ನಮ್ಮೆಲ್ಲರ ಪೂರ್ವಜರು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗಾಗಿ 500 ವರ್ಷ ಹೋರಾಡಿದರು. ಲಕ್ಷಗಟ್ಟಲೆ ಜನರು ಪ್ರಾಣತ್ಯಾಗ ಮಾಡಿದರು. ಸ್ವಾತಂತ್ರ್ಯೋತ್ಸವದ ಮರುದಿನವೇ ಇದು ಆಗಬೇಕಿತ್ತು. 500 ವರ್ಷಗಳ ಕನಸು, ನಿರೀಕ್ಷೆ ಈಡೇರಲು ನಿಮ್ಮ ಮತದ ತಾಕತ್ತು ಸಿಕ್ಕಿದರೆ ಮಾತ್ರ ಸಾಧ್ಯ ಎಂದರು. ಇವತ್ತು ಅಯೋಧ್ಯೆಯಲ್ಲಿ ಪ್ರಭುರಾಮನ ಮಂದಿರ ನಿರ್ಮಾಣವಾಗಿದೆ. ಇದೊಂದು ಪುಣ್ಯ, ಪವಿತ್ರ ಕಾರ್ಯ ಎಂದು ತಿಳಿಸಿದರು. ಈ ಪುಣ್ಯದ ಹಕ್ಕುದಾರರು ಮತದಾರರು ಎಂದು ನುಡಿದರು. ದೇಶವು ಅಭಿವೃದ್ಧಿ- ನಮ್ಮ ಪ್ರಾಚೀನ ಪರಂಪರೆಯನ್ನು ಪುರಸ್ಕರಿಸಲು ಬಯಸುತ್ತದೆ. ಅದನ್ನು ಬಿಜೆಪಿ ಆಡಳಿತ ಮಾಡಿದೆ. ಕಿರುಧಾನ್ಯಕ್ಕೆ ನಾವು ಉತ್ತೇಜನ ನೀಡಿದ್ದೇವೆ ಎಂದು ವಿವರಿಸಿದರು.
ನಿಮ್ಮ ಆಶೀರ್ವಾದದಿಂದ 2 ಬಾರಿ ಬಿಜೆಪಿ- ಎನ್‍ಡಿಎಯ ಶಕ್ತಿಶಾಲಿ ಸರಕಾರ ದೇಶದ ಆಡಳಿತ ನಡೆಸಿದೆ. ನಾವು ಮೂಲಸೌಕರ್ಯ ವೃದ್ಧಿಗೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಧಾರವಾಡ ಐಐಟಿ, ಆಧುನಿಕ ರೈಲ್ವೆ ನಿಲ್ದಾಣ ನಿಮಗೆ ಸಿಕ್ಕಿದೆ. ಅಭಿವೃದ್ಧಿಯ ಆಶಯದೊಂದಿಗೆ ನಾವು ಕೆಲಸ ಮಾಡಿದ್ದೇವೆ. ಬಹುಮತದ ಸರಕಾರವಿದ್ದಾಗ ವಿಶ್ವವು ಆ ದೇಶಕ್ಕೆÀ ಗೌರವ ನೀಡುತ್ತದೆ. ಅಮೇರಿಕ ಸೇರಿ ಎಲ್ಲ ದೇಶಗಳು ಹಿಂದುಸ್ತಾನಕ್ಕೆ ಗೌರವ ಕೊಡುತ್ತಾರೆ ಎಂದು ವಿಶ್ಲೇಷಿಸಿದರು.
ಇದೆಲ್ಲವೂ ಮಾಡಿದವರು ಯಾರು ಎಂದು ಕೇಳಿದ ಅವರು, ಮೋದಿ ಎಂದು ಉತ್ತರ ಪಡೆದರು. ನಿಮ್ಮ ಒಂದು ಮತದಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ತಿಳಿಸಿದರು. ಮತದ ತಾಕತ್ತನ್ನು ಪ್ರತಿ ಮತದಾರರು ನೋಡಿದ್ದಾರೆ. ಜಗತ್ತಿನ ದೊಡ್ಡ ಶಕ್ತಿಶಾಲಿ ನಾಯಕರನ್ನು ನಾನು ನೋಡುವಾಗ 140 ಕೋಟಿ ಮತದಾರರನ್ನು ನೆನಪಿಸಿಕೊಳ್ಳುತ್ತೇನೆ ಎಂದು ವಿವರಿಸಿದರು.
ರೈತರು, ಮೀನುಗಾರರ ಅಭಿವೃದ್ಧಿಗೆ ನಾವು ಶ್ರಮಿಸಿದ್ದೇವೆ. ಮೀನುಗಾರರಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಿದ್ದೇವೆ. ಕಾಂಗ್ರೆಸ್ ಪಕ್ಷವು ಅಪರಾಧ ನಿಯಂತ್ರಣ ಮಾಡದೆ, ಸಮಾಜಘಾತುಕರಿಗೆ ಪ್ರೋತ್ಸಾಹ ಕೊಡುತ್ತಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕಾಂಗ್ರೆಸ್ ಪಕ್ಷವು ನಿಮಗೆ ರಕ್ಷಣೆ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನೇಹಾ ಹತ್ಯೆಯಿಂದ ಜನರಲ್ಲಿ ಭಯ- ಆತಂಕ ಉಂಟಾಗಿದೆ. ಹಿಂದೆ ಭಯೋತ್ಪಾದನೆ, ಬಾಂಬ್ ಸ್ಫೋಟ ಪ್ರತಿದಿನದ ಸುದ್ದಿಯಾಗಿತ್ತು. ಈಗ ಹೈಟೆಕ್ ನಗರ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಆಗಿದೆ. ಗ್ಯಾಸ್ ಸಿಲಿಂಡರ್ ಸ್ಫೋಟವೆಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಎನ್‍ಐಎ ತನಿಖೆಯ ಬಳಿಕ ಭಯೋತ್ಪಾದಕರ ವಿವರ ಲಭಿಸಿದೆ. ಕಾಂಗ್ರೆಸ್ ಪಕ್ಷವು ಪಿಎಫ್‍ಐಯ ಜೊತೆ ಸ್ನೇಹ ಬೆಳೆಸಿದೆ ಎಂದು ಟೀಕಿಸಿದರು. ನಾವು ಪಿಎಫ್‍ಐ ಮೇಲೆ ನಿರ್ಬಂಧ ಹೇರಿದ್ದೇವೆ ಎಂದರು.
ಸ್ವಾತಂತ್ರ್ಯ ಚಳವಳಿಯನ್ನು ಮತಬ್ಯಾಂಕಿಗಾಗಿ ತುಷ್ಟೀಕರಣದ ಪರವಾಗಿ ಮಾಡಿದ ಪಕ್ಷ ಕಾಂಗ್ರೆಸ್. ಭಾರತದ ಮಹಾರಾಜರು ಅತ್ಯಾಚಾರಿಗಳು; ಬಡವರ ಜಮೀನನ್ನು ಕಿತ್ತುಕೊಂಡವರೆಂದು ಚರಿತ್ರೆ ಬರೆಸಿದ್ದರು. ಇದು ಕಾಂಗ್ರೆಸ್ ಇತಿಹಾಸ. ಶಿವಾಜಿ ಮಹಾರಾಜ, ಮಹಾರಾಣ ಪ್ರತಾಪರ ನೈಜ ಇತಿಹಾಸ ಜನರಿಗೆ ತಿಳಿಯಬಾರದೆಂದು ಕಾಂಗ್ರೆಸ್ ಬಯಸಿತ್ತು ಎಂದು ಟೀಕಿಸಿದರು.
ಕಾಂಗ್ರೆಸ್ಸಿಗರು ನಿಮ್ಮ ಬ್ಯಾಂಕಿನ ಹಣ, ಆಸ್ತಿ, ಮಹಿಳೆಯರ ಬಳಿ ಇರುವ ಒಡವೆ ಸೇರಿ ಮಂಗಲಸೂತ್ರದ ಎಕ್ಸ್‍ರೇ ಮಾಡಲಿದ್ದಾರೆ. ಮುಂದೆ ನಿಮ್ಮ ಸಂಪತ್ತಿನ ಲೂಟಿ ಮಾಡಲಿದ್ದಾರೆ. ಅದನ್ನು ತಮ್ಮ ಮತಬ್ಯಾಂಕಿಗೆ ಕೊಡಲಿದ್ದಾರೆ ಎಂದು ತಿಳಿಸಿದರು. ಮಂಗಲಸೂತ್ರ ಕಿತ್ತುಕೊಳ್ಳಲು ಅವರು ಬಯಸಿದ್ದಾರೆ. ಮೋದಿ ಬದುಕಿರುವವರೆಗೆ ಕಾಂಗ್ರೆಸ್ಸಿಗರ ಈ ಕನಸು ಎಂದೆಂದೂ ನನಸಾಗದು. ಅವರ ಆಟ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪರಮಾತ್ಮನು ನಿಮ್ಮ ಸೇವೆಗಾಗಿ ಮೋದಿಯನ್ನು ಕಳಿಸಿದ್ದಾನೆ. ನಿಮ್ಮ, ನಿಮ್ಮ ಮಕ್ಕಳ ಅಭಿವೃದ್ಧಿ, ದೇಶದ ಅಭಿವೃದ್ಧಿಗಾಗಿ ಮೋದಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಹೊಸ ನೀತಿ ತರಲು ಕಾಂಗ್ರೆಸ್ ಮುಂದಾಗಿದೆ. ಮಕ್ಕಳಿಗಾಗಿ ಶೇಖರಿಸಿಟ್ಟ ಹಣ, ಆಸ್ತಿಯನ್ನು ನೀವು ಅವರಿಗೆ ಕೊಡಲು ಸಾಧ್ಯವಾಗದು. ಅದನ್ನು ಮಕ್ಕಳಿಗೆ ಕೊಡಲು ಶೇ 55ರಷ್ಟು ತೆರಿಗೆ ಪಾವತಿಸಲು ಕಾಂಗ್ರೆಸ್ ಕೇಳಲಿದೆ. ಅದನ್ನು ಮತಬ್ಯಾಂಕಿಗೆ ಹಂಚಲು ನಿಮ್ಮ ಸಂಪತ್ತಿನ ಡಕಾಯಿತಿ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್‍ನ ಲೂಟಿ ಬದುಕಿದ್ದಾಗ ಮತ್ತು ಸಾವಿನ ಬಳಿಕವೂ ಇರುತ್ತದೆ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಅಭ್ಯರ್ಥಿ ಪ್ರಲ್ಹಾದ್ ಜೋಷಿ ಅವರು ಮಾತನಾಡಿ, 10 ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಪ್ಪುಚುಕ್ಕಿ ಇಲ್ಲದ ಆಡಳಿತ ನಡೆಸಿದವರು ನರೇಂದ್ರ ಮೋದಿಜೀ ಅವರು ಎಂದು ವಿವರಿಸಿದರು. ಬಿಜೆಪಿ ಪ್ರವರ್ಧಮಾನಕ್ಕೆ ಬಂದಾಗ ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ ಮತ್ತು ಮೀಸಲಾತಿ ರದ್ದುಪಡಿಸುತ್ತಾರೆ ಎಂದು ಸುಳ್ಳು ಹೇಳುತ್ತಾರೆ. ಆದರೆ, ಬಾಬಾ ಸಾಹೇಬ ಡಾ.ಅಂಬೇಡ್ಕರ್ ಅವರಿಗೆ ಅತಿ ಹೆಚ್ಚು ಗೌರವ ಕೊಟ್ಟವರು ಮೋದಿಜೀ ಎಂದು ತಿಳಿಸಿದರು.
ಜೀವನದ ಭದ್ರತೆಯ, ಸ್ವಾವಲಂಬನೆಯ ಗ್ಯಾರಂಟಿಯೇ ಮೋದಿ ಗ್ಯಾರಂಟಿ. ಆದರೆ, ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಆಡಳಿತಕ್ಕೆ ಬಂದ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಲಾಯಿತು. ಇದು ನಾಚಿಕೆಗೇಡಿನ ಸರಕಾರ ಎಂದು ಟೀಕಿಸಿದರು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದ ವೇಳೆಯೂ ತುಷ್ಟೀಕರಣದ ಪರಾಕಾಷ್ಟೆ ನಡೆದಿತ್ತು ಎಂದು ವಿವರ ನೀಡಿದರು. ಕೆಜಿ ಹಳ್ಳಿ, ಡಿಜೆಹಳ್ಳಿ ಗಲಭೆ, ಹುಬ್ಬಳ್ಳಿ ಗಲಭೆಗಳನ್ನು ಉದಾಹರಿಸಿದರು. ಮತಾಂಧ ಶಕ್ತಿಗಳು ಈಗ ವಿಜೃಂಭಿಸುತ್ತಿದ್ದು, ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದರು.
ಜನರೇ ನನ್ನ ಕುಟುಂಬ. ವಿಕಸಿತ ಕನ್ನಡ, ವಿಕಸಿತ ಭಾರತಕ್ಕಾಗಿ ಉತ್ತರ ಕನ್ನಡ, ಧಾರವಾಡದಲ್ಲಿ ಕಮಲ ಅರಳಿಸಿ. ಕಮಲದ ಚಿಹ್ನೆಗೆ ಮತ ಕೊಡಿ. ನಿಮ್ಮ ಮನ, ಹೃದಯದಲ್ಲಿ ಮೋದಿ ಇರಲಿದ್ದಾರೆ ಎಂದು ವಿಶ್ಲೇಷಿಸಿದರು. ನನ್ನ ವೈಯಕ್ತಿಕ ಕೆಲಸವೊಂದಿದೆ. ಮನೆ ಮನೆಗೆ ಹೋಗಿ ಮೋದಿಜೀ ಬಂದಿದ್ದರು. ನಿಮಗೆ ನಮಸ್ಕಾರ ಹೇಳಿದ್ದಾರೆ ಎಂದು ತಿಳಿಸಿ ಎಂದು ಮನವಿ ಮಾಡಿದರು.
ಇದೊಂದು ಗೆಲುವಿನ ಸಮಾವೇಶದಂತಿದೆ. ಕರ್ನಾಟಕದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಖಚಿತವಾದಂತಿದೆ ಎಂದು ತಿಳಿಸಿದರು. ನಿಮ್ಮ ತಪಸ್ಸು ವ್ಯರ್ಥವಾಗುವುದಿಲ್ಲ. ನಾನು ದೇಶದ ವಿಕಾಸ ಮಾಡಿ ತೋರಿಸುತ್ತೇನೆ ಎಂದು ವಿಶ್ವಾಸದಿಂದ ನುಡಿದರು. ವಿಕಸಿತ ಭಾರತಕ್ಕಾಗಿ ಕರ್ನಾಟಕದ ಜನತೆಯ ಆಶೀರ್ವಾದ ಕೇಳಲು ಇಲ್ಲಿ ಬಂದಿದ್ದೇನೆ ಎಂದು ತಿಳಿಸಿದರು. ದಾಖಲೆಯ ಗೆಲುವು ಎಂಬುದು ನಿಮ್ಮ ಸಂಕಲ್ಪ, ನಿಮ್ಮ ಉತ್ಸಾಹದಿಂದ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಮುಸ್ಲಿಂ ಲೀಗಿನಂತೆ ಓಲೈಕೆ ರಾಜಕಾರಣವನ್ನು ತನ್ನದಾಗಿಸಿಕೊಂಡಿದೆ ಎಂದರು. ಕಾಂಗ್ರೆಸ್ ಪಕ್ಷವು ಮತ ಬ್ಯಾಂಕ್ ರಾಜಕೀಯವನ್ನು ತನ್ನದಾಗಿ ಮಾಡಿಕೊಂಡಿದೆ ಎಂದು ಟೀಕಿಸಿದರು. ಅಭಿವೃದ್ಧಿಯೇ ನನ್ನ ಗುರಿ ಎಂದು ವಿವರಿಸಿದರು.
ಗ್ಯಾರಂಟಿಗಳು ಫಲಪ್ರದವಾಗಿಲ್ಲ; ಕಾಂಗ್ರೆಸ್ ಪಕ್ಷವು ರಾಜ್ಯದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ಒಯ್ದಿದೆ. ಮೋದಿಜೀ ಅವರ ಸಾಧನೆಯನ್ನು ಗಮನಿಸಿ ಬಿಜೆಪಿಗೆ ಮತ ಕೊಡಿ ಎಂದು ವಿನಂತಿಸಿದರು. ಅಪರಾಧ ಮಾಡುವವರಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ; ಆದರೆ, ಜೀವ ಉಳಿಸುವ ಗ್ಯಾರಂಟಿಯನ್ನು ಮೋದಿಜೀ ನೀಡುತ್ತಾರೆ ಎಂದು ವಿವರಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಕಾರ್ಕಳ, ಜಿಲ್ಲಾಧ್ಯಕ್ಷ ಎನ್.ಎಸ್.ಹೆಗ್ಡೆ, ಸಂಸದರು, ಶಾಸಕರು, ಮಾಜಿ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು, ರಾಜ್ಯ- ಜಿಲ್ಲಾ ಪದಾಧಿಕಾರಿಗಳು ವೇದಿಕೆ ಮೇಲಿದ್ದರು. ಬೇಡರ ವೇಷದ ಕಿರೀಟ ತೊಡಿಸಿ, ಮಾರಿಕಾಂಬಾ ದೇವಿಯ ಪ್ರತಿಮೆ ನೀಡಿ, ಕಾಳುಮೆಣಸು, ಅಡಿಕೆ, ಏಲಕ್ಕಿಯ ಹಾರವನ್ನು ಮೋದಿಜೀ ಅವರಿಗೆ ಸಮರ್ಪಿಸಿ ಗೌರವಿಸಲಾಯಿತು.