ಸೊರಬ (ಏ.29): ನಾನು ಪ್ರಮಾಣ ಮಾಡುತ್ತೇನೆ ಆ ಬ್ರಹ್ಮ ಅಡ್ಡ ಬಂದರೂ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ. ಬಿಜೆಪಿ ನನ್ನ ತಾಯಿ ಮತ್ತೆ ಪಕ್ಷಕ್ಕೆ ಸೇರಿ ಮೋದಿ ಪ್ರಧಾನಿಯಾಗಲು ದೆಹಲಿಯಲ್ಲಿ ಕೈ ಎತ್ತುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸೊರಬದ ಆಲೇಕಲ್ ಸಭಾ ಭವನದಲ್ಲಿ ಭಾನುವಾರ ರಾಷ್ಟ್ರ ಭಕ್ತ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಸಭೆಯಲ್ಲಿ ಅವರು ಮಾತನಾಡಿ, ಶಿಕಾರಿಪುರದಲ್ಲೇ ಪ್ರತಿಯೊಂದು ಸಮುದಾಯವು ಕುಟುಂಬ ರಾಜಕಾರಣದ ವಿರೋಧವಾಗಿವೆ. ನಿರೀಕ್ಷೆಗೂ ಮೀರಿ ತಮಗೆ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಕಂಡು ಎದುರಾಳಿಗೆ ನಡುಕ ಪ್ರಾರಂಭವಾಗಿದೆ ಎಂದರು.
ಜಿಲ್ಲೆಯ ಮತದಾರರಲ್ಲಿ ಭಯಭೀತಿಯ ವಾತಾವರಣ ನಿರ್ಮಾಣ ಮಾಡಿ ಗೆಲುವು ಸಾಧಿಸುವುದು ಅಪ್ಪ-ಮಕ್ಕಳ ಚುನಾವಣಾ ತಂತ್ರಗಾರಿಕೆಯಾಗಿದೆ. ಆದರೆ, ಈ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಕುಟುಂಬ ರಾಜಕಾರಣದ ದಾದಾಗಿರಿ, ಗೂಂಡಾಗಿರಿ ವಿರುದ್ಧ ತೊಡೆತಟ್ಟಿದ್ದಾರೆ. ತಮಗೆ ಗೆಲುವು ತಂದುಕೊಡುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಚುನಾವಣೆಯ ದಿನ ಎಣಿಸುತ್ತಿದ್ದಾರೆ ಎಂದು ಹೇಳಿದರು.
ಅಪ್ಪ-ಮಕ್ಕಳ ಎಲ್ಲಾ ತಂತ್ರ, ಮಂತ್ರಗಳನ್ನು ಬಲ್ಲೆ. ಅವರ ಯಾವುದೇ ಷಡ್ಯಂತ್ರಗಳು ಈ ಚುನಾವಣೆಯಲ್ಲಿ ನೆರವಿಗೆ ಬರುವುದಿಲ್ಲ. ಪ್ರತೀ ತಾಲೂಕಿನಲ್ಲಿಯೂ ತಮ್ಮ ಪರವಾಗಿ ಎಲ್ಲಾ ಪಕ್ಷಗಳ ಮುಖಂಡರು ಹಿಂದಿನಿಂದ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಲಿಂಗಾಯತರು ತಮ್ಮ ಮಗನಿಗೆ ಬೆಂಬಲಿಸುತ್ತಾರೆ ಎಂದು ಬಿಜೆಒಪಿ ಅಭ್ಯರ್ಥಿ ಮತ್ತು ಈಡಿಗರು ಅಕ್ಕನಿಗೆ ಮತ ಚಲಾಯಿಸುತ್ತಾರೆ ಎಂದು ಕಾಂಗ್ರೆಸ್‌ನ ಅಭ್ಯರ್ಥಿ ಭ್ರಮೆಯಲ್ಲಿದ್ದಾರೆ. ಆದರೆ, ಸ್ವತಃ ಲಿಂಗಾಯತರು ಮತ್ತು ಈಡಿಗರು ನನ್ನ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ನಾನು ಹಿಂದುತ್ವವಾದಿಯೇ ಹೊರತು ಜಾತಿವಾದಿಯಲ್ಲ. ಸೊರಬ ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮತದಾರರು ಸಭೆಗೆ ಆಗಮಿಸಿರುವುದು ನನ್ನ ಗೆಲುವಿನ ಹುಮ್ಮಸ್ಸು ಇಮ್ಮಡಿಗೊಂಡಿದೆ ಎಂದರು.