ಜಾಗತಿಕ ಕ್ರೀಡಾ ಹಬ್ಬ ಎಂದೇ ಕರೆಸಿಕೊಳ್ಳುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಈ ಬಾರಿ ಪ್ಯಾರಿಸ್ ಆತಿಥ್ಯ ವಹಿಸಿದೆ. 200ಕ್ಕೂ ಹೆಚ್ಚು ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಈ ಒಲಿಂಪಿಕ್ಸ್ ಮಹಾ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದಾರೆ.
ಇನ್ನು ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಒಲಿಂಪಿಕ್ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಕ್ರೀಡಾಪಟುಗಳಿಗೆ, ಗೌರವಪೂರ್ವಕವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ನೀಡಿ ಗೌರವಿಸಲಾಗುತ್ತಿದೆ
ಇದರ ಜತೆಗೆ ಪದಕ ವಿಜೇತ ಅಥ್ಲೀಟ್‌ಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗೂಢವಾದ ತೆಳ್ಳನೆಯ ಉದ್ದದ ಗಿಫ್ಟ್ ಬಾಕ್ಸ್ ಕೂಡಾ ನೀಡುತ್ತಿರುವುದನ್ನೂ ನೀವು ಗಮನಿಸಿರಬಹುದು. ಅದರೊಳಗೆ ಏನಿರಬಹುದು ಎನ್ನುವ ಕುತೂಹಲ ನಿಮಗೂ ಇರಬಹುದು ಅಲ್ಲವೇ?
ಹೌದು, ಆ ನಿಗೂಢ ಬಾಕ್ಸ್‌ನೊಳಗೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಅಧಿಕೃತ ಪೋಸ್ಟರ್ ಇದೆ. ಇದನ್ನು ಪ್ರಖ್ಯಾತ ಕಲಾವಿದ ಉಗೊ ಗಟ್ಟೋನಿ ವಿನ್ಯಾಸಗೊಳಿಸಿದ್ದಾರೆ. ಈ ಅದ್ಭುತವಾದ ಮೇರು ಕೃತಿಯನ್ನು ಡಿಸೈನ್ ಮಾಡಲು ಗಟ್ಟೋನಿ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ.
ಇನ್ನು ವಿಜೇತ ಅಥ್ಲೀಟ್‌ಗಳಿಗೆ ಪದಕ ಮತ್ತು ಪೋಸ್ಟರ್ ಜತೆಗೆ ಪ್ಯಾರಿಸ್ ಒಲಿಂಪಿಕ್ಸ್‌ನ ಅಧಿಕೃತ ಮ್ಯಾಸ್ಕಾಟ್ ಫ್ರೈಜಿಯನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಈ ಫ್ರೈಜಿ ಪ್ಲಶಿ, ಫ್ರಾನ್ಸ್ ಪರಂಪರೆಯ ಮಹತ್ವದ ಭಾಗವಾಗಿದ್ದು, ಇದು ಫ್ರೆಂಚ್ ಕ್ರಾಂತಿಯನ್ನು ಸಂಕೇತಿಸುತ್ತದೆ.
ಪ್ಯಾರಿಸ್ ಒಲಿಂಪಿಕ್ಸ್ ಪದಕ ಗೆದ್ದ ನೆನಪಿಗಾಗಿ ನೀಡುವ ಈ ಕರಕುಶಲ ವಸ್ತುಗಳನ್ನು ಕರಕುಶಲತೆಗೆ ಹಾಗೂ ಹೆಚ್ಚಿನ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಡೌಡೌ ಮತ್ತು ಕಂಪ್ಯಾನಿ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ.
ಇನ್ನು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ವಿಶೇಷವಾದ ಪ್ಲಶಿ ನೀಡಲು ಸಂಘಟಕರು ತೀರ್ಮಾನಿಸಿದ್ದು, ಬ್ರೈಲ್ ಅಕ್ಷರಗಳನ್ನು ಹೊಂದಿದ ವಿಶಿಷ್ಠವಾದ ಪ್ಲಶಿ ನೀಡಲಿದ್ದಾರೆ.
ಪ್ಲಶಿ ಮತ್ತು ಪೋಸ್ಟರ್ ಉಡುಗೊರೆಗಳು ಫ್ರಾನ್ಸ್‌ನ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಐತಿಹಾಸಿಕ ಮಹತ್ವವನ್ನು ಪ್ರತಿಬಿಂಬಿಸುತ್ತವೆ. ಇದು ಪದಕ ವಿಜೇತ ಕ್ರೀಡಾಪಟುಗಳಿಗೆ ನೆನಪಿನ ಸ್ಮರಣಿಕೆ ರೂಪದಲ್ಲಿ ನೀಡಲಾಗುತ್ತಿದೆ.