತ್ತು ಅಧ್ಯಾತ್ಮವನ್ನು ಸೇರಿಸಿ ಹೆಣೆದಿರುವ ಕಥೆ’ ಎಂದರು. ‘ಪಿನಾಕ’ ಕನ್ನಡ ಮತ್ತು ತೆಲುಗಿನಲ್ಲಿ ಮೂಡಿಬರುತ್ತಿದೆ.

Latest Videos

click me!