ಟೈಮ್ ಮ್ಯಾಗಜೀನ್ ಇತ್ತೀಚೆಗೆ 2023 ರಲ್ಲಿ ವಿಶ್ವದ 100 ಅತ್ಯುತ್ತಮ ಕಂಪನಿಗಳ ಪಟ್ಟಿಯನ್ನು ಬಹಿರಂಗಪಡಿಸಿದ್ದು, ಇನ್ಫೋಸಿಸ್ ಈ ಪಟ್ಟಿಯಲ್ಲಿನ ಏಕೈಕ ಭಾರತೀಯ ಸಂಸ್ಥೆಯಾಗಿದೆ. ಜಗತ್ತಿನ ಟೆಕ್ ದೈತ್ಯ ಕಂಪನಿಗಳು ಮೊದಲ ನಾಲ್ಕು ಶ್ರೇಯಾಂಕಗಳಲ್ಲಿದೆ.
ಮೈಕ್ರೋಸಾಫ್ಟ್, ಆ್ಯಪಲ್, ಗೂಗಲ್ ಪೋಷಕ ಕಂಪನಿ ಆಲ್ಫಬೆಟ್ ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳು (ಹಿಂದೆ ಫೇಸ್‌ಬುಕ್) ಟೈಮ್ ಮ್ಯಾಗಜೀನ್‌ನ ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಅಗ್ರ ನಾಲ್ಕು ಸಂಸ್ಥೆಗಳಾಗಿವೆ. ಇನ್ನು, TIME 100 ಅತ್ಯುತ್ತಮ ಕಂಪನಿಗಳಲ್ಲಿ ಬೆಂಗಳೂರು ಮೂಲದ ವೃತ್ತಿಪರ ಸೇವೆಗಳ ದೈತ್ಯ ಇನ್ಫೋಸಿಸ್ ಮಾತ್ರ ಭಾರತೀಯ ಕಂಪನಿ ಎನಿಸಿಕೊಂಡಿದೆ.
750 ಜಾಗತಿಕ ಕಂಪನಿಗಳಲ್ಲಿ ಇನ್ಫೋಸಿಸ್ 64 ನೇ ಸ್ಥಾನದಲ್ಲಿದೆ. ಇನ್ನು, ಅಗ್ರ 100 ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕಂಪನಿಯಾಗಿದ್ದು, ಇನ್ಫೋಸಿಸ್ ಕೂಡ ಇದನ್ನು ಖಚಿತಪಡಿಸಲು ಟ್ವೀಟ್ ಮಾಡಿದೆ.
1981 ರಲ್ಲಿ ಏಳು ಎಂಜಿನಿಯರ್‌ಗಳಿಂದ ಸ್ಥಾಪಿಸಲ್ಪಟ್ಟ ಇನ್ಫೋಸಿಸ್ ಇಂದು ಎರಡನೇ ಅತಿದೊಡ್ಡ ಭಾರತೀಯ ಐಟಿ ಕಂಪನಿಯಾಗಿದೆ. ಇದು ಪ್ರಪಂಚದಾದ್ಯಂತ 3 ಲಕ್ಷಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದು, ಈ ಪೈಕಿ ಹೆಚ್ಚಿನವರು ಭಾರತದಲ್ಲಿ ನೆಲೆಸಿದ್ದಾರೆ. ಇದು ಪ್ರಸ್ತುತ 6 ಟ್ರಿಲಿಯನ್ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಕ್ಯಾಪ್ ಹೊಂದಿದೆ. ಹಾಗೂ, ಇನ್ಫೋಸಿಸ್ ಯುಎಸ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಮೊದಲ ಭಾರತೀಯ ಕಂಪನಿಯಾಗಿದೆ.
ಇನ್ಫೋಸಿಸ್ ಅಗ್ರ 100 ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕಂಪನಿ ಮಾತ್ರವಲ್ಲದೆ ಪಟ್ಟಿಯಲ್ಲಿರುವ ಅಗ್ರ 3 ವೃತ್ತಿಪರ ಸೇವೆಗಳ ಕಂಪನಿಗಳಲ್ಲಿ ಒಂದಾಗಿದೆ. ಉಳಿದ ಎರಡು ಆಕ್ಸೆಂಚರ್ (4 ನೇ ಶ್ರೇಯಾಂಕ) ಮತ್ತು ಡೆಲಾಯ್ಟ್ (36 ನೇ ಶ್ರೇಯಾಂಕ) ಆಗಿದೆ.
ಟಾಪ್ 750 ಪಟ್ಟಿಯಲ್ಲಿ 8 ಭಾರತೀಯ ಕಂಪನಿಗಳು
ಒಟ್ಟಾರೆಯಾಗಿ, ಟೈಮ್ ಮ್ಯಾಗಜೀನ್ ಬಿಡುಗಡೆ ಮಾಡಿದ 750 ಕಂಪನಿಗಳ ಪಟ್ಟಿಯಲ್ಲಿ 8 ಭಾರತೀಯ ಕಂಪನಿಗಳು ಕಾಣಿಸಿಕೊಂಡಿದೆ. ಇನ್ಫೋಸಿಸ್( 64 ರ‍್ಯಾಂಕ್ ) ಜೊತೆಗೆ ವಿಪ್ರೋ 174, ಮಹೀಂದ್ರಾ ಗ್ರೂಪ್ 210, ರಿಲಯನ್ಸ್ ಇಂಡಸ್ಟ್ರೀಸ್ 248, ಎಚ್‌ಸಿಎಲ್ 262, ಎಚ್‌ಡಿಎಫ್‌ಸಿ ಬ್ಯಾಂಕ್ 418, ಡಬ್ಲ್ಯುಎನ್‌ಎಸ್ ಗ್ಲೋಬಲ್ ಸರ್ವಿಸಸ್ 596 ಮತ್ತು ಐಟಿಸಿ 672 ನೇ ರ‍್ಯಾಂಕ್ ಪಡೆದುಕೊಂಡಿದೆ.
ಭಾರತ ಮೂಲದ ಸಿಇಒ ಸತ್ಯ ನಾಡೆಲ್ಲಾ ನೇತೃತ್ವದ ಮೈಕ್ರೋಸಾಫ್ಟ್ ಈ ವರ್ಷದ TIME ನ 100 ಅತ್ಯುತ್ತಮ ಕಂಪನಿಗಳ 2023 ರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇನ್ನು TIME ನ 100 ಅತ್ಯುತ್ತಮ ಕಂಪನಿಗಳ 2023 ರ ಪಟ್ಟಿಯಲ್ಲಿರೋ ಟಾಪ್ 10 ಕಂಪನಿಗಳು ಹೀಗಿದೆ..
1.ಮೈಕ್ರೋಸಾಫ್ಟ್
2. ಆ್ಯಪಲ್
3. ಆಲ್ಫಬೆಟ್
4. ಮೆಟಾ ಪ್ಲಾಟ್‌ಫಾರ್ಮ್
5. ಆಕ್ಸೆಂಚರ್
6. ಫೈಜರ್
7. ಅಮೆರಿಕನ್ ಎಕ್ಸ್‌ಪ್ರೆಸ್
8. ಎಲೆಕ್ಟ್ರಿಕ್ ಡಿ ಫ್ರಾನ್ಸ್
9. BMW ಗ್ರೂಪ್
10. ಡೆಲ್ ಟೆಕ್ನಾಲಜೀಸ್