ಬಿಜೆಪಿ ಪಕ್ಷ ನನ್ನ ಮನೆ ಇದ್ದಂತೆ, ಹಾಗಾಗಿ ಕಾಂಗ್ರೆಸ್‌ನಿಂದ ವಾಪಸ್ಸು ಬಂದೆ: ಜಗದೀಶ್ ಶೆಟ್ಟರ್

First Published Feb 16, 2024, 2:30 AM IST

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಬೇಕು ಎಂಬುದನ್ನ ಪಕ್ಷದ ಹಿರಿಯರು ತೀರ್ಮಾನಿಸಿದ್ದಾರೆ, ಅವರ ತೀರ್ಮಾನವೇ ಅಂತಿಮ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. 

ಕೊಳ್ಳೇಗಾಲ (ಫೆ.16): ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಬೇಕು ಎಂಬುದನ್ನ ಪಕ್ಷದ ಹಿರಿಯರು ತೀರ್ಮಾನಿಸಿದ್ದಾರೆ, ಅವರ ತೀರ್ಮಾನವೇ ಅಂತಿಮ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಯಾವ ಲೋಕಸಭೆಗೆ ಅಭ್ಯರ್ಥಿ ಯಾರಾಗಬೇಕು ಎಂಬುದನ್ನ ಪಕ್ಷವೇ ತೀರ್ಮಾನಿಸುತ್ತೆ, ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕಿದೆ ಎಂದರು.

ಬಿಜೆಪಿ ನನ್ನ ಮನೆ: ಬಿಜೆಪಿ ಪಕ್ಷ ನನ್ನ ಮನೆ ಇದ್ದಂತೆ ಹಾಗಾಗಿ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಕಾಂಗ್ರೆಸ್ ನಿಂದ ವಾಪಸ್ಸು ಬಂದೆ, ಪಕ್ಷದ ವರಿಷ್ಠರು ನನ್ನನ್ನು ಯಾವುದೇ ಲೋಕಸಭೆಗೆ ಸ್ಪರ್ಧಿಸಲು ಹೇಳಿಲ್ಲ, ಪಕ್ಷ ಸ್ಪರ್ಧೆಗೆ ಸೂಚಿಸಿದರೆ ಸ್ಪರ್ಧಿಸುವೆ, ಇಲ್ಲ ಪಕ್ಷ ಸಂಘಟನೆಯತ್ತ ಮುಂದಾಗಿ ಎಂದರೂ ಪಕ್ಷದ ವರಿಷ್ಠರ ಸೂಚನೆ ಪಾಲಿಸುವೆ ಒಟ್ಟಾರೆ ಪಕ್ಷ ಹೇಳಿದ ಸೂಚನೆ ಪಾಲಿಸುವೆ ಎಂದರು. ಕಾಂಗ್ರೆಸ್ ಲೋಕಸಭೆ ಚುನಾವಣೆ ಹಿನ್ನೆಲೆ ರಾಜಕೀಯ ಲಾಭಕ್ಕಾಗಿ ಅನುದಾನ ತಾರತಮ್ಯ ನೀತಿ ಎಂಬ ಸಂದೇಶ ರವಾನಿಸುತ್ತಿದೆ. 

ಇದೆಲ್ಲಾ ತೀರ್ಮಾನವಾಗಬೇಕಾದ್ದು ನೀತಿ ಅಯೋಗದಲ್ಲಿ ಅಷ್ಟಕ್ಕೂ ರಾಜ್ಯಸಭೆ, ಲೋಕಸಭೆಯಲ್ಲಿ ಈ ಕುರಿತು ಪ್ರಶ್ನಿಸುವುದನ್ನ ಮಲ್ಲಿಕಾರ್ಜುನ ಖರ್ಗೆ ಬಿಟ್ಟು ಈಗೇಕೆ ರಾಜಕೀಯ ಮಾಡುತ್ತಿದ್ದಾರೆ, ಮುಖ್ಯಮಂತ್ರಿಗಳು ಸಹಾ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು. ಸರ್ಕಾರ ನೀತಿ, ನಿಯಮ, ಮೂಲ ಉದ್ದೇಶ ಹಾಗೂ ಮುಂದಿನ ಗುರಿಯನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರಿಸಬೇಕಿತ್ತು, ಆದರೆ ಭಾಷಣದಲ್ಲಿ ಅಂಥಾದ್ದೆನೂ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಜಿಲ್ಲೆಗೆ ಮೊದಲು ಬಂದ ನಂತರವೆ ಬೇರೆ ಸಿಎಂಗಳು ಇಲ್ಲಿಗೆ ಬಂದದ್ದು: ನಾನು ಚಾಮರಾಜನಗರ ಜಿಲ್ಲೆಯತ್ತ ಮುಖ ಮಾಡಿದ ಬಳಿಕವೇ ಇನ್ನಿತರೆ ಮುಖ್ಯಮಂತ್ರಿಗಳ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ್ದು, ಅದೇ ರೀತಿಯಲ್ಲಿ ಮಾಜಿ ಸಚಿವ ವಿ ಸೋಮಣ್ಣ ಚಾಮರಾಜನಗರ ಜಿಲ್ಲೆ ಅಭಿವೃದ್ಧಿಗೆ ಅನೇಕ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ದೇವಲ ಮಹರ್ಷಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಈ ಹಿಂದೆ ಸ್ಪೀಕರ್, ಕಂದಾಯ ಸಚಿವರಿದ್ದಾಗಲೂ ಜಿಲ್ಲೆಗೆ ಬಂದಿರುವೆ. 

ಸಿಎಂ ಆಗಿದ್ದಾಗಲೂ ಸಹಾ ಜಿಲ್ಲೆಯ ಮಲೆಮಹದೇಶ್ವರಬೆಟ್ಟದಲ್ಲಿ ಪ್ರಾಧಿಕಾರ ಅಭಿವೃದ್ಧಿ ಕಾರ್ಯ ಅನುಷ್ಠಾನ ಮಾಡಿದ್ದೆನೆ, ಮುಖ್ಯಮಂತ್ರಿಯಾದ ಬಳಿಕ ಜಿಲ್ಲೆಗೆ ಮೂರು ಬಾರಿ ಜಿಲ್ಲೆಗೆ ಬಂದಿರುವೆ, ನಾನು ಚಾಮರಾಜನಗರ ಜಿಲ್ಲೆಗೆ ಬಂದ ಬಳಿಕ ನನಗೆ 1ತಿಂಗಳ ಕಾಲ ಅಧಿಕಾರ ಹೆಚ್ಚಾಯಿತು. ನಾನು ಬಂದ ಬಳಿಕವೇ ಇತರೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದರು. ಈ ಜಿಲ್ಲೆಗೆ ಬಂದರೆ ಅಧಿಕಾರ ಹೋಗುತ್ತೆ ಎಂಬುದು ಮೂಢನಂಬಿಕೆ, ಇದು ಸರಿಯಾದುದಲ್ಲ ಎಂದರು. ನನ್ನ ಅಧಿಕಾರಾವಧಿಯಲ್ಲಿ ಮಹದೇಶ್ವರ ಬೆಟ್ಟದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡ ತೃಪ್ತಿ ನನಗಿದೆ. ಜಿಲ್ಲೆಯ ಬಗ್ಗೆ ಮೂಢನಂಬಿಕೆ ಸರಿಯಲ್ಲ ಎಂದರು.

click me!