1. ನೀರಜ್ ಚೋಪ್ರಾ - ಜಾವೆಲಿನ್ ಥ್ರೋ
2021ರ ಟೋಕಿಯೋ ಗೇಮ್ಸ್‌ನ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದ ನೀರಜ್ ಚೋಪ್ರಾ, ಸತತ 2 ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನ್ನುವ ಮತ್ತೊಂದು ಇತಿಹಾಸ ಬರೆಯಲು ಹಾತೊರೆಯು ತ್ತಿದ್ದಾರೆ. ಟೋಕಿಯೋ ಬಳಿಕ ಫಿಟ್ನೆಸ್ ಸಮಸ್ಯೆ ನೀರಜ್‌ರನ್ನು ಬಲವಾಗಿ ಕಾಡಿದೆ. ಕೊನೆ ಬಾರಿಗೆ ಅವರು ಸ್ಪರ್ಧೆಗಿಳಿದಿದ್ದು, ಜೂ.18ರಂದು. ಫಿನ್‌ಲ್ಯಾಂಡ್‌ನ ನುರ್ಮಿ ಗೇಮ್ಸ್‌ನಲ್ಲಿ 85.97 ಮೀ. ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಗೆದ್ದಿದದರು.
2. ಪಿ.ವಿ.ಸಿಂಧು - ಬ್ಯಾಡ್ಮಿಂಟನ್
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಭಾರತದ ಶಟ್ಲರ್ ಪಿ.ವಿ.ಸಿಂಧು, ಕಳೆದೊಂದು ವರ್ಷದಿಂದ ಲಯದಲ್ಲಿಲ್ಲ. ಅವರು ಕಳೆದ 2 ವರ್ಷಗಳಲ್ಲಿ ಪ್ರಶಸ್ತಿ ಗೆದ್ದಿಲ್ಲ. ಹಲವು ಟೂರ್ನಿಗಳ ಆರಂಭಿಕ ಸುತ್ತುಗಳಲ್ಲೇ ಎಡವಿದ್ದರೂ, ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಭರವಸೆ ಎನಿಸಿದ್ದಾರೆ. ಪ್ಯಾರಿಸ್ ಗೇಮ್ಸ್‌ಗೆ ಜರ್ಮನಿಯಲ್ಲಿ ಒಂದು ತಿಂಗಳು ಅಭ್ಯಾಸ ನಡೆಸಿರುವ ಸಿಂಧು, ಒಲಿಂಪಿಕ್ಸ್‌ನಲ್ಲಿ 3 ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ದಾಖಲೆ ಬರೆಯಲು ಕಾಯುತ್ತಿದ್ದಾರೆ.
3. ವಿನೇಶ್ ಫೋಗಟ್ - ಕುಸ್ತಿ
ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ರಸ್ತೆಗಿಳಿದು ಹೋರಾಡಿದ್ದ ವಿನೇಶ್ ಫೋಗಟ್, ಈಗ ತಮ್ಮ ಜೀವನದ ಅತಿದೊಡ್ಡ ಹೋರಾಟಕ್ಕೆ ಅಣಿಯಾಗಿದ್ದಾರೆ. ಡಬ್ಲ್ಯುಎಫ್‌ಐ ಜೊತೆಗಿನ ಗುದ್ದಾಟದಲ್ಲೇ ಹೆಚ್ಚು ಸಮಯ ಕಳೆದಿರುವ ವಿನೇಶ್, ಜೂನ್‌ನಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ರ್‍ಯಾಂಕಿಂಗ್ ಸರಣಿಯ ಕ್ವಾರ್ಟರ್‌ನಲ್ಲಿ ಸೋತಿದ್ದರು. ಒಲಿಂಪಿಕ್ಸ್‌ಗೆ ಸ್ಪೇನ್, ಫ್ರಾನ್ಸ್‌ನಲ್ಲಿ ಒಂದು ತಿಂಗಳು ಕಾಲ ತಯಾರಿ ನಡೆಸಿದ್ದಾರೆ.
4. ಮಿರಾಬಾಯಿ ಚಾನು - ವೇಟ್‌ಲಿಫ್ಟಿಂಗ್
ಟೋಕಿಯೋ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ಬರೆದಿದ್ದ ಮೀರಾಬಾಯಿ ಚಾನು, ಮತ್ತೊಮ್ಮೆ ಒಲಿಂಪಿಕ್ಸ್ ಪೋಡಿಯಂಗೇರಲು ಕಾಯುತ್ತಿದ್ದಾರೆ. ಗಾಯದಿಂದಾಗ ಹೆಚ್ಚೂ ಕಡಿಮೆ 8-10 ತಿಂಗಳ ಕಾಲ ಸ್ಪರ್ಧೆಯಿಂದ ದೂರವಿದ್ದ ಚಾನು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಹಿಂದೆ ಬೀಳಲಿಲ್ಲ. ಚಾನು ಸ್ಪರ್ಧಿಸುವ 49 ಕೆ.ಜಿ. ವಿಭಾಗದಲ್ಲಿ ಪ್ರಬಲ ಸ್ಪರ್ಧೆ ಇರಲಿದ್ದು, 2ನೇ ಪದಕ ಗೆಲ್ಲಬೇಕಿದ್ದರೆ ಅವರು 200-210 ಕೆ.ಜಿ. ತೂಕ ಎತ್ತಬೇಕಿದೆ.
5. ನಿಖಾತ್ ಜರೀನ್ - ಬಾಕ್ಸಿಂಗ್
2 ಬಾರಿ ವಿಶ್ವ ಚಾಂಪಿಯನ್ ಬಾಕ್ಸರ್ ನಿಖಾತ್ ಜರೀನ್ ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ 52 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆ ಮಾಡಲಿದ್ದು, ಪದಕಕ್ಕೆ ಪಂಚ್ ನೀಡಲು ಎದುರು ನೋಡುತ್ತಿದ್ದಾರೆ. ಕೊನೆಯದಾಗಿ ಅವರು ಮೇನಲ್ಲಿ ನಡೆದ ಎಲ್ರೊಡಾ ಕಪ್‌ನಲ್ಲಿ ಚಿನ್ನ ಗೆದ್ದಿದ್ದರು. ನಿಖಾತ್ ಸೇರಿ ಪ್ಯಾರಿಸ್ ಗೇಮ್ಸ್‌ಗೆ ಅರ್ಹತೆ ಪಡೆದಿರುವ ಭಾರತದ 5 ಬಾಕ್ಸರ್‌ಗಳು ಜರ್ಮನಿಯ ಸಾರ್ಬ್ರುಕೆನ್‌ನಲ್ಲಿ 1 ತಿಂಗಳು ಕಾಲ ಕಠಿಣ ಅಭ್ಯಾಸ ನಡೆಸಿ ಪ್ಯಾರಿಸ್ ತಲುಪಿದ್ದಾರೆ.
6. ಸಿಫ್ತ್ ಕೌರ್ ಸಾಮ್ರಾ - ಶೂಟಿಂಗ್
ಕ್ರೀಡಾಪಟುವಾಗಬೇಕು ಎಂದು ಮೆಡಿಕಲ್ ವಿದ್ಯಾಭ್ಯಾಸವನ್ನು ಬಿಟ್ಟ ಸಿಫ್ತ್ ಕೌರ್ ಸಾಮ್ರಾ, ಭಾರತೀಯ ಶೂಟಿಂಗ್ ಎದುರಿಸುತ್ತಿರುವ ಒಲಿಂಪಿಕ್ಸ್ ಪದಕ ಬರವನ್ನು ನೀಗಿಸುವ ಅವಕಾಶ ಸಿಕ್ಕಿದೆ. ಏಷ್ಯನ್ ಗೇಮ್ಸ್ ಚಿನ್ನ ವಿಜೇತೆ ಕೌರ್, ಪ್ಯಾರಿಸ್ ಗೇಮ್ಸ್‌ನಲ್ಲಿ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ತಿಂಗಳು ಮ್ಯೂನಿಕ್ ವಿಶ್ವಕಪ್‌ನಲ್ಲಿ ಸಿಫ್ತ್ ಕೇವಲ 0.1 ಅಂಕಗಳಿಂದ ಬೆಳ್ಳಿ ಪದಕ ತಪ್ಪಿಸಿಕೊಂಡು, ಕಂಚು ಪಡೆದಿದ್ದರು.
7. ಸಾತ್ವಿಕ್-ಚಿರಾಗ್ - ಬ್ಯಾಡ್ಮಿಂಟನ್
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೇರಲು ವಿಫಲವಾದ ಬಳಿಕ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ, ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ‘ಕ್ರಾಂತಿಕಾರಿ’ ಆಟವಾಡಿದ್ದಾರೆ. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಈ ಜೋಡಿ, ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿ ದಾಖಲೆ ಕೂಡ ಬರೆದಿದೆ. ಈ ಜೋಡಿ ಮೇಲೆ ಭಾರತ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.
8. ಲವ್ಲೀನಾ ಬೊರ್ಗೊಹೈನ್ - ಬಾಕ್ಸಿಂಗ್
ಟೋಕಿಯೋ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಲವ್ಲೀನಾ ಬೊರ್ಗೊಹೈನ್, ಸತತ 2ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಿದ್ಧತೆ ನಡೆಸಿದ್ದಾರೆ. ಇತ್ತೀಚೆಗೆ ಚೆಕ್ ಗ್ರ್ಯಾನ್ ಪ್ರಿ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಲವ್ಲೀನಾ, ಬೆಳ್ಳಿ ಪಡೆದಿದ್ದರು. 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಗಿಳಿಯಲಿರುವ ಲವ್ಲೀನಾಗೆ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಲವ್ಲೀನಾ ಕೂಡ ಜರ್ಮನಿಯಲ್ಲಿ 1 ತಿಂಗಳು ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಪ್ಯಾರಿಸ್ ತಲುಪಿದ್ದಾರೆ.
9. ಪುರುಷರ ಹಾಕಿ ತಂಡ
ಟೋಕಿಯೋದಲ್ಲಿ 41 ವರ್ಷಗಳ ಬಳಿಕ ಒಲಿಂಪಿಕ್ಸ್ ಪದಕ ಗೆದ್ದು, ಭಾರತೀಯ ಹಾಕಿಗೆ ಮರುಜೀವ ನೀಡಿದ್ದ ತಂಡ ಮತ್ತೊಮ್ಮೆ ಪದಕ ಬೇಟೆಗೆ ಸಜ್ಜಾಗಿದೆ. ಹರ್ಮನ್‌ಪ್ರೀತ್ ಸಿಂಗ್ ಈ ಬಾರಿ ತಂಡ ಮುನ್ನಡೆಸಲಿದ್ದು, ಭಾರತ ಹಾಕಿಯ ಗೋಡೆ ಎಂದೇ ಕರೆಸಿಕೊಳ್ಳುವ ಶ್ರೀಜೇಶ್ ತಂಡದಲ್ಲಿರುವ ಏಕೈಕ ಗೋಲ್‌ಕೀಪರ್. ಎಫ್ಐಎಚ್ ಪ್ರೊ ಲೀಗ್‌ನ ಯುರೋಪ್ ಚರಣದಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸದ ಭಾರತ, ಪ್ಯಾರಿಸ್ ಗೇಮ್ಸ್‌ಗೂ ಮುನ್ನ ಲಯ ಕಂಡುಕೊಳ್ಳಲು ಎದುರು ನೋಡುತ್ತಿದೆ.
10. ಅದಿತಿ ಅಶೋಕ್ - ಗಾಲ್ಫ್
ಟೋಕಿಯೋ ಗೇಮ್ಸ್‌ನಲ್ಲಿ ಇಡೀ ಭಾರತಕ್ಕೆ ಗಾಲ್ಫ್ ಕ್ರೀಡೆ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿದ್ದ ಕನ್ನಡತಿ ಅದಿತಿ ಅಶೋಕ್, 3 ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ಸಲ ಐತಿಹಾಸಿಕ 4ನೇ ಸ್ಥಾನ ಪಡೆದಿದ್ದ ಅದಿತಿ, ಈ ಬಾರಿ ಚೊಚ್ಚಲ ಪದಕ ಗೆಲ್ಲಲು ಹಪಹಪಿಸುತ್ತಿದ್ದಾರೆ. ಈ ವರ್ಷ ನಿರೀಕ್ಷಿತ ಲಯದಲ್ಲಿ ಇಲ್ಲದಿದ್ದರೂ, ಒಲಿಂಪಿಕ್ಸ್‌ನಲ್ಲಿ ಸುಧಾರಿತ ಆಟವಾಡಲು ಸಿದ್ಧತೆ ಮಾಡಿಕೊಂಡಿರುವ ಅದಿತಿ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ.