ಹಾವು ಕಚ್ಚಿದಾಗ ಸೈಕಲ್ ತುಳಿದು ಆಸ್ಪತ್ರೆಗೆ ಹೋದ! 'ಇಂಥ ತಪ್ಪು ಜೀವಕ್ಕೆ ಕುತ್ತು' ಎಂದ ಉರಗ ತಜ್ಞ ಗೌರಿ ಕಾಳಿಂಗ

Published : Sep 13, 2026, 09:22 AM IST

ಅತ್ಯಂತ ವಿಷಕಾರಿ ಹಾವು ಕಚ್ಚಿದ ವ್ಯಕ್ತಿಯೊಬ್ಬರು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ಈ ಬಗ್ಗೆ ಉರಗ ತಜ್ಞ ಗೌರಿ ಕಾಳಿಂಗ ಅವರು ಹಾವು ಕಡಿತದ ನಂತರ ಮಾಡಬಾರದ ತಪ್ಪುಗಳ ಬಗ್ಗೆ ಎಚ್ಚರಿಸಿದ್ದು, ಸರಿಯಾದ ಪ್ರಥಮ ಚಿಕಿತ್ಸೆ ಮತ್ತು ಕ್ರಮಗಳ ಬಗ್ಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

PREV
16

ಬೆಂಗಳೂರು/ಭುವನೇಶ್ವರ (ಸೆ.13): ಹಾವು ಕಚ್ಚಿದರೆ ಮನುಷ್ಯ ಗಾಬರಿಯಾಗುವುದು ಸಹಜ. ಆದರೆ ಒಡಿಶಾದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ತನಗೆ ಕಚ್ಚಿದ ಹಾವನ್ನೇ ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿಟ್ಟುಕೊಂಡು, ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ಹೋಗಿರುವ ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಿದರೂ ಅವರ ಪರಿಸ್ಥಿತಿ ಈಗ ಗಂಭೀರವಾಗಿದೆ! ಇದಕ್ಕೆ ಕಾರಣವೇನು? ಹಾವು ಕಚ್ಚಿದಾಗ ಜನಸಾಮಾನ್ಯರು ಮಾಡುವ ಇಂತಹ ಪ್ರಮಾದಗಳೇನು ಎಂಬುದರ ಕುರಿತು ಖ್ಯಾತ ಉರಗ ತಜ್ಞ ಗೌರಿ ಕಾಳಿಂಗ ಮಹತ್ವದ ಎಚ್ಚರಿಕೆ ಹಾಗೂ ಸಲಹೆಗಳನ್ನು ನೀಡಿದ್ದಾರೆ.

26

ಏನಿದು ಘಟನೆ?

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಏತ ನೀರಾವರಿ ಯೋಜನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 37 ವರ್ಷದ ವ್ಯಕ್ತಿಗೆ ವಿಷಕಾರಿ ಹಾವೊಂದು ಕಚ್ಚಿದೆ. ತಕ್ಷಣ ಆತ ಹಾವನ್ನು ಹುಡುಕಿ ಸಾಯಿಸಿ, ವೈದ್ಯರಿಗೆ ತೋರಿಸಲೆಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.

36

ಸೈಕಲ್ ತುಳಿದಿದ್ದೇ ದೊಡ್ಡ ಪ್ರಮಾದವಾಗಿದ್ದು ಏಕೆ?

ಈ ಘಟನೆಯನ್ನು ವಿಶ್ಲೇಷಿಸಿರುವ ಉರಗ ತಜ್ಞ ಗೌರಿ ಕಾಳಿಂಗ, 'ವ್ಯಕ್ತಿ ಆದಷ್ಟು ಬೇಗ ಆಸ್ಪತ್ರೆ ತಲುಪಲು ಯತ್ನಿಸಿದ್ದು ಒಳ್ಳೆಯದೇ. ಆದರೆ, ಆತ ಸೈಕಲ್ ತುಳಿದುಕೊಂಡು ಹೋದದ್ದು ಆತನ ಜೀವಕ್ಕೇ ಕಂಟಕ ತಂದಿಟ್ಟಿದೆ. ಸೈಕಲ್ ತುಳಿಯುವಾಗ ಅಥವಾ ವೇಗವಾಗಿ ಓಡಿದಾಗ ನಮ್ಮ ಹೃದಯ ಬಡಿತ ಹಾಗೂ ರಕ್ತಪರಿಚಲನೆ ತೀವ್ರವಾಗಿ ಹೆಚ್ಚಾಗುತ್ತದೆ. ಇದರಿಂದಾಗಿ ಹಾವಿನ ವಿಷವು ಅತಿ ವೇಗವಾಗಿ ಇಡೀ ದೇಹಕ್ಕೆ ಮತ್ತು ಪ್ರಮುಖ ಅಂಗಾಂಗಗಳಿಗೆ ಆವರಿಸುತ್ತದೆ. ಪರಿಣಾಮವಾಗಿ ಆ ವ್ಯಕ್ತಿ ಈಗ ಅತ್ಯಂತ ಗಂಭೀರ (ಕ್ರಿಟಿಕಲ್) ಸ್ಥಿತಿಗೆ ತಲುಪಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

ಹಾವು ಕಚ್ಚಿದಾಗ ಏನು ಮಾಡಬೇಕು?:

ಹಾವು ಕಚ್ಚಿದ ತಕ್ಷಣ ಗಾಬರಿಯಾಗಬಾರದು. ಯಾವುದೇ ಕಾರಣಕ್ಕೂ ಓಡುವುದು, ಸೈಕಲ್ ತುಳಿಯುವುದು ಅಥವಾ ಅತಿಯಾದ ದೈಹಿಕ ಶ್ರಮ ಮಾಡಬಾರದು. ಕಡಿತಕ್ಕೊಳಗಾದ ಅಂಗವನ್ನು ಅಲುಗಾಡಿಸದೆ ಶಾಂತರಾಗಿರಬೇಕು. ಬೈಕ್, ಆಟೋ ಅಥವಾ ಕಾರಿನಂತಹ ವಾಹನದಲ್ಲಿ ಕುಳಿತು ಆದಷ್ಟು ಬೇಗ ಆಸ್ಪತ್ರೆಗೆ ದಾಖಲಾಗಿ ಆ್ಯಂಟಿ-ವೆನಮ್ (Anti-venom) ಚಿಕಿತ್ಸೆ ಪಡೆಯಬೇಕು.

46

ಸ್ವಯಂಘೋಷಿತ ಪರಿಸರವಾದಿಗಳು & ಸರ್ಕಾರದ ನೀತಿಯ ವಿರುದ್ಧ ಆಕ್ರೋಶ!

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಇತ್ತೀಚಿನ ಹಾವು ಸಂರಕ್ಷಣಾ ಆದೇಶದ ವಿರುದ್ಧವೂ ಗೌರಿ ಕಾಳಿಂಗ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 'ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅನುಭವಿ ಸ್ವತಂತ್ರ ಹಾವು ಸಂರಕ್ಷಕರು ಹಾವುಗಳನ್ನು ಹಿಡಿಯುವುದನ್ನು ನಿಲ್ಲಿಸಿದ್ದಾರೆ. ಕೇವಲ ಅರಣ್ಯ ಇಲಾಖೆಯ ಸಿಬ್ಬಂದಿ ಮಾತ್ರ ಹಾವು ಹಿಡಿಯಬೇಕೆಂಬ ನಿಯಮ ಜಾರಿಗೆ ಬಂದಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ನೆರವು ಸಿಗದೆ ಹಾವು ಕಡಿತದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ' ಎಂದಿದ್ದಾರೆ.

56

ಕೀಬೋರ್ಡ್ ವಾರಿಯರ್ಸ್‌ಗೆ ತರಾಟೆ:

'ಹಾವಿನ ಬಗ್ಗೆ ಕನಿಷ್ಠ ಜ್ಞಾನವಿಲ್ಲದ, ಜೀವನದಲ್ಲಿ ಒಂದೇ ಒಂದು ಹಾವನ್ನೂ ರಕ್ಷಿಸದ, ಕೇವಲ ಮೊಬೈಲ್ ಮತ್ತು ಕಂಪ್ಯೂಟರ್ ಮುಂದೆ ಕುಳಿತು ಪರಿಸರ ರಕ್ಷಣೆ ಮಾತನಾಡುವ ಬೆಂಗಳೂರಿನಂತಹ ನಗರಗಳ 'ಸ್ವಯಂಘೋಷಿತ ಪರಿಸರವಾದಿಗಳು' ಇದಕ್ಕೆ ಪ್ರಮುಖ ಕಾರಣ. ಇವರು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿ, ಸರ್ಕಾರದ ಮೇಲೆ ಅನಗತ್ಯ ಒತ್ತಡ ತಂದು ನೈಜ ಉರಗ ರಕ್ಷಕರ ಕೈಕಟ್ಟಿ ಹಾಕಿದ್ದಾರೆ' ಎಂದು ಕಿಡಿಕಾರಿದ್ದಾರೆ.

66

ಕೇರಳ, ತಮಿಳುನಾಡು ಮಾದರಿ ಅಗತ್ಯ:

'ಪಕ್ಕದ ಕೇರಳ ಮತ್ತು ತಮಿಳುನಾಡು ಸರ್ಕಾರಗಳನ್ನು ನೋಡಿ ಕಲಿಯಬೇಕಿದೆ. ಅಲ್ಲಿ ಸರ್ಕಾರವೇ ವಾಲಂಟಿಯರ್‌ಗಳನ್ನು (ಸ್ವಯಂಸೇವಕರು) ಒಗ್ಗೂಡಿಸಿಕೊಂಡು ‘ಸರ್ಪ’ (SARPA) ದಂತಹ ಮೊಬೈಲ್ ಆ್ಯಪ್ ರೂಪಿಸಿದೆ. ಆ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡಲಾಗುತ್ತಿದೆ. ನಮ್ಮಲ್ಲೂ ಇಂತಹ ಪ್ರಾಯೋಗಿಕ ವ್ಯವಸ್ಥೆ ಬರಬೇಕಿದೆ. ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ, ಎಚ್ಚರದಿಂದಿರಿ, ಆಸ್ಪತ್ರೆಗೆ ಬೇಗ ದಾಖಲಾಗಿ ಜೀವ ಉಳಿಸಿಕೊಳ್ಳಿ' ಎಂದು ಗೌರಿ ಕಾಳಿಂಗ ಮನವಿ ಮಾಡಿದ್ದಾರೆ.

Read more Photos on
click me!

Recommended Stories