ಬೆಂಗಳೂರು ಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನ್ ಚಿತ್ರಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ: ಪ್ರಕಾಶ್‌ ರಾಜ್‌ ಆಕ್ರೋಶ

Published : Jan 30, 2026, 09:55 AM IST

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೇನ್‌ ಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡದ್ದನ್ನು ರಾಯಭಾರಿ ಪ್ರಕಾಶ್ ರಾಜ್ ವಿರೋಧಿಸಿದ್ದಾರೆ. ಚಿತ್ರಗಳು ಸಮಾಜದ ಅಂಕು-ಡೊಂಕು ತಿದ್ದಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

PREV
18

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೇನ್‌ ಚಿತ್ರಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ ಎಂದು ಚಿತ್ರೋತ್ಸವದ ರಾಯಭಾರಿಯೂ ಆಗಿರುವ ನಟ ಪ್ರಕಾಶ್‌ ರಾಜ್‌ ವಿರೋಧ ವ್ಯಕ್ತಪಡಿಸಿದ್ದಾರೆ.

28

ಪ್ಯಾಲೆಸ್ತೇನ್‌ ಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಲುವು ತೆಗೆದುಕೊಳ್ಳಬೇಕು. ಈ ಹಿಂದೆ ಇದೇ ರೀತಿ ಮಾಡಿದ್ದಾಗ ಕೇರಳ ಸರ್ಕಾರ ಇದನ್ನು ಮೀರಿ ಚಿತ್ರ ಪ್ರದರ್ಶನ ಮಾಡಿತು. ಕೇಂದ್ರದ ರಾಜಕೀಯ ಹುನ್ನಾರ ನಡೆಯುವುದಿಲ್ಲ ಎಂದು ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಬೇಕು. ಇದು ರಾಯಭಾರಿಯಾಗಿ ನನ್ನ ಮನವಿಯಲ್ಲ, ಒತ್ತಾಯ ಎಂದು ಸ್ಪಷ್ಟಪಡಿಸಿದರು.

38

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಚಲನಚಿತ್ರಗಳು ಮನೋರಂಜನೆಗಷ್ಟೇ ಸೀಮಿತವಾಗಬಾರದು. ಸಮಾಜದ ಅಂಕು-ಡೊಂಕುಗಳನ್ನು ತಿದ್ದಬೇಕು ಎಂದು ಹೇಳಿದರು.

48

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಮಾರಂಭದಲ್ಲಿ ‘17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಸಮಾನತೆ, ಬಡತನ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಮಹಿಳೆಯರ ವಾಸ್ತವ ಸ್ಥಿತಿಯನ್ನು ಚಲನಚಿತ್ರಗಳು ತೆರೆದಿಡಬೇಕು. ಈ ಸಮುದಾಯಗಳ ಬೆಳವಣಿಗೆ ಮತ್ತು ಬದಲಾವಣೆಗೆ ಆತ್ಮವಿಶ್ವಾಸ ತುಂಬುವ ಕೆಲಸ ನಿರ್ವಹಿಸಬೇಕು. ಡಾ.ರಾಜ್‌ಕುಮಾರ್‌ ಅವರ ಚಲನಚಿತ್ರಗಳಲ್ಲಿ ಇದನ್ನು ಕಾಣಬಹುದಿತ್ತು ಎಂದು ತಿಳಿಸಿದರು.

58

ಬೇರೆ ದೇಶಗಳ ಜನಜೀವನ, ಸಮಾಜದ ಸಮಾನತೆ ಅಥವಾ ಅಸಮಾನತೆ ಅರ್ಥ ಮಾಡಿಕೊಳ್ಳಲು ಈ ಚಿತ್ರೋತ್ಸವ ಸುವರ್ಣ ಅವಕಾಶವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿ, ಸ್ನೇಹದಿಂದ ಕಾಣಬೇಕು. ಹೀಗಾದರೆ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಬೇರೆ ದೇಶಗಳ ಜನಜೀವನ ಹೇಗಿದೆ, ಅಲ್ಲಿ ಏಕೆ ಬದಲಾವಣೆಗಳಾಗುತ್ತಿವೆ, ಇಲ್ಲಿ ಏಕೆ ಅದು ಸಾಧ್ಯವಾಗುತ್ತಿಲ್ಲ ಎಂದು ವಾಸ್ತವ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

68

ಸಮಾಜಮುಖಿ ಸಿನಿಮಾ ನಿರ್ಮಾಣ ಮಾಡುವವರಿಗೆ, ಚಿತ್ರೋದ್ಯಮದ ಅಭಿವೃದ್ಧಿಗೆ ನಮ್ಮ ಸರ್ಕಾರವು ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುತ್ತದೆ. ಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌ ಅವರು ಸಿನಿಮಾಕ್ಕೆ ಮಾತ್ರ ಸೀಮಿತವಾಗದೇ ಸಾಮಾಜಿಕ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದಾರೆ. ಇದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

78

ಜ.30 ರಿಂದ ಫೆ.6 ರವರೆಗೂ ಚಿತ್ರೋತ್ಸವ ನಡೆಯಲಿದ್ದು 70 ದೇಶಗಳ ಆಯ್ದ 240 ವಿಶೇಷ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಪ್ರಶಸ್ತಿ ವಿಜೇತ 100 ಚಿತ್ರಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. 30ಕ್ಕೂ ಅಧಿಕ ಭಾರತೀಯ ಭಾಷೆಗಳ ಚಿತ್ರಗಳ ಪ್ರದರ್ಶನವೂ ಇರಲಿದೆ. ಕಳೆದ ಬಾರಿ ಸರ್ವ ಜನಾಂಗದ ತೋಟ ಶೀರ್ಷಿಕೆಯಡಿ ಚಿತ್ರೋತ್ಸವ ಆಯೋಜಿಸಿದ್ದು ಈ ಬಾರಿ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಶೀರ್ಷಿಕೆಯಡಿ ಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

88

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ, ಶಾಸಕ ರಿಜ್ವಾನ್‌ ಹರ್ಷದ್‌, ನಟಿ ರುಕ್ಮಿಣಿ ವಸಂತ್‌, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories