ಪಾಕಿಸ್ತಾನ ವಿರುದ್ಧ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡ ಬೆಂಗಳೂರು ಪೊಲೀಸ್ ಪುತ್ರ ಶ್ರೀಹರ್ಷ!

Published : Jun 09, 2026, 07:09 PM IST

ಬೆಂಗಳೂರಿನ ಪೊಲೀಸ್ ಅಧಿಕಾರಿಯ ಪುತ್ರ ಶ್ರೀಹರ್ಷ ಬಿ.ಕೆ., ಶ್ರೀಲಂಕಾದಲ್ಲಿ ನಡೆದ ಪ್ರತಿಷ್ಠಿತ ಮುಯ್ ಥಾಯ್ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಸ್ವಂತ ಪರಿಶ್ರಮದಿಂದ ಈ ಅಂತರರಾಷ್ಟ್ರೀಯ ಸಾಧನೆ ಮಾಡಿರುವುದು ಅವರ ಹೋರಾಟದ ಕಥೆಯನ್ನು ಸಾರುತ್ತದೆ.

PREV
17

ಬೆಂಗಳೂರು: ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತದ ಧ್ವಜವನ್ನು ಎತ್ತಿಹಿಡಿಯುವ ಮೂಲಕ ಕನ್ನಡಿಗನೊಬ್ಬ ಜಾಗತಿಕ ಮಟ್ಟದಲ್ಲಿ ಭರ್ಜರಿ ಸಾಧನೆ ಮಾಡಿದ್ದಾನೆ. ಶ್ರೀಲಂಕಾದ ನೆಗೊಂಬೋದಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ಮುಯ್ ಥಾಯ್ (Muay Thai) ಸಮರ ಕಲೆಯ ಕ್ರೀಡಾಕೂಟದಲ್ಲಿ ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಚಿನ್ನದ ಪದಕ ಗೆದ್ದು ದೇಶ ಮತ್ತು ರಾಜ್ಯ ಹೆಮ್ಮೆಪಡುವಂತೆ ಮಾಡಿದ್ದಾರೆ.

27

ಬೆಂಗಳೂರಿನ ಬನಶಂಕರಿ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ (ASI) ಕಾಂತರಾಜು ಅವರ ಸುಪುತ್ರ ಶ್ರೀಹರ್ಷ ಬಿ.ಕೆ. ಈ ಅಪ್ರತಿಮ ಸಾಧನೆಗೈದ ಯುವ ಕ್ರೀಡಾಪಟು.

37

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಧೂಳೀಪಟ:

ಇಂಟರ್ ನ್ಯಾಷನಲ್ ಥಾಯ್ ಮಾರ್ಷಲ್ ಆರ್ಟ್ಸ್ (ITMA) ಸಂಸ್ಥೆಯು ಶ್ರೀಲಂಕಾದಲ್ಲಿ ಏರ್ಪಡಿಸಿದ್ದ 'ಇಂಟರ್ ನ್ಯಾಷನಲ್ ಆಂಡ್ ಥಾಯ್ ಮಾರ್ಷಲ್ ಆರ್ಟ್ಸ್ ಏಷ್ಯನ್ ಗೇಮ್ಸ್-2026' (ITMA Asian Games 2026) ಕ್ರೀಡಾಕೂಟದಲ್ಲಿ ಶ್ರೀಹರ್ಷ ಭಾರತವನ್ನು ಪ್ರತಿನಿಧಿಸಿದ್ದರು. 57 ಕೆಜಿ ವಿಭಾಗದ ತೀವ್ರ ಹಣಾಹಣಿಯ ಮುಯ್ ಥಾಯ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಇವರು, ಫೈನಲ್ ಪಂದ್ಯದಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನದ ಸ್ಪರ್ಧಿಯ ವಿರುದ್ಧ ಸೆಣಸಾಡಿದರು. ಆರಂಭದಿಂದಲೇ ಅದ್ಭುತ ಪ್ರದರ್ಶನ ನೀಡಿದ ಶ್ರೀಹರ್ಷ, ಪಾಕ್ ಆಟಗಾರನಿಗೆ ಮಣ್ಣು ಮುಕ್ಕಿಸಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.

47

ಸರ್ಕಾರದ ನೆರವಿಲ್ಲದೆ ಸ್ವಪ್ರಯತ್ನದ ಸಾಧನೆ:

ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನವರಾದ ಶ್ರೀಹರ್ಷ ಅವರಿಗೆ ಈ ಹಂತಕ್ಕೆ ತಲುಪಲು ಯಾವುದೇ ಸರ್ಕಾರಿ ನೆರವು ಅಥವಾ ಪ್ರೋತ್ಸಾಹ ಸಿಕ್ಕಿರಲಿಲ್ಲ. ಆರ್ಥಿಕ ಮುಗ್ಗಟ್ಟು ಮತ್ತು ಸೌಲಭ್ಯಗಳ ಕೊರತೆಯ ನಡುವೆಯೂ ಕೇವಲ ತಮ್ಮ ಕಠಿಣ ಪರಿಶ್ರಮ, ತಂದೆಯ ಬೆಂಬಲ ಮತ್ತು ಅಚಲ ಛಲದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದು ಬೀಗಿದ್ದಾರೆ.

57

‘ಪಾಕಿಸ್ತಾನದ ವಿರುದ್ಧದ ಪಂದ್ಯಾವಳಿ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ದೇಶಕ್ಕಾಗಿ ಚಿನ್ನ ಗೆದ್ದಿರುವುದು ಅಪಾರ ಸಂತಸ ತಂದಿದೆ. ಯಾವುದೇ ಸರ್ಕಾರದ ಸಹಾಯವಿಲ್ಲದೆ ಇಲ್ಲಿಯವರೆಗೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಹಾಗೂ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತರಬೇಕೆಂಬ ಆಸೆಯಿದೆ. ಸರ್ಕಾರ ನನ್ನಂತಹ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡಿದರೆ ಇನ್ನು ಹೆಚ್ಚಿನ ಸಾಧನೆ ಮಾಡಬಹುದು’ ಎಂದು ಕ್ರೀಡಾಪಟು ಶ್ರೀಹರ್ಷ ಹೇಳಿದರು.

67

ನಗರ ಪೊಲೀಸ್ ಆಯುಕ್ತರಿಂದ ವಿಶೇಷ ಸನ್ಮಾನ:

ಬೆಂಗಳೂರು ಪೊಲೀಸ್ ಕುಟುಂಬದ ಯುವಕನೊಬ್ಬ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವುದನ್ನು ಗುರುತಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಶ್ರೀಹರ್ಷ ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸಿದ್ದರು. ಶ್ರೀಹರ್ಷ ಮತ್ತು ಅವರ ತಂದೆ ಎಎಸ್‌ಐ ಕಾಂತರಾಜು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಕಮಿಷನರ್, ಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ವಿಶೇಷವಾಗಿ ಸನ್ಮಾನಿಸಿ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

77

ವಿದೇಶಿ ಮಣ್ಣಿನಲ್ಲಿ ಪಾಕಿಸ್ತಾನವನ್ನು ಸೋಲಿಸಿ ದೇಶದ ಗೌರವ ಹೆಚ್ಚಿಸಿರುವ ಈ ಗ್ರಾಮೀಣ ಭಾಗದ ಪ್ರತಿಭೆಗೆ ರಾಜ್ಯ ಸರ್ಕಾರ ಇನ್ಮುಂದಾದರೂ ಸೂಕ್ತ ಆರ್ಥಿಕ ನೆರವು ಹಾಗೂ ಕ್ರೀಡಾ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

Read more Photos on
click me!

Recommended Stories