ಮದ್ದೂರು ಶಾಸಕ ಕೆ.ಎಂ. ಉದಯ್, ಮುಂದಿನ ಚುನಾವಣೆಯಲ್ಲಿ ಪದ್ಮನಾಭನಗರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಸೋಲಿಸಲು ವೈಯಕ್ತಿಕವಾಗಿ ಶ್ರಮಿಸುವುದಾಗಿ ಸವಾಲು ಹಾಕಿದ್ದಾರೆ. ಮದ್ದೂರು ನಗರಸಭೆ ರಚನೆ ವಿಚಾರದಲ್ಲಿ ಅಶೋಕ್ ಅವರ ನಿಲುವನ್ನು ಟೀಕಿಸಿದ್ದಾರೆ.
ಮದ್ದೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಪದ್ಮನಾಭನಗರ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ ಪ್ರಬಲ ಅಭ್ಯರ್ಥಿ ಸ್ಪರ್ಧೆಗೆ ಇಳಿಸಿ ವೈಯಕ್ತಿಕ ಫಂಡ್ ಹಾಕಿ ಸೋಲಿಸುವುದಾಗಿ ಶಾಸಕ ಕೆ.ಎಂ.ಉದಯ್ ಸವಾಲು ಹಾಕಿದರು. ಪಟ್ಟಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲದಿದ್ದರೂ ಪರವಾಗಿಲ್ಲ. ಆದರೆ, ಬೆಂಗಳೂರು ಪದ್ಮನಾಭನಗರ ಕ್ಷೇತ್ರಕ್ಕೆ ಹೋಗಿ ಆರ್.ಅಶೋಕ್ ವಿರುದ್ಧ ಪ್ರಬಲ ಸ್ಪರ್ಧಿಯನ್ನು ಹಾಕಿಸಿ ಅಶೋಕ್ ಸೋಲಿಸುತ್ತೇನೆ ಎಂದರು.
210
ವಿಪಕ್ಷ ನಾಯಕರು ಬಿಟಿಎಂ ಲೇಔಟ್‌ಗೆ ಹೋಗಿ ಸ್ಪರ್ಧಿಸಲಿ
ಕಳೆದ 2023ರ ಕನಕಪುರ ವಿಧಾನಸಭಾ ಚುನಾವಣೆಯಲ್ಲಿ ಅಶೋಕ್ ಅವರು ಠೇವಣಿಯನ್ನೂ ತೆಗೆದುಕೊಳ್ಳಲಾಗಲಿಲ್ಲ. ಆದರೆ, ಪದ್ಮನಾಭನಗರ ಕ್ಷೇತ್ರದಲ್ಲಿ ಬೇರೆ ಬೇರೆ ರೀತಿಯ ಅಡ್ಜಸ್ಟ್‌ಮೆಂಟ್ ಇದೆ. ಒಬ್ಬ ನಾಯ್ಡು ನಿಲ್ಲಿಸಿದರೆ ಇನ್ನೊಬ್ಬ ನಾಯ್ಡುಗೆ ದುಡ್ಡು ಕೊಟ್ಟು ನಿಲ್ಲಿಸುತ್ತಾರೆ. ವಿಪಕ್ಷ ನಾಯಕರು ಬಿಟಿಎಂ ಲೇಔಟ್‌ಗೆ ಹೋಗಿ ಸ್ಪರ್ಧಿಸಲಿ, ಪದ್ಮನಾಭನಗರ ಬಿಟ್ಟು ರಾಮನಗರದಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.
310
ಯಾಕೆ ಠೇವಣಿ ಕಳೆದುಕೊಂಡರು?
ದೊಡ್ಡ ನಾಯಕರು ಎನ್ನುವವರು ಹಿಂದಿನ ಚುನಾವಣೆಯಲ್ಲಿ ನಿಂತು ಯಾಕೆ ಠೇವಣಿ ಕಳೆದುಕೊಂಡರು ಎಂದು ಪ್ರಶ್ನಿಸಿದ ಉದಯ್, ಇದುವರೆಗೂ ನಾನು ಪದ್ಮನಾಭನಗರ ಕ್ಷೇತ್ರದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಮುಂದೆ ಶಕ್ತಿ ಸಿಕ್ಕರೆ ಪದ್ಮನಾಭ ನಗರದಲ್ಲಿ ಚುನಾವಣೆ ಮಾಡುತ್ತೇನೆ. ಅಲ್ಲಿ ಚುನಾವಣೆಗೆ ಸ್ಪರ್ಧಿಸಲ್ಲ. ಆದರೆ, ಅಶೋಕ್ ವಿರುದ್ಧ ಚುನಾವಣೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಡಿಸಿಎಂ ಆಗಿದ್ದೆ, ಮಂತ್ರಿಯಾಗಿದ್ದೆ ಎನ್ನುವ ದೊಡ್ಡ ನಾಯಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಗೆ ವಿರೋಧವಿದ್ದರೂ ತಡೆಯಲಾಗಲಿಲ್ಲ. ಇಲ್ಲಿ ಬಂದು ನಗರಸಭೆ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಪಂಚಾಯಿತಿ ಸೇರ್ಪಡೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಹಾನ್ ನಾಯಕರು ಭಾಗಿಯಾಗಿದ್ದರು. ಗೆಜ್ಜಲಗೆರೆ, ಗೊರವನಹಳ್ಳಿಗೆ ಬಂದಿದ್ದರು. ಅವರು ಸುಳ್ಳು ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ಶಾಸಕರ ಒತ್ತಾಯದ ಮೇರೆಗೆ ನಗರಸಭೆ ಮಾಡಿದ್ದಾರೆ ಎಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.
510
ಎರಡೇ ದಿನ ಇದ್ದರೂ ಇತಿಹಾಸ ಸೇರುವ ಕೆಲಸ ಮಾಡುತ್ತೇನೆ
ನಾಲ್ಕೂ ಪಂಚಾಯಿತಿಗಳಲ್ಲಿ ನಿರ್ಣಯ ಕೈಗೊಂಡ ನಂತರವೇ ನಗರಸಭೆಗೆ ಸೇರ್ಪಡೆ ಮಾಡಲಾಗಿದೆ. ಇದನ್ನು ರಾಷ್ಟ್ರೀಯ ನಾಯಕರು ಅರಿತುಕೊಳ್ಳಬೇಕು. ನನ್ನ ಅಧಿಕಾರದ ಅವಧಿ ಇನ್ನೂ ಎರಡು ವರ್ಷ ಕಾಲಾವಕಾಶವಿದೆ. ಒಳ್ಳೆಯ ಕೆಲಸ ಮಾಡು ಎಂದು ನನಗೆ ಹೇಳಿದ್ದಾರೆ. ಎರಡು ವರ್ಷ ಅಲ್ಲ, ಎರಡೇ ದಿನ ಇದ್ದರೂ ಇತಿಹಾಸ ಸೇರುವ ಕೆಲಸ ಮಾಡುತ್ತೇನೆ ಎಂದರು.
610
ಛಲವಾದಿ ನಾರಾಯಣಸ್ವಾಮಿ ವಿರುದ್ಧ ಉದಯ್ ಆಕ್ರೋಶ ವ್ಯ
ನಾನು ಕ್ಷೇತ್ರದಲ್ಲೇ ಇರಲ್ಲ, ಫಾರಿನ್ ಎಂಎಲ್‌ಎ ಎಂದು ಜರಿಯುತ್ತಾರೆ. ಪಂಚಾಯಿತಿ ಗೆಲ್ಲಲಾಗದವನನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಉದಯ್ ಆಕ್ರೋಶ ವ್ಯಕ್ತಪಡಿಸಿದರು. ನಾನು ಒಂದೇ ಒಂದು ದಿನ ನನ್ನ ಕ್ಷೇತ್ರದ ಜನರನ್ನು ಬೆಂಗಳೂರಿಗೆ ಕರೆಸಿಕೊಂಡಿಲ್ಲ. ಕ್ಷೇತ್ರದಲ್ಲೇ ಇದ್ದುಕೊಂಡು ಜನಸೇವೆ ಮಾಡುತ್ತಿದ್ದೇನೆ. ವಿಪಕ್ಷದ ನಾಯಕರು ನಾಲಾಯಕ್‌ಗಳು. ಬೆಂಗಳೂರಲ್ಲೇ ಇವರ ಬೇಳೆ ಬೇಯಿಸಲು ಆಗಲಿಲ್ಲ. ಇಲ್ಲಿ ಏನು ಸಾಧನೆ ಮಾಡುತ್ತಾರೆ ಎಂದು ಛೇಡಿಸಿದರು.
710
ಬಿಜೆಪಿ ನಾಯಕರು ನನ್ನ ಬಳಿ ಚರ್ಚಿಸದೆ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ
ಬಿಜೆಪಿ ನಾಯಕರು ಭಾನುವಾರವಾದರೂ ಗೊರವನಹಳ್ಳಿ ಗ್ರಾಮ ಪಂಚಾಯ್ತಿಗೆ ಹಾಕಿದ್ದ ಬೀಗ ಒಡೆದು ಅಧಿಕಾರಿಗಳ ಮೇಲೆ ರೌಡಿಗಳಂತೆ ದೌರ್ಜನ್ಯ ನಡೆಸಿದ್ದಾರೆ. ಪಂಚಾಯ್ತಿ ರಜೆ ಇದ್ದರೂ ವಿಪಕ್ಷನಾಯಕನಾಗಿ ನಡೆದುಕೊಳ್ಳುವ ರೀತಿ ಇದೆಯೇ ಎಂದು ಪ್ರಶ್ನಿಸಿದರು. ಜನರು ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಇತಿಹಾಸದಲ್ಲಿ ಆಗದ ಅಭಿವೃದ್ಧಿ ಕಾರ್ಯಗಳನ್ನು ಮದ್ದೂರಿನಲ್ಲಿ ಮಾಡುತ್ತಿದ್ದೇನೆ. ಅಭಿವೃದ್ಧಿ ಕೆಲಸಗಳನ್ನು ಸಹಿಸಲು ಆಗುತ್ತಿಲ್ಲ. ನಗರಸಭೆ ವಿರೋಧಿ ಹೋರಾಟಕ್ಕೆ ನನ್ನ ತಕರಾರಿಲ್ಲ. ನನ್ನ ಬಳಿಯೇ ಚರ್ಚೆ ಮಾಡಬಹುದಿತ್ತು. ಆದರೆ, ಎತ್ತಿಕಟ್ಟುವ ಕೆಲಸ ಇವರಿಂದ ಆಗುತ್ತಿದೆ ಎಂದು ಆರೋಪಿಸಿದರು.
810
ರಿಯಲ್ ಎಸ್ಟೇಟ್ ಮಾಡಿ ಸಂಪಾದನೆ ಮಾಡುವುದಾದರೆ ನಾನ್ಯಾಕೆ ಇಲ್ಲಿಗೆ ಬರಬೇಕಿತ್ತು
ಹೋರಾಟಗಾರರು ನನ್ನನ್ನೇ ಯಾಕೆ ಗುರಿಯಾಗಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಮಾಡಿ ಸಂಪಾದನೆ ಮಾಡುವುದಾದರೆ ನಾನ್ಯಾಕೆ ಇಲ್ಲಿಗೆ ಬರಬೇಕಿತ್ತು, ಗೆದ್ದ ಬಳಿಕ ಜನರ ಕೈಗೆ ಸಿಗದೆ ನನ್ನ ಉದ್ಯಮ ನೋಡಿಕೊಂಡು ಹೋಗಬಹುದಿತ್ತು ಅಲ್ಲವೇ ಎಂದು ಹೇಳಿದರು. ನಾನು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ನನ್ನನ್ನು ಹತ್ತಿಕ್ಕಲು ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ನಗರಸಭೆ ಹೋರಾಟ ಕೇವಲ ರಾಜಕೀಯ ಪ್ರೇರಿತ. ಹೋರಾಟದ ಸ್ಥಳಕ್ಕೆ ನಾನು ಹೋಗುವುದಿಲ್ಲ. ದೊಡ್ಡ ದೊಡ್ಡ ನಾಯಕರೇ ಸಮಸ್ಯೆ ಬಗೆಹರಿಸಿಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.
910
ಸುದ್ದಿಗೋಷ್ಠಿಯಲ್ಲಿ ಯಾರ್ಯಾರು ಇದ್ರು
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸಿ. ಚೆಲುವರಾಜು, ನಿರ್ದೇಶಕ ಪಿ. ಸಂದರ್ಶ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎ.ಎಸ್. ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಮದ್ದೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಮಮತಾ ಶಂಕರೇಗೌಡ, ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ನಗರಸಭೆ ಮಾಜಿ ಅಧ್ಯಕ್ಷ ಕೋಕಿಲ ಅರುಣ್, ಮಾಜಿ ಉಪಾಧ್ಯಕ್ಷ ಟಿ .ಆರ್ .ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವನಿತಾ, ಮಾಜಿ ಸದಸ್ಯ ಸಚಿನ್, ಸಿದ್ದರಾಜು,ಪುರಸಭೆ ಮಾಜಿ ಸದಸ್ಯ ಎಂ.ಡಿ .ಮಹಾಲಿಂಗಯ್ಯ ಮತ್ತಿತರರು ಇದ್ದರು.
1010
ಡಿಕೆಶಿ ಸಿಎಂ ಆಗ್ತಾರೆ; ಉದಯ್ ವಿಶ್ವಾಸ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಆತ್ಮವಿಶ್ವಾಸ ಇದೆ. ಆದರೆ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಉದಯ್ ವಿಶ್ವಾಸ ವ್ಯಕ್ತಪಡಿಸಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ರಾಜ್ಯಕ್ಕೆ ಬಂದಾಗ ಸಿಎಂ ಭೇಟಿ ಮಾಡೋದು ಸಹಜ. ಸಿಎಂ ವಿಚಾರ ಏನಿದ್ದರೂ ದೆಹಲಿಯಲ್ಲಿ ಆಗುತ್ತದೆ. ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ನಾವು ಯಾರೂ ಕೇಳುತ್ತಿಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಅವಕಾಶ ಕೊಡಬೇಕು ಎಂಬುದು ನಮ್ಮ ಒತ್ತಾಯ ಅಷ್ಟೆ. ಕೊಟ್ಟ ಮಾತು ಅಂದರೆ ಆ ಚರ್ಚೆಯಲ್ಲಿ ನಾವು ಇರಲಿಲ್ಲ. ಬದಲಾವಣೆ ವದಂತಿಗೆ ಕಿವಿಕೊಡಬೇಡಿ, ಅಧಿಕೃತವಾಗಿ ಬರಲಿ ಎಂದಷ್ಟೇ ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.