'ಸಿಎಂ' ಸಿದ್ದರಾಮಯ್ಯ ಪರ ಹೇಳಿಕೆ ಬರುತ್ತಿರೋದೇಕೆ? ಇಲ್ಲಿವೆ 5 ಕಾರಣಗಳು

First Published | May 8, 2019, 7:54 AM IST

ಪ್ರತಿಪಕ್ಷ ಬಿಜೆಪಿಯಲ್ಲಿ ಮುಂದಿನ ರಾಜ್ಯಾಧ್ಯಕ್ಷರ ಬಗ್ಗೆ ಬಿರುಸಿನ ಚರ್ಚೆ ಆರಂಭವಾಗಿರುವಂತೆಯೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿಯ ಬಗ್ಗೆ ಭರದ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಹೇಳಿಕೆ ನೀಡುತ್ತಿರೋದೇಕೆ? ಇಲ್ಲಿವೆ 5 ಕಾರಣಗಳು

1. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್‌ ಶಾಸಕರ ಅಸಮಾಧಾನದಿಂದ ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಅಪಾಯಕ್ಕೆ ಸಿಲುಕಿದರೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬಹುದು. ಹಾಗೆ ಬಿಟ್ಟು ಕೊಡುವಾಗ ಅವರು ಸಹಜವಾಗಿಯೇ ಉಪಮುಖ್ಯಮಂತ್ರಿಯಾಗಿರುವ ಡಾ| ಜಿ.ಪರಮೇಶ್ವರ್‌ ಅವರನ್ನು ಸೂಚಿಸಬಹುದು ಎಂಬ ವದಂತಿಯಿದೆ.
2. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೊಬ್ಬರಿಗೆ ಮುಂದಿನ ಮುಖ್ಯಮಂತ್ರಿ ಸ್ಥಾನ ದಕ್ಕಬಾರದು ಎಂಬ ಒತ್ತಾಸೆ ಅವರ ಬೆಂಬಲಿಗರಲ್ಲಿ ಬಲವಾಗಿ ಇದ್ದಂತಿದೆ. ಹೀಗಾಗಿ, ಇದಕ್ಕೆ ಈಗಿನಿಂದಲೇ ವೇದಿಕೆ ಸಿದ್ಧಗೊಳಿಸುವುದರಲ್ಲಿ ನಿರತರಾಗಿರಬಹುದು
Tap to resize

3. ತಮ್ಮದು ದೊಡ್ಡ ಪಕ್ಷವಾದರೂ ಕಡಿಮೆ ಶಾಸಕರ ಬಲ ಹೊಂದಿರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದರ ಬಗ್ಗೆ ಕಾಂಗ್ರೆಸ್‌ನಲ್ಲಿ ಆರಂಭದಿಂದಲೂ ಅತೃಪ್ತಿ ಇದ್ದೇ ಇದೆ. ಜೊತೆಗೆ ಕಾಂಗ್ರೆಸ್ಸಿನ ಕೆಲವು ಶಾಸಕರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಾರ್ಯವೈಖರಿ ಬಗ್ಗೆ ಆಗಾಗ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಹೀಗಾಗಿ, ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಆಧರಿಸಿ ರಾಜ್ಯದಲ್ಲಿ ಒಂದು ವರ್ಷದಿಂದ ಜೆಡಿಎಸ್‌ಗೆ ನೀಡಿರುವ ಬೆಂಬಲದಲ್ಲಿ ತುಸು ಮಾರ್ಪಾಡು ಮಾಡಲು ಕಾಂಗ್ರೆಸ್‌ ನಾಯಕರು ಬಯಸಿರಬಹುದು.
4. ಕಾಂಗ್ರೆಸ್‌ನ ಅತೃಪ್ತ ಶಾಸಕರ ಪೈಕಿ ಬಹುತೇಕರು ಸಿದ್ದರಾಮಯ್ಯ ಅವರ ಬಗ್ಗೆ ವಿಶ್ವಾಸ ಮತ್ತು ಒಲವು ಹೊಂದಿದ್ದಾರೆ. ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಸುದ್ದಿ ದಟ್ಟವಾದರೆ ಕಾಂಗ್ರೆಸ್‌ ಪಕ್ಷದಲ್ಲಿನ ಅತೃಪ್ತ ಶಾಸಕರೂ ಸದ್ಯಕ್ಕೆ ಸಮಾಧಾನಗೊಳ್ಳಬಹುದು. ಬಿಜೆಪಿಗೆ ವಲಸೆ ಹೋಗಲು ಮನಸ್ಸು ಮಾಡುತ್ತಿರುವ ಶಾಸಕರು ತಮ್ಮ ನಿಲುವನ್ನು ಕೈಬಿಟ್ಟು ಕಾಂಗ್ರೆಸ್‌ನಲ್ಲೇ ಉಳಿಯುವ ಮನಸ್ಸು ಮಾಡಬಹುದು ಎಂಬ ಲೆಕ್ಕಾಚಾರವೂ ಇರಬಹುದು.
5. ಒಂದು ವೇಳೆ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಲಭಿಸಬಹುದಾದಲ್ಲಿ ಆಗ ಪಕ್ಷದ ವರಿಷ್ಠರು ಬೇರೊಬ್ಬ ನಾಯಕನನ್ನು ಆ ಸ್ಥಾನದಲ್ಲಿ ತಂದು ಕೂರಿಸುವ ಬಗ್ಗೆ ಯೋಚನೆ ಮಾಡದಂತೆ ತಡೆ ಹಾಕುವ ಸಲುವಾಗಿ ಈಗಿನಿಂದಲೇ ಸಿದ್ದರಾಮಯ್ಯ ಅವರ ಹೆಸರನ್ನು ಅವರ ಬೆಂಬಲಿಗರು ಪದೇ ಪದೇ ಪ್ರಸ್ತಾಪ ಮಾಡುತ್ತಿರಬಹುದು.

Latest Videos

click me!