ಬಾಲಿವುಡ್ ನಟ ಸಂಜಯ್ ದತ್ ಅವರು ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಮಂಗಳೂರಿನಲ್ಲಿ ನಡೆದ ಬಿರುವರ್ ಕುಡ್ಲ ಪಿಲಿ ಊದು ಪೂಜೆಯಲ್ಲಿ ಪಾಲ್ಗೊಳ್ಳಲು ಕರಾವಳಿಗೆ ಆಗಮಿಸಿದ್ದರು.
ಇನ್ನು ಖ್ಯಾತ ಕ್ರಿಕೆಟಿಗ ಶಿವಂ ದುಬೆ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ 'ಪಿಲಿನಲಿಕೆ' ಸಂಭ್ರಮದಲ್ಲಿ ಭಾಗಿಯಾಗಲು ಅತಿಥಿಯಾಗಿ ಆಗಮಿಸಿದ್ದರು. ಇವರು ಕೂಡ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.
ತುಳುನಾಡಿನ ಸಾಂಪ್ರದಾಯಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಹುಲಿ ಕುಣಿತದ 9ನೇ ವರ್ಷದ ‘ಪಿಲಿನಲಿಕೆ’ ಹುಲಿ ವೇಷ ಸ್ಪರ್ಧೆ ಮಂಗಳೂರು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಅ.12ರಂದು ನಡೆಯಿತು ಪಿಲಿನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿವಿ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.
ಪಿಲಿನಲಿಕೆಯಲ್ಲಿ ಈ ಬಾರಿ ಪ್ರತಿಷ್ಠಿತ 11 ತಂಡಗಳು ಭಾಗವಹಿಸಿದ್ದವು. ಪ್ರತಿವರ್ಷದಂತೆ ವಿವಿಧೆಡೆಗಳಿಂದ ಸಹಸ್ರಾರು ಮಂದಿ ವೀಕ್ಷಿಸಿದರು. ‘ಪಿಲಿನಲಿಕೆ’ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಕೂಡ ಉಪಸ್ಥಿತಿ ಇದ್ದರು.
ಹುಲಿ ವೇಷದ ಸಂಪ್ರದಾಯ ಹಾಗೂ ಮೂಲ ಸೊಗಡನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಪ್ರತಿವರ್ಷ ಈ ಪಿಲಿನಲಿಕೆ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಸ್ಪರ್ಧೆಯಲ್ಲಿ ಒಟ್ಟು 18 ಲಕ್ಷ ರು. ಮೌಲ್ಯದ ಬಹುಮಾನ ನಿಗದಿಗೊಳಿಸಲಾಗಿತ್ತು.
ಪ್ರಥಮ ಬಹುಮಾನ ವಿಜೇತ ತಂಡಕ್ಕೆ 5 ಲಕ್ಷ ರು. ಹಾಗೂ ಪ್ರಶಸ್ತಿ ಪತ್ರ ಜೊತೆಗೆ ಈ ತಂಡ ಬಹರೇನ್‌ನ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದೆ. ಪಿಲಿನಲಿಕೆಗೆ ಮೆರುಗು ನೀಡಲು ಹೆಸರಾಂತ ನಟರಾದ ರಿಷಬ್ ಶೆಟ್ಟಿ, ಡಾಲಿ ಧನಂಜಯ್, ರಾಜ್ ಬಿ ಶೆಟ್ಟಿ, ಬಾಲಿವುಡ್ ನಟ ಸಂಜಯ್ ದತ್, ಕ್ರಿಕೆಟ್ ತಾರೆ ಶಿವಂ ದುಬೆ ಅವರನ್ನು ಆಹ್ವಾನಿಸಲಾಗಿತ್ತು.
ಪಿಲಿ ನಲಿಕೆ ಸ್ಪರ್ಧೆಗೆ ಆಯ್ಕೆಯಾದ ಪ್ರತಿ ತಂಡದಲ್ಲಿ ಒಬ್ಬೊಬ್ಬ ಬಡ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಅವರ ವೃತ್ತಿ ಶಿಕ್ಷಣ, ಉನ್ನತ ಶಿಕ್ಷಣ ಪಡೆಯುತ್ತಿದ್ದರೆ ಅಂತವರಿಗೆ 25 ಸಾವಿರದಿಂದ 1 ಲಕ್ಷ ರು.ವರೆಗೆ ವಿದ್ಯಾನಿಧಿ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ ಎಂದು ಮಿಥುನ್ ರೈ ಈಗಾಗಲೇ ತಿಳಿಸಿದ್ದಾರೆ.