
ಗದಗ ಜಿಲ್ಲೆ ಕೇವಲ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಐತಿಹಾಸಿಕ ಮಹತ್ವಕ್ಕಷ್ಟೇ ಸೀಮಿತವಾಗಿರದೆ, ಒಂದು ಕಾಲದಲ್ಲಿ ಚಿನ್ನದ ನಿಕ್ಷೇಪಗಳು ಮತ್ತು ಗಣಿಗಾರಿಕೆಯ ಪ್ರಮುಖ ಕೇಂದ್ರವಾಗಿಯೂ ಗುರುತಿಸಿಕೊಂಡಿತ್ತು ಎಂಬ ಸಂಗತಿ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಗೋಲ್ಡ್ ಮೈನ್ ವರದಿಗಾರಿಕೆ ಕುರಿತಂತೆ ಹಿರಿಯ ಪತ್ರಕರ್ತರು ಮತ್ತು ಇತಿಹಾಸ ತಜ್ಞರು ಹಂಚಿಕೊಂಡ ಅನುಭವಗಳು, ಗದಗ ಜಿಲ್ಲೆಯ ಮರೆತುಹೋಗಿದ್ದ ಚಿನ್ನದ ಕಥೆಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿವೆ. ಮಾತ್ರವಲ್ಲ ಕಪ್ಪತಗುಡ್ಡದಲ್ಲಿ ಈಗಲೂ ಚಿನ್ನದ ನಿಕ್ಷೇಪ ಇರುವ ಬಗ್ಗೆ ಹಲವು ಕುರುಹುಗಳು ಕೂಡ ಇದೆ. ಬ್ರಿಟೀಷರ ಕಾಲದಲ್ಲಿ ಗಣಿಕಾರಿಗೆ ನಡೆಯುತ್ತಿತ್ತು ರೈಲ್ವೆ ಟ್ರ್ಯಾಕ್ ಇದ್ದ ಕುರುಹುಗಳನ್ನು ನೋಡಿದ್ದೇವೆಂದು ಸ್ಥಳೀಯರು ಹೇಳಿದ್ದಾರೆ.
ಹಿರಿಯ ಪತ್ರಕರ್ತ ರಘೋತ್ತಮ ಕೊಪ್ಪರ್ ಅವರು ಗೋಲ್ಡ್ ಮೈನ್ ವರದಿಗಾರಿಕೆಯ ಸಂದರ್ಭದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, 1990ರ ದಶಕದವರೆಗೂ ಗದಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಚಿನ್ನ ಹೆಕ್ಕುವ ಕೆಲಸ ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ. ಸ್ಥಳೀಯರು ಚಿನ್ನ ಹಾಗೂ ವಜ್ರದ ನಿಕ್ಷೇಪಗಳಿರುವ ಬಗ್ಗೆ ಆಗಲೇ ಹೇಳುತ್ತಿದ್ದರು. ಯುವಕರು ಒಂದೊಂದು ರಾತ್ರಿ ಕಳೆಯುತ್ತಾ ನಿಕ್ಷೇಪ ಹುಡುಕುತ್ತಿದ್ದ ಘಟನೆಗಳು ಸಾಮಾನ್ಯವಾಗಿದ್ದು, ಇದು ಸ್ಥಳೀಯ ಯುವಕರಿಗೆ ಪಾರ್ಟ್‌ಟೈಮ್ ಉದ್ಯೋಗದಂತೆಯೇ ಆಗಿತ್ತು ಎಂದು ಅವರು ವಿವರಿಸಿದರು. ಆದರೆ 2018ರ ನಂತರ ಸರ್ಕಾರ ಚಿನ್ನದ ನಿಕ್ಷೇಪ ತೆಗೆಯುವಿಕೆಗೆ ಸಂಪೂರ್ಣ ನಿರ್ಬಂಧ ಹೇರಿದ ಪರಿಣಾಮ, ಈ ಚಟುವಟಿಕೆಗಳು ಸ್ಥಗಿತಗೊಂಡವು. ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭ ಎದುರಾದ ರೋಚಕ ಅನುಭವಗಳು ಇಂದಿಗೂ ತಮ್ಮ ನೆನಪಿನಲ್ಲಿ ಉಳಿದಿವೆ ಎಂದು ರಘೋತ್ತಮ ಕೊಪ್ಪರ್ ಹೇಳಿದ್ದಾರೆ.
ಗದಗ ಜಿಲ್ಲೆಯ ಚಿನ್ನದ ಗುಹೆಗಳ ಬಗ್ಗೆ ಹಿರಿಯರಿಂದ ಕೇಳಿದ್ದ ಅನೇಕ ಕಥೆಗಳು ಇಂದಿಗೂ ಜೀವಂತವಾಗಿವೆ. ಚಿನ್ನದ ಗುಹೆ ಬಗ್ಗೆ ಹಿರಿಯರಿಂದ ಕೇಳಿದ್ದೆವು. ಅಜ್ಜಿಯ ಜೊತೆ ಚಿನ್ನದ ಗುಹೆಯ ನೋಡಿದ್ದೇವೆ. ಸ್ಥಳೀಯರು ಗುಹೆಯಲ್ಲಿ ಚಿನ್ನ ತೆಗೆಯುವ ಕೆಲಸ ಮಾಡುತ್ತಿದ್ದರು. ಏಷ್ಯನೆಟ್ ಸುವರ್ಣ ನ್ಯೂಸ್ ನಿಧಿ, ನಿಕ್ಷೇಪದ ಬಗ್ಗೆ ನಿರಂತರ ವರದಿ ನೀಡಿದೆ. ಜಿಲ್ಲೆಯ ಕಣವಿ ಹಾಗೂ ಹೊಸೂರು ಭಾಗಗಳಲ್ಲಿ ಚಿನ್ನದ ನಿಧಿಗಳಿರುವ ಬಗ್ಗೆ ಸ್ಥಳೀಯ ನಿವಾಸಿ ಸಯ್ಯದ್ ಅವರು ಮಹತ್ವದ ಮಾಹಿತಿ ನೀಡಿದರು. ಗದಗ ಜಿಲ್ಲೆಯಲ್ಲಿ ಬಹಳಷ್ಟು ಕಡೆ ನಿಧಿ, ನಿಕ್ಷೇಪಗಳು ಇದೆ. ನಾಲ್ಕೈದು ಗುಹೆಗಳಿವೆ. ಬ್ರಿಟೀಷ್ ಕಾಲದಲ್ಲಿ ಹಿರಿಯರು ಕೆಲಸ ಮಾಡಿದ್ದಾರೆ. ರೈಲ್ವೆ ಟ್ರ್ಯಾಕ್ ಇದ್ದ ಕುರುಹು ನೋಡಿದ್ದೇವೆ. ಕಳೆದು ಹೋಗುತ್ತೀರಾ ಅಂತಾ ಹಿರಿಯರು ಹೇಳುತ್ತಿದ್ದರು. ನಿಧಿ ಹುಡುಕುತ್ತಾರೆ ಅಂತ ಗುಹೆಗಳನ್ನ ಬಂದ್ ಮಾಡಿದ್ದಾರೆ. ಬಲ್ಡೊಟಾ ಕಂಪನಿ ಗಣಿಗಾರಿಕೆ ಮಾಡಲು ಅನುಮತಿ ಕೇಳಿತ್ತು. ತೋಟದಾರ್ಯ ಮಠದ ಹೋರಾಟದ ಹಿನ್ನೆಲೆ ಅಲ್ಲಿ ಗಣಿಗಾರಿಕೆ ನಿಷೇಧ ಮಾಡಲಾಗಿದೆ ಎಂದು ಚಿನ್ನದ ಗುಹೆ ನೋಡಿರುವ ಕೊಪ್ಪಳದ ಸಯ್ಯದ್ ಖಾಲಿದ್ ಹೇಳಿಕೆ ನೀಡಿದ್ದಾರೆ.
ಗದಗ ಜಿಲ್ಲೆಯಲ್ಲಿ ವಿಜಯನಗರ ಸಾಮ್ರಾಜ್ಯ ಹಾಗೂ ಬ್ರಿಟಿಷ್ ಕಾಲದಲ್ಲಿಯೂ ಚಿನ್ನದ ನಿಕ್ಷೇಪಗಳಿದ್ದವು ಎಂಬುದಕ್ಕೆ ಸಾಕಷ್ಟು ಐತಿಹಾಸಿಕ ದಾಖಲೆಗಳಿವೆ. ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ನಿಗೂಢ ಚಿನ್ನದ ಗಣಿಯ ಬಗ್ಗೆ ಮಾಹಿತಿ ಲಭ್ಯವಿದೆ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಇತಿಹಾಸ ತಜ್ಞ ಹಾಗೂ ಕಲಾ ಇತಿಹಾಸ ಸಂಶೋಧಕ ಡಾ. ದತ್ತಪ್ರಸನ್ನ ಪಾಟೀಲ ಅವರು, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳಿಗೆ ಸ್ಥಳೀಯವಾಗಿ ಸಿಗುವ ಚಿನ್ನ ಪೂರೈಕೆಯಾಗುತ್ತಿತ್ತು ಎಂದು ವಿವರಿಸಿದರು. ನೀರಿನಲ್ಲಿ ಮಣ್ಣನ್ನು ತೋಯಿಸಿ ಚಿನ್ನವನ್ನು ತೆಗೆಯುತ್ತಿದ್ದರು ಎಂಬ ಉಲ್ಲೇಖಗಳು ಇತಿಹಾಸದಲ್ಲಿ ಕಂಡುಬರುತ್ತವೆ ಎಂದರು.
ಬ್ರಿಟಿಷ್ ಅಧಿಕಾರಿಗಳು ಈ ಭಾಗದಲ್ಲಿ ಚಿನ್ನದ ಸರ್ವೇ ನಡೆಸಿದ್ದು, ‘ಧಾರವಾಡ ಸಿಸ್ಟ್’ ಎಂಬ ಕಲ್ಲಿನಲ್ಲಿ ಚಿನ್ನವಿದೆ ಎಂಬುದನ್ನು ಪತ್ತೆಹಚ್ಚಿದ್ದರು. 1804ರಲ್ಲಿ ಸಂಶೋಧನೆ ಆರಂಭವಾಗಿದ್ದು, ಮೊದಲಿಗೆ ರಾಬರ್ಟ್ ರೂಸ್ ಫ್ರೂಟ್ ಅವರು ಇಲ್ಲಿ ಚಿನ್ನ ಇರುವುದನ್ನು ದೃಢಪಡಿಸಿದರು. ಮೈಸೂರಿನ ಮಹಾರಾಜರು ಈ ಕಾರ್ಯವನ್ನು ಗಮನಿಸಿ ಚಿನ್ನದ ಅದಿರಿನ ಕುರಿತು ಅಧ್ಯಯನ ನಡೆಸಿಸಿದ್ದರು. 1905ರ ವೇಳೆಗೆ ಯಾವ ಯಾವ ಹಳ್ಳಿಗಳಲ್ಲಿ ಚಿನ್ನ ಸಿಗಬಹುದು ಎಂಬ ಮಾಹಿತಿ ಲಭ್ಯವಾಗಿದ್ದು, ಅಧ್ಯಯನದ ಫಲವಾಗಿ ಚಿನ್ನದ ಗಣಿಗಾರಿಕೆ ಆರಂಭವಾಯಿತು. ಒಟ್ಟು 13 ಕಂಪನಿಗಳು ಚಿನ್ನದ ಗಣಿಗಾರಿಕೆ ನಡೆಸಿದ್ದು, ಸುಮಾರು 670 ಕಿಲೋಗ್ರಾಂ ಚಿನ್ನ ಉತ್ಪಾದನೆ ಮಾಡಲಾಗಿದೆ ಎಂಬ ಉಲ್ಲೇಖಗಳು ದಾಖಲೆಗಳಲ್ಲಿ ದೊರೆಯುತ್ತವೆ. ಧಾರವಾಡ ಮೈನಿಂಗ್ ಕಂಪನಿ, ಮೈಸೂರು ಗೋಲ್ಡ್ ಮೈನಿಂಗ್ ಕಂಪನಿ ಹಾಗೂ ಕಬಲಾಯತ ಗೋಲ್ಡ್ ಮೈನಿಂಗ್ ಕಂಪನಿಗಳು ಈ ಭಾಗದಲ್ಲಿ ಗಣಿಗಾರಿಕೆ ನಡೆಸಿದ್ದವು. ಸ್ವಾತಂತ್ರ್ಯ ನಂತರವೂ ಗದಗ ಜಿಲ್ಲೆಯಲ್ಲಿ ಗೋಲ್ಡ್ ಮೈನಿಂಗ್ ನಡೆದಿದ್ದು, 1990ರವರೆಗೂ ಚಿನ್ನದ ಗಣಿಗಾರಿಕೆ ನಡೆದ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಿವೆ.
ಸಯ್ಯದ್ ಖಾಲಿದ್ (ಕೊಪ್ಪಳ) ಅವರು ಚಿನ್ನದ ಗುಹೆಗಳನ್ನು ನೋಡಿದವರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಗದಗ ಜಿಲ್ಲೆಯ ಚಿನ್ನದ ಕಥೆಗಳು ಕೇವಲ ವದಂತಿಯಲ್ಲ, ಇತಿಹಾಸದ ಭಾಗವೇ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಒಟ್ಟಿನಲ್ಲಿ, ಗದಗ ಜಿಲ್ಲೆಯ ಚಿನ್ನದ ನಿಕ್ಷೇಪಗಳು, ಗುಹೆಗಳು ಹಾಗೂ ಗೋಲ್ಡ್ ಮೈನ್ ಇತಿಹಾಸವು ಮತ್ತೆ ಸಾರ್ವಜನಿಕ ಗಮನ ಸೆಳೆದಿದ್ದು, ಇವುಗಳ ವೈಜ್ಞಾನಿಕ ಅಧ್ಯಯನ, ಸಂರಕ್ಷಣೆ ಮತ್ತು ಪಾರದರ್ಶಕ ನಿರ್ವಹಣೆ ಅಗತ್ಯವೆಂಬ ಮಾತುಗಳು ಬಲವಾಗುತ್ತಿವೆ.
ಇನ್ನು ಚಿನ್ನದ ಬೇಟೆಯ ರಣರೋಚಕ ಸಂಗತಿ ಸ್ಥಳೀಯರು ಬಿಚ್ಚಿಟ್ಟರು. 80/90 ದಶಕದಲ್ಲಿ ಗುಂಪು ಗುಂಪಾಗಿ ಚಿನ್ನ ಹೆಕ್ಕುತ್ತಿದ್ದರು. ಮಹಾಲಿಂಗಪುರ, ಜಲ್ಲಿಗೇರಿ, ಅತ್ತಿಕಟ್ಟಿ ಗ್ರಾಮದ ಜನರಿಂದ ಚಿನ್ನದ ಬೇಟೆ. ದುರ್ಗಮ ಗುಹೆಯಲ್ಲಿ ನಡೆಯುತ್ತಿದ್ದ ಚಿನ್ನದ ಗಣಿಗಾರಿಕೆ. ಕೈಯಲ್ಲಿ ಚಿನ್ನ ಇದ್ದರೂ ತಿನ್ನಲು ಅನ್ನ ಇರಲಿಲ್ಲ. ವಾರಗಳ ಕಾಲ ಚಿನ್ನ ನಿಕ್ಷೇಪದ ಗುಹೆಯಲ್ಲಿ ಗ್ರಾಮಸ್ಥರು ಕೆಲಸ ಮಾಡುತ್ತಿದ್ದರು. ಭಾನುವಾರ ಚಿನ್ನ ಪುಡಿ ಮಾಡಿ ಜನ ಸಂಸ್ಕರಣೆ ಮಾಡುತ್ತಿದ್ದರು. ಆಗಿನ ಕಾಲದಲ್ಲಿ ನಡೆಯುತ್ತಿದ್ದ ಚಿನ್ನದ ಗಣಿಗಾರಿಕೆ ಬಗ್ಗೆ ರೋಚಕ ಮಾಹಿತಿ ಬಹಿರಂಗಪಡಿಸಿ, ಚಿನ್ನದ ಇಟ್ಟಿಗೆ ನೋಡಿದ್ದೇವೆ ಸರ್ ಎನ್ನುತ್ತಾರೆ ಸ್ಥಳೀಯ ಸಂತೋಷ್.
ಗದಗ ಜಿಲ್ಲೆಯಲ್ಲಿರುವ ಪ್ರಮುಖ ವನ್ಯಜೀವಿ ಧಾಮ ಮತ್ತು ಬೆಟ್ಟದ ಸಾಲು ಇದನ್ನು "ಉತ್ತರ ಕರ್ನಾಟಕದ ಸಹ್ಯಾದ್ರಿ" ಎಂದೂ ಕರೆಯುತ್ತಾರೆ. 2019ರಲ್ಲಿ ಘೋಷಿತ ವನ್ಯಜೀವಿ ಧಾಮವಾಗಿರುವ ಇದು, 244.15 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿದ್ದು, ಅಪರೂಪದ ಔಷಧೀಯ ಸಸ್ಯಗಳು, ವೈವಿಧ್ಯಮಯ ಪ್ರಾಣಿ ಸಂಕುಲ ಮತ್ತು ಐತಿಹಾಸಿಕ ಬಸದಿ, ದೇವಾಲಯ ಹೆಸರುವಾಸಿಯಾಗಿದೆ. ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಈ ಬೆಟ್ಟದ ಸಾಲು ಹರಡಿದೆ. ಕಪ್ಪತಗುಡ್ಡವು ಕಣವಿ, ಹೊಸೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ 2 ಕಿ.ಮೀ ನಿಂದ 8-ಕಿ.ಮೀ ವರೆಗೆ ಸುರಂಗಗಳನ್ನು ಹೊಂದಿದೆ. ಬ್ರಿಟಿಷರು 1900ರ ಸುಮಾರಿಗೆ ಇಲ್ಲಿ ಗಣಿಗಾರಿಕೆ ಪ್ರಾರಂಭಿಸಿದ್ದರು. ಕಲ್ಯಾಣ ಚಾಲುಕ್ಯರ ಕಾಲದಲ್ಲೂ ಇಲ್ಲಿನ ಚಿನ್ನವನ್ನು ಬಳಸಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯ ಮತ್ತು ಬ್ರಿಟಿಷರ ಕಾಲದಿಂದಲೂ ಗಣಿಗಾರಿಕೆಗೆ ಸಾಕ್ಷಿಯಾಗಿ ಸುವರ್ಣಗಿರಿ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಹಳೆಯ ಚಿನ್ನದ ಗಣಿ ಸ್ಥಳಗಳಿವೆ. ಗಣಿಗಾರಿಕೆ ವೆಚ್ಚ ಹೆಚ್ಚಾಗಿದ್ದರಿಂದ 1980ರ ದಶಕದ ನಂತರ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಬ್ರಿಟಿಷ್ ಕಾಲದ ಗಣಿ ಸುರಂಗಗಳು, ಹಳೆಯ ರೈಲ್ವೆ ಹಳಿಗಳು ಮತ್ತು ಯಾಂತ್ರಿಕ ಲಿಫ್ಟ್‌ಗಳು ಈಗಲೂ ಇಲ್ಲಿದೆ.