ರಾಮನಗರ (ಏ.22): ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ರಾಜಕಾರಣಿಗಳು ದೇವರ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ದೈವ ಭಕ್ತರು.
ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಐದು ಗಂಟೆಗೆ ಸ್ವ-ಕ್ಷೇತ್ರ ಕನಕಪುರ ತಾಲೂಕಿನಲ್ಲಿರುವ ಮಾಳಗಾಳು ಗ್ರಾಮದ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾಜ್ಯದ ಮುಖ್ಯಮಂತ್ರಿಗಾದಿಗಾಗಿ ರುದ್ರಾಭಿಷೇಕವನ್ನು ಸಹ ಮಾಡಿಸಿದರು. ಅರ್ಕಾವತಿ ನದಿಯಲ್ಲಿ ಸ್ನಾನ ಮಾಡಿ, ಮಡಿ ಬಟ್ಟೆಯಲ್ಲಿ ದೇವಸ್ಥಾನಕ್ಕೆ ತೆರಳಿದರು.
ಬಳಿಕ ಸನ್ನಿಧಿಯಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ನೆರವೇರಿಸಿ ಈಶ್ವರನ ಆಶೀರ್ವಾದ ಪಡೆದುಕೊಂಡರು. ಇನ್ನು ಡಿ.ಕೆ.ಶಿವಕುಮಾರ್ ಸಿಎಂ ಹುದ್ದೆಗೇರಲಿ ಎಂದು ಗ್ರಾಮಸ್ಥರು ಕೂಡಾ ಪೂಜೆ ಪುರಸ್ಕಾರ ಮಾಡಿಸಿದ್ದಾರೆ.
ಡಿಕೆಶಿಗೆ ಬಿಗ್ ರಿಲೀಫ್: ಸಾಕಷ್ಟು ಕುತೂಹಲ ಮೂಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರಗೊಂಡಿದೆ. ಡಿ.ಕೆ.ಶಿವಕುಮಾರ್ ರವರ ಉಮೇದುವಾರಿಕೆ ತಿರಸ್ಕೃತಗೊಳ್ಳುವ ಆತಂಕದ ಹಿನ್ನೆಲೆಯಲ್ಲಿ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ತಾಲೂಕು ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಚುನಾವಣಾಧಿಕಾರಿ ಸಂತೋಷ್ ಹಾಗೂ ಚುನಾವಣಾ ವೀಕ್ಷಕ ಜಿ.ಎಸ್ ಪಾಂಡದಾಸ್ ನೇತೃತ್ವದಲ್ಲಿ ನಾಮಪತ್ರ ಪರಿಶೀಲನಾ ಕಾರ್ಯ ಆರಂಭಗೊಂಡಿತು. ಡಿ.ಕೆ.ಶಿವಕುಮಾರ್ ನಾಮಪತ್ರದಲ್ಲಿ ಯಾವುದೇ ಲೋಪದೋಷಗಳಿಲ್ಲ. ಎಲ್ಲವೂ ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿಗಳು ಮಾನ್ಯ ಮಾಡಿದರು. ಈ ಮೂಲಕ ನಾಮಪತ್ರ ತಿರಸ್ಕಾರಗೊಳ್ಳಬಹುದು, ರಾಜಕೀಯ ಭವಿಷ್ಯ ಏನಾಗಬಹುದು ಎಂಬ ಆತಂಕದಲ್ಲಿದ್ದ ಡಿಕೆಶಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಆಸ್ತಿ ಖರೀದಿ ಹಾಗೂ ತೆರಿಗೆ ವಿಚಾರದಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ನಾಲ್ಕು ದಿನಗಳ ಹಿಂದಷ್ಟೆಐಟಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಬರಲು ಸೂಚನೆ ನೀಡಿದ್ದರು. ಅಲ್ಲದೆ, ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸಿದ ನಂತರ ಐಟಿ ಅಧಿಕಾರಿಗಳು ಕನಕಪುರಕ್ಕೆ ಬಂದು ಆಸ್ತಿ ವಿವರದ ಮಾಹಿತಿ ಪಡೆದಿದ್ದರು.
ಈ ಎಲ್ಲಾ ಬೆಳವಣಿಗೆಗಳಿಂದಾಗಿ ನಾಮಪತ್ರ ತಿರಸ್ಕೃತವಾಗಬಹುದು ಎಂಬ ಆತಂಕ ಶಿವಕುಮಾರ್ ಅವರಿಗೆ ಕಾಡುತ್ತಿತ್ತು. ಏನೇ ಆಗಲಿ ಕ್ಷೇತ್ರ ಕೈತಪ್ಪಿ ಹೋಗಬಾರದೆಂದು ಸಹೋದರ ಡಿ.ಕೆ.ಸುರೇಶ್ ಅವರಿಂದಲೂ ಉಮೇದುವಾರಿಕೆ ಸಲ್ಲಿಸಿದ್ದರು. ಕನಕಪುರ ಕ್ಷೇತ್ರ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು. ಇದೀಗ ಡಿಕೆಶಿ ಸ್ಪರ್ಧೆ ಖಚಿತವಾಗಿದೆ. ಈಗ ನಾಮಪತ್ರ ಅಂಗೀಕಾರವಾದ ಹಿನ್ನೆಲೆಯಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಹಿಂಪಡೆಯುವ ಸಾಧ್ಯತೆ ಇದೆ.