ಬೆಂಗಳೂರಲ್ಲಿ ಬದಲಾಗುತ್ತಾ ಕೆ.ಆರ್.ಮಾರುಕಟ್ಟೆ ನಸೀಬು; ಬೆಂಕಿಗೆ ನೀರು, ಕಸಕ್ಕೆ ಮುಕ್ತಿ ಕೊಡಿಸ್ತಾರಾ ಕಮಿಷನರ್!

Published : Jun 09, 2026, 06:25 PM IST

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಕೆ.ಆರ್. ಮಾರುಕಟ್ಟೆಗೆ ಭೇಟಿ ನೀಡಿ, ಸುರಕ್ಷತೆ ಮತ್ತು ಸುಧಾರಣೆಗಾಗಿ ಹಲವು ಕ್ರಮಗಳನ್ನು ಆದೇಶಿಸಿದ್ದಾರೆ. ಅಗ್ನಿ ಸುರಕ್ಷತೆಗಾಗಿ 'ಫೈರ್ ಆಡಿಟ್', ಒತ್ತುವರಿ ತೆರವು, ದುಪ್ಪಟ್ಟು ದಂಡ, ಶೌಚಾಲಯ ದುರಸ್ತಿ ಮತ್ತು ಸ್ವಚ್ಛತೆಗೆ ಸೂಚನೆಗಳನ್ನು ನೀಡಿದ್ದಾರೆ.

PREV
16

ಬೆಂಗಳೂರು (ಜೂ.09): ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಕೆ.ಆರ್. ಮಾರುಕಟ್ಟೆಯ (K.R. Market) ಸಮಗ್ರ ಸುಧಾರಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಇಂದು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡಗಳನ್ನು ತಡೆಯಲು ತಕ್ಷಣವೇ 'ಫೈರ್ ಆಡಿಟ್' (Fire Audit) ನಡೆಸುವಂತೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಒತ್ತುವರಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

26

ಅಗ್ನಿ ಸುರಕ್ಷತೆಗೆ ಮೊದಲ ಆದ್ಯತೆ:

ಮಂಗಳವಾರ ಅಧಿಕಾರಿಗಳ ತಂಡದೊಂದಿಗೆ ಕೆ.ಆರ್. ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ಮಾರುಕಟ್ಟೆಯ ಸುರಕ್ಷತೆಯ ಬಗ್ಗೆ ತೀವ್ರ ಕಾಳಜಿ ವ್ಯಕ್ತಪಡಿಸಿದರು. ಅಗ್ನಿ ಅವಘಡಗಳು ಸಂಭವಿಸಿದಾಗ ಜೀವಹಾನಿ ಮತ್ತು ಆಸ್ತಿಹಾನಿ ತಪ್ಪಿಸಲು ವೈಜ್ಞಾನಿಕವಾಗಿ ಫೈರ್ ಆಡಿಟ್ ನಡೆಸಬೇಕು. ತುರ್ತು ಪರಿಸ್ಥಿತಿಯಲ್ಲಿ ಜನರು ಸುಲಭವಾಗಿ ಹೊರಬರಲು ಅನುಕೂಲವಾಗುವಂತೆ ತುರ್ತು ನಿರ್ಗಮನ (Emergency Exit) ವ್ಯವಸ್ಥೆಗಳನ್ನು ಸರಿಪಡಿಸಬೇಕು. ಅಲ್ಲದೆ, ಬೆಂಕಿಯನ್ನು ತ್ವರಿತವಾಗಿ ನಿಯಂತ್ರಿಸಲು ಮಾರುಕಟ್ಟೆಯಾದ್ಯಂತ ಅಗ್ನಿಶಾಮಕ ಪೈಪ್‌ಗಳನ್ನು (Fire Extinguisher Pipes) ಅಳವಡಿಸಲು ಅವರು ಸೂಚಿಸಿದರು.

36

ಒತ್ತುವರಿಗಾರರಿಗೆ ದುಪ್ಪಟ್ಟು ದಂಡದ ಬಿಸಿ:

ಮಾರುಕಟ್ಟೆಯ ಒಳಗೆ ಮತ್ತು ಹೊರಗೆ ಅಂಗಡಿಗಳ ಮುಂಭಾಗದಲ್ಲಿ ಮಾಡಿಕೊಂಡಿರುವ ಅನಧಿಕೃತ ಒತ್ತುವರಿಗಳ ವಿರುದ್ಧ ಆಯುಕ್ತರು ಗರಂ ಆದರು. 'ಮಳಿಗೆಗಳ ಮುಂದೆ ಒತ್ತುವರಿ ಮಾಡಿಕೊಂಡಿರುವುದು ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಅಂತಹ ಒತ್ತುವರಿಗಳನ್ನು ತಕ್ಷಣ ಗುರುತಿಸಿ ತೆರವುಗೊಳಿಸಿ. ಅಷ್ಟೇ ಅಲ್ಲದೆ, ಅಂತಹ ವ್ಯಾಪಾರಿಗಳಿಗೆ ದುಪ್ಪಟ್ಟು ದಂಡ ವಿಧಿಸಿ' ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಸ್ತೆ ಬದಿಯ ವ್ಯಾಪಾರಿಗಳು ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಇದಕ್ಕಾಗಿ ಮಾರ್ಕಿಂಗ್ (Lining) ಮಾಡಿಕೊಡುವಂತೆ ಅವರು ತಿಳಿಸಿದರು.

46

ಶೌಚಾಲಯ ಮತ್ತು ಸ್ವಚ್ಛತೆಗೆ ಆದ್ಯತೆ:

ಮಾರುಕಟ್ಟೆಯ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶೌಚಾಲಯಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ನೆಲಮಹಡಿ ಮತ್ತು ಮೊದಲ ಮಹಡಿಯ ಶೌಚಾಲಯಗಳನ್ನು ತಕ್ಷಣ ದುರಸ್ತಿಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಸೂಚಿಸಿದರು. ಅನುಪಯುಕ್ತವಾಗಿರುವ ಹಳೆಯ ಶೌಚಾಲಯಗಳನ್ನು ತೆರವುಗೊಳಿಸಿ, ಆ ಜಾಗವನ್ನು ತ್ಯಾಜ್ಯ ವಿಲೇವಾರಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಮಾರುಕಟ್ಟೆಯನ್ನು ನೀರಿನಿಂದ ಸಂಪೂರ್ಣವಾಗಿ ತೊಳೆದು ಶುಚಿಗೊಳಿಸುವಂತೆ ಮತ್ತು ಈ ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡುವಂತೆ ಪೌರಕಾರ್ಮಿಕರಿಗೆ ಸೂಚನೆ ನೀಡಿದರು.

56

ಸೋರಿಕೆ ತಡೆ ಹಾಗೂ ಮೂರನೇ ಮಹಡಿ ಬಳಕೆ:

ಮಳೆಗಾಲದಲ್ಲಿ ಮಾರುಕಟ್ಟೆಯ ಮೇಲ್ಭಾಗದ ಗಾಜುಗಳಿಂದ ನೀರು ಸೋರುತ್ತಿರುವುದನ್ನು ಗಮನಿಸಿದ ಅವರು, ತಕ್ಷಣವೇ ಲೀಕೇಜ್-ಪ್ರೂಫ್ ಪೇಂಟಿಂಗ್ (Leakage-proof painting) ಮಾಡಿಸಿ ಸೋರಿಕೆ ತಡೆಗಟ್ಟಲು ಆದೇಶಿಸಿದರು. ಇನ್ನು ದಶಕಗಳಿಂದ ಬಳಕೆಯಾಗದೆ ಉಳಿದಿರುವ ಮೂರನೇ ಮಹಡಿಯನ್ನು ಸದ್ಬಳಕೆ ಮಾಡಿಕೊಳ್ಳಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ತಿಳಿಸಿದರು. ಅಲ್ಲಿ ಮಾರುಕಟ್ಟೆ ಕಂದಾಯ ಕಚೇರಿ ಹಾಗೂ ತ್ಯಾಜ್ಯ ನಿರ್ವಹಣೆ ಕಚೇರಿಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗುತ್ತಿದೆ.

66

ಇತರೆ ಸುಧಾರಣಾ ಕ್ರಮಗಳು:

ಅನಧಿಕೃತ ಪಾರ್ಕಿಂಗ್ ತೆರವು, ಚರಂಡಿ ವ್ಯವಸ್ಥೆ ಸುಧಾರಣೆ, ಮತ್ತು ಅನುಪಯುಕ್ತ ಫೆನ್ಸಿಂಗ್‌ಗಳ ತೆರವಿಗೆ ಮಹೇಶ್ವರ್ ರಾವ್ ಸೂಚಿಸಿದ್ದಾರೆ. ಮಾರುಕಟ್ಟೆಯ ಮುಂಭಾಗ ವ್ಯಾಪಾರಿಗಳಿಗೆ ಲೈನಿಂಗ್ ವ್ಯವಸ್ಥೆ ಮಾಡುವ ಮೂಲಕ ಸಂಚಾರ ಸುಗಮಗೊಳಿಸಲು ಪ್ಲಾನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಜಿ. ಜಗದೀಶ್, ಅಭಿವೃದ್ಧಿ ಅಪರ ಆಯುಕ್ತರಾದ ವೆಂಕಟಾಚಲಪತಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬಿಬಿಎಂಪಿಯ ಈ ಹಠಾತ್ ಭೇಟಿ ಮತ್ತು ಕಟ್ಟುನಿಟ್ಟಿನ ಕ್ರಮಗಳಿಂದ ಕೆ.ಆರ್. ಮಾರುಕಟ್ಟೆಗೆ ಮುಂದಿನ ದಿನಗಳಲ್ಲಿ ಹೊಸ ಕಳೆ ಬರಲಿದೆ ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ.

Read more Photos on
click me!

Recommended Stories