ಹುಬ್ಬಳ್ಳಿ (ಫೆ.15): ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯ ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಈ ಮೂಲಕ ಭಾರತ ವಿಕಸಿತ ಆಗಬೇಕು ಎಂಬುವುದು ಏಕೈಕ ಕಲ್ಪನೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ್ದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದ ಸವಾಯಿ ಗಂಧರ್ವ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಿ ಮೋದಿ ಅವರ ಆಶಯ ದೇಶ ಆರ್ಥಿಕವಾಗಿ ಬೆಳೆಯುವುದರ ಮೂಲಕ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಸಾಮಾಜಿಕ ಸಮಾನತೆ ಸಿಗುವುದು ಹಾಗೂ ಬಡತನ ನಿರ್ಮೂಲನೆ ಮಾಡುವುದಾಗಿದೆ ಎಂದರು.
ಹಿಂದೆ ದೇಶವನ್ನು ಆಳಿದ ಕಾಂಗ್ರೆಸ್ ಯಾರಿಗೂ ಒಳ್ಳೆಯದು ಮಾಡಿಲ್ಲ. ದೇಶಕ್ಕೆ ಪವಿತ್ರವಾದ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾಧಿಗೆ ಜಾಗವನ್ನು ನೀಡಲಿಲ್ಲ. ಅವರು ಬದುಕಿದಾಗ ಚಿತ್ರಹಿಂಸೆ ನೀಡಿದರು. ಅತ್ಯಂತ ಅಗೌರವವಾಗಿ ನಡೆದುಕೊಂಡ ಪಕ್ಷ ಕಾಂಗ್ರೆಸ್ ಎಂದು ಹರಿಹಾಯ್ದರು. ಪ್ರಮುಖ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಕಾಶ ನೀಡದಂತೆ ಮಾಡಿದ ದಲಿತ ದ್ರೋಹದ ಪಕ್ಷ ಕಾಂಗ್ರೆಸ್. ಡಾ. ಬಿ. ಆರ್. ಅಂಬೇಡ್ಕರ್ ವಿಧಾನಸಭೆ ಹಾಗೂ ಲೋಕಸಭೆ ಬರಬಾರದು ಎಂದು ತಡೆದಿದ್ದರು. ದಲಿತರಿಗೆ ಭೂಮಿ ಕೊಡುವುದಕ್ಕೆ ವಿರೋಧಿಸಿದ್ದರು ಎಂದು ಹೇಳಿದರು.
ಸಂವಿಧಾನ ಉಳಿಸಿ ಎಂಬ ಜಾಗೃತಿ ಮಾಡುತ್ತಿರುವ ಕಾಂಗ್ರೆಸ್ ನವರು ಹಿಂದೆ ದೇಶದಲ್ಲಿ ಬಾರಿ ಬಹುಮತವಿರುವ ಸರ್ಕಾರ ಕೆಡವಿ ಅದಕ್ಕೆ ವಿರೋಧ ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದವರಿಗೆ ಪದ್ಮಭೂಷಣ ನೀಡಿ ಅವಮಾನಿಸಿದರು. ಈ ಎಲ್ಲ ವಿಷಯಗಳು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು. ಮುಂಬರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಕ್ಕೆ ಇಳಿಯಲಿದೆ. ಐಎನ್‌ಡಿಐಎ ಒಕ್ಕೂಟ ಛಿದ್ರ ಛಿದ್ರವಾಗಿದೆ. ರಾಜ್ಯದ ಜನರು ಸಹ ಕಾಂಗ್ರೆಸ್‌ನವರನ್ನು ಮನೆಗೆ ಕಳುಹಿಸಬೇಕು. ದೇಶ ಅಭಿವೃದ್ಧಿಗೆ ಪ್ರಧಾನಿ ಮೋದಿ ಗೆಲ್ಲಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಕಾಂಗ್ರೆಸ್‌ನಂತೆ ಬಿಜೆಪಿ ಯಾವತ್ತು ಜಾತಿ ರಾಜಕಾರಣ ಮಾಡಿಲ್ಲ. ರಾಜಕಾರಣಕ್ಕಾಗಿ ಕಾಂಗ್ರೆಸ್‌ನವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಸಹ ಮುಚ್ಚಿಟ್ಟು ಅವಮಾನ ಮಾಡಿದ್ದರು. ಈಗ ಮತ್ತೆ ಮತ ಬ್ಯಾಂಕ್‌ಗಾಗಿ ಅಂಬೇಡ್ಕರ್ ಗೌರವಿಸುವ ನಾಟಕ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಿಜೆಪಿ ಚಿಂತನೆಗಳು ಒಂದೇ ನಾಣ್ಯದ ಎರಡು ಮುಖಗಳಿದಂತೆ. ಅಂಬೇಡ್ಕರ್ ಅವರು ದೇಶದ ಒಗ್ಗಟ್ಟಿಗೆ ಶ್ರಮಿಸಿದ್ದಾರೆ.
ಆದರೆ, ಕಾಂಗ್ರೆಸ್ ಈಗಲೂ ದೇಶದ ವಿಭಜನೆ ಬಗ್ಗೆ ಮಾತನಾಡುತ್ತದೆ. ಎಸ್.ಸಿ. ಎಸ್‌ಟಿಗಳಿಗೆ ಸೇರಬೇಕಾದ 11 ಸಾವಿರ ಕೋಟಿ ಗ್ಯಾರಂಟಿ ಬಳಸಿಕೊಂಡು ಮೋಸ ಮಾಡಿದೆ ಎಂದರು. ಕೋಲಾರ ಸಂಸದ ಎ. ಮುನಿಸ್ವಾಮಿ ಮಾತನಾಡಿದರು. ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಶಾಸಕ ಸಿಮೆಂಟ್ ಮಂಜು, ರಾಜು ಕೊಟ್ಟೇನ್ನವರ, ತಿಪ್ಪಣ್ಣ ಮಜ್ಜಗಿ, ಡಾ. ಕ್ರಾಂತಿ ಕಿರಣ, ವಾದಿರಾಜ, ಭಾರ್ಗವಿ ದ್ರಾವಿಡ ಇದ್ದರು.