ಪ್ರಚಾರದ ಅಬ್ಬರದ ನಡುವೆಯೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಇಂದು ಕರ್ನಾಟಕದ ದಾವಣಗೆರೆಯಲ್ಲಿನ ಹರಿಹರದ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪುನೀತರಾದರು.
ಹೊಯ್ಸಳ ಅವಧಿಯ 800 ವರ್ಷಗಳಷ್ಟು ಹಳೆಯ ವಾಸ್ತುಶಿಲ್ಪ ಹೊಂದಿರುವ ಅದ್ಭುತವಾದ ಈ ದೇಗುಲ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿರುವ ಭಾರತದ ವೈಭವೋಪೇತ, ಕೌಶಲ್ಯಯುತ ಪರಂಪರೆಗೆ ಉದಾಹರಣೆಯಂತಿದೆ ಎಂದು ಅಮಿತ್ ಶಾ ಹೇಳಿದರು.
ಹುಮ್ನಾಬಾದ್ ಮತ್ತು ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಭಾರಿ ಸಂಚಲನವಿತ್ತು. ಈ ಚುನಾವಣೆಯಲ್ಲಿ ಬಲಿಷ್ಠ ಮತ್ತು ಸ್ಥಿರವಾದ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಕರ್ನಾಟಕ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ದೇಶದಲ್ಲಿ ಮುಸ್ಲೀಂ ಸಮುದಾಯಕ್ಕೆ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವುದನ್ನು ಅಮಿತ್ ಶಾ ಬಲವಾಗಿ ಸಮರ್ಥಿಸಿಕೊಂಡರು. ಬಿಜೆಪಿಗೆ ಧರ್ಮಾಧಾರಿತ ಮೀಸಲಾತಿಯಲ್ಲಿ ನಂಬಿಕೆ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿಯೂ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಕ್ಕೆ ಅವಕಾಶ ಇಲ್ಲ.
ಆದ್ದರಿಂದ ಮುಸ್ಲೀಮರ ಮೀಸಲಾತಿಯನ್ನು ಹಿಂಪಡೆದು, ಎಸ್ಸಿಎಸ್ಟಿ, ಓಬಿಸಿ, ವಕ್ಕಲಿಗ, ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸಿದ್ದೇವೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಮತ್ತೇ ಮುಸ್ಲೀಮರಿಗೆ ಮೀಸಲಾತಿಯನ್ನು ನೀಡುವುದಾಗಿ ಹೇಳುತ್ತಿದೆ.
ಮುಸ್ಲೀಮರಿಗೆ ಪುನಃ ಮೀಸಲಾತಿಯನ್ನು ನೀಡುವುದಕ್ಕೆ ಯಾರ ಮೀಸಲಾತಿಯನ್ನು ಕಡಿತಗೊಳಿಸುತ್ತೀರಿ ಎಸ್ಸಿ ಎಸ್ಟಿಗಳ ಮೀಸಲಾತಿ ಕಡಿತಗೊಳಿಸುತ್ತೀರಾ ಒಕ್ಕಲಿಗರ ಮೀಸಲಾತಿಯನ್ನು ಕಡಿಮೆ ಮಾಡುತ್ತೀರಾ ಡಿ.ಕೆ.ಶಿವಕುಮಾರ್ ರಾಜ್ಯದ ಜನತೆಗೆ ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೂಡ ಅಧಿಕಾರಕ್ಕೆ ಬರುವುದಿಲ್ಲ ಮತ್ತು ಮುಸ್ಲೀಮರ ಮೀಸಲಾತಿ ಕೂಡ ಪುನಃ ಸ್ಥಾಪನೆಯಾಗುವುದಿಲ್ಲ ಎಂದವರು ಭವಿಷ್ಯ ನುಡಿದರು. ರಾಜ್ಯದ ಒಟ್ಟು ಕ್ಷೇತ್ರಗಳ ಪೈಕಿ ಮ್ಯಾಜಿಕ್ ನಂಬರ್‌ಗಿಂತ 15 ಕ್ಷೇತ್ರಗಳಲ್ಲಿ ಹೆಚ್ಚು ಗೆಲ್ಲುವುದರೊಂದಿಗೆ ಈಬಾರಿ ಪೂರ್ಣ ಬಹುಮತದ ಸರ್ಕಾರ ರಚಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.