2018ರ ಸುಳ್ವಾಡಿ ವಿಷ ಪ್ರಸಾದ ದುರಂತ ನಡೆದು ಏಳು ವರ್ಷಗಳಾದರೂ, ಸಂತ್ರಸ್ತರು ಇಂದಿಗೂ ಅನಾರೋಗ್ಯ ಮತ್ತು ಸರ್ಕಾರದ ಈಡೇರದ ಭರವಸೆಗಳಿಂದ ನರಳುತ್ತಿದ್ದಾರೆ. 17 ಮಂದಿಯನ್ನು ಬಲಿಪಡೆದ ಈ ಘಟನೆಯ ಪ್ರಮುಖ ಆರೋಪಿಗೆ ಜಾಮೀನು ಸಿಕ್ಕಿರುವುದು ಅವರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ 2018ರಲ್ಲಿ ನಡೆದ ವಿಷಮಿಶ್ರಿತ ಪ್ರಸಾದ ದುರಂತಕ್ಕೆ ಏಳು ವರ್ಷಗಳು ಕಳೆದರೂ, ಸಂತ್ರಸ್ತ ಕುಟುಂಬಗಳ ಬದುಕು ಇನ್ನೂ ಸಂಕಷ್ಟದ ನೆರಳಲ್ಲೇ ಸಾಗುತ್ತಿದೆ. 17 ಮಂದಿ ಅಮಾಯಕ ಭಕ್ತರು ಪ್ರಾಣ ಕಳೆದುಕೊಂಡ ಈ ಭೀಕರ ಘಟನೆಯಲ್ಲಿ 123ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ವಿಷ ಪ್ರಸಾದ ಸೇವಿಸಿ ಬದುಕುಳಿದವರ ಜೀವನ ಇಂದಿಗೂ ಅನಾರೋಗ್ಯ, ನೋವು ಮತ್ತು ನಿರಾಶೆಯ ನಡುವೆ ಸಿಲುಕಿದೆ.
27
ವಿಷ ಪ್ರಸಾದದಿಂದ ಬದುಕುಳಿದವರ ನೋವಿನ ದಿನಗಳು
ವಿಷ ಪ್ರಸಾದ ಸೇವಿಸಿ ಬದುಕುಳಿದವರ ಸ್ಥಿತಿ ದಿನೇ ದಿನೇ ದುಸ್ತರವಾಗುತ್ತಿದೆ. ಪದೇಪದೇ ಕಾಡುವ ಅನಾರೋಗ್ಯ, ತಲೆಸುತ್ತು, ಹೊಟ್ಟೆ ಉಬ್ಬರ, ತೀವ್ರ ನಿತ್ರಾಣ, ಕಣ್ಣು ತೆರೆಯಲಾಗದಷ್ಟು ಬಿಸಿಲಿನ ತೊಂದರೆ ಸೇರಿದಂತೆ ಒಂದೊಂದು ಮಂದಿಗೆ ಒಂದೊಂದು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಿವೆ. ತಲೆಸುತ್ತು ಮತ್ತು ಶಾರೀರಿಕ ಅಶಕ್ತತೆಯಿಂದಾಗಿ ಅನೇಕರು ಕೂಲಿ ಕೆಲಸಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ.
“ಬದುಕಿದ್ದರೂ ಸತ್ತವರಂತಾಗಿದೆ ನಮ್ಮ ಜೀವನ” ಎಂದು ಸಂತ್ರಸ್ತರು ನೋವಿನಿಂದ ಅಳಲು ತೋಡಿಕೊಳ್ಳುತ್ತಿದ್ದಾರೆ.
37
ಪರಿಹಾರ ನೀಡಿದರೂ ಭರವಸೆಗಳು ಈಡೇರಿಲ್ಲ
ಘಟನೆ ಬಳಿಕ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 8 ಲಕ್ಷ ರೂಪಾಯಿ ಹಾಗೂ ಅಸ್ವಸ್ಥರಿಗೆ 3.5 ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಅಲ್ಲದೆ ಮೃತರ ಕುಟುಂಬಗಳಿಗೆ ತಲಾ ಎರಡು ಎಕರೆ ಜಮೀನು, ನಿವೇಶನ ಹಾಗೂ ಮನೆ ನಿರ್ಮಾಣ; ಅಸ್ವಸ್ಥರಿಗೆ ಮನೆ ಹಾಗೂ ನಿವೇಶನ ಒದಗಿಸುವುದಾಗಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದರು. ಆದರೆ ಏಳು ವರ್ಷಗಳಾದರೂ ಈ ಭರವಸೆಗಳಾವುದೂ ಸಂಪೂರ್ಣವಾಗಿ ಈಡೇರಿಲ್ಲ. ಭರವಸೆಯ ಮಾತುಗಳು ಕಾಗದದಲ್ಲೇ ಉಳಿದಿದ್ದು, ಸಂತ್ರಸ್ತ ಕುಟುಂಬಗಳು ಇಂದಿಗೂ ಮೂಲಭೂತ ಸೌಲಭ್ಯಗಳಿಗಾಗಿ ಹೋರಾಡುತ್ತಿವೆ.
ಇನ್ನೊಂದೆಡೆ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಷರತ್ತುಬದ್ಧ ಜಾಮೀನು ದೊರೆತಿರುವುದು ಸಂತ್ರಸ್ತ ಕುಟುಂಬಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅನಾರೋಗ್ಯ ಕಾರಣ ನೀಡಿ, ಒಂದು ವರ್ಷದ ಅವಧಿಗೆ ನ್ಯಾಯಾಲಯದಿಂದ ಜಾಮೀನು ಪಡೆದು ಅವರು ಜೈಲಿನಿಂದ ಹೊರಬಂದಿದ್ದಾರೆ. “ನಮಗೆ ನ್ಯಾಯ ಸಿಕ್ಕಿಲ್ಲ, ಆದರೆ ಆರೋಪಿಗಳಿಗೆ ರಿಲೀಫ್ ಸಿಗುತ್ತಿದೆ” ಎಂಬ ಅಸಮಾಧಾನ ಸಂತ್ರಸ್ತರ ಮಾತುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
57
ದುರಂತದ ಹಿನ್ನೆಲೆ
2018ರ ಡಿಸೆಂಬರ್ 14ರಂದು ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಗೋಪುರ ನಿರ್ಮಾಣದ ಗುದ್ದಲಿ ಪೂಜೆ ವೇಳೆ ವಿತರಿಸಲಾದ ಪ್ರಸಾದದಲ್ಲಿ ವಿಷ ಮಿಶ್ರಣ ಮಾಡಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಪ್ರಭಾವ ಸಾಧಿಸುವ ಉದ್ದೇಶದಿಂದ ಈ ಕೃತ್ಯ ನಡೆದಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ವಿಷಮಿಶ್ರಿತ ಪ್ರಸಾದ ಸೇವಿಸಿದ ಪರಿಣಾಮ 17 ಮಂದಿ ಭಕ್ತರು ಸಾವನ್ನಪ್ಪಿ, 123ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು.
67
ಆರೋಪಿಗಳು ಯಾರು?
ಪ್ರಕರಣದಲ್ಲಿ ಇಮ್ಮಡಿ ಮಹದೇವಸ್ವಾಮಿ ಮೊದಲನೇ ಆರೋಪಿಯಾಗಿದ್ದು, ಎರಡನೇ ಆರೋಪಿ ದೇವಸ್ಥಾನದ ಮ್ಯಾನೇಜರ್ ಪತ್ನಿ ಅಂಬಿಕಾ, ಮೂರನೇ ಆರೋಪಿ ಮ್ಯಾನೇಜರ್ ಮಾದೇಶ್ ಹಾಗೂ ನಾಲ್ಕನೇ ಆರೋಪಿ ನಾಗರಕಲ್ಲು ಅರ್ಚಕರಾದ ದೊಡ್ಡಯ್ಯ ತಂಬಡಿ. ಮಹದೇವಸ್ವಾಮಿ 2018ರಿಂದ ಮೈಸೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದು, ಸದ್ಯ ಹೊರಗಡೆ ಆರಾಮವಾಗಿದ್ದಾನೆ.
77
ಮರಣಗಳ ಹಿಂದೆ ಉಳಿದ ನೋವಿನ ಕಥೆಗಳು
ಈ ದುರಂತದಲ್ಲಿ ದುಡಿಯುತ್ತಿದ್ದ ಮಗನನ್ನು ಕಳೆದುಕೊಂಡ ಕುಟುಂಬ, ವೃದ್ಧ ತಾಯಿ–ತಂದೆಯನ್ನು ಕಳೆದುಕೊಂಡ ಮಕ್ಕಳು, ಪ್ರೀತಿಯ ಅಜ್ಜನನ್ನು ಕಳೆದುಕೊಂಡ ಮೊಮ್ಮಕ್ಕಳು, ಹುಟ್ಟುಹಬ್ಬದ ದಿನವೇ ಪ್ರಾಣ ಬಿಟ್ಟ ಮಗು, ರೋಗಪೀಡಿತ ಮಗನ ಆರೋಗ್ಯಕ್ಕಾಗಿ ದೇವಾಲಯಕ್ಕೆ ಬಂದ ತಾಯಿ ತಾನೇ ಮಸಣ ಸೇರಿದಂತಹ ಅನೇಕ ಹೃದಯವಿದ್ರಾವಕ ಕಥೆಗಳು ಇಂದಿಗೂ ಸಂತ್ರಸ್ತ ಕುಟುಂಬಗಳನ್ನು ಕಾಡುತ್ತಿವೆ.
ಸುಳ್ವಾಡಿ ವಿಷ ಪ್ರಸಾದ ದುರಂತ ಕೇವಲ ಒಂದು ಅಪಘಾತವಲ್ಲ, ಅದು ಹಲವಾರು ಕುಟುಂಬಗಳ ಬದುಕನ್ನೇ ನಾಶ ಮಾಡಿದ ದುರಂತ. ಏಳು ವರ್ಷ ಕಳೆದರೂ ಸಂಪೂರ್ಣ ನ್ಯಾಯ, ಶಾಶ್ವತ ಪರಿಹಾರ ಹಾಗೂ ಸರ್ಕಾರ ನೀಡಿದ ಭರವಸೆಗಳು ಈಡೇರದಿರುವುದು ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ. ಸಂತ್ರಸ್ತ ಕುಟುಂಬಗಳು ಇಂದು ಕೂಡ ನ್ಯಾಯದ ನಿರೀಕ್ಷೆಯಲ್ಲಿ, ತಮ್ಮ ಬದುಕಿಗೆ ಆಸರೆಯಾಗುವ ಭರವಸೆಯ ನಿರ್ಣಯಕ್ಕಾಗಿ ಕಾಯುತ್ತಿವೆ.