ಸಿಎಂ ಸಿದ್ದರಾಮಯ್ಯ ತವರಲ್ಲಿ 'ವಾಸಯೋಗ್ಯ ಮನೆ'ಗಾಗಿ ಬಡವರ ಪರದಾಟ; ಮಣ್ಣಿನ ಗೋಡೆ, ತೆಂಗಿನ ಗರಿಯೇ ಆಸರೆ!

Published : Mar 05, 2026, 08:42 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ನಂಜನಗೂಡು ತಾಲೂಕಿನ ಬ್ಯಾಳಾರಹುಂಡಿ ಗ್ರಾಮದಲ್ಲಿ, ಎರಡು ಬಡ ಕುಟುಂಬಗಳು ಕಳೆದ 20 ವರ್ಷಗಳಿಂದ ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಸರ್ಕಾರದ 'ಗುಡಿಸಲು ಮುಕ್ತ ಕರ್ನಾಟಕ' ಯೋಜನೆ ವಿಫಲವಾಗಿದೆ.

PREV
16
ಸಿಎಂ ತವರು ಜಿಲ್ಲೆಯಲ್ಲೇ ಗುಡಿಸಲು ಮುಕ್ತವಾಗದ ಕರ್ನಾಟಕ

ಮೈಸೂರು (ಮಾ.05): ರಾಜ್ಯ ಸರ್ಕಾರವು 'ಗುಡಿಸಲು ಮುಕ್ತ ಕರ್ನಾಟಕ' ಮತ್ತು ಬಡವರಿಗಾಗಿ ವಸತಿ ಯೋಜನೆಗಳ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ನೀಡುತ್ತಿದೆ. ಆದರೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲೇ ಬಡವರ ಗೋಳು ಕೇಳುವವರೇ ಇಲ್ಲದಂತಾಗಿದೆ. ನಂಜನಗೂಡು ತಾಲೂಕಿನ ಬ್ಯಾಳಾರಹುಂಡಿ ಗ್ರಾಮದಲ್ಲಿ ಕಳೆದ ಎರಡು ದಶಕಗಳಿಂದ ಎರಡು ಬಡ ಕುಟುಂಬಗಳು ಜೀವ ಕೈಯಲ್ಲಿ ಹಿಡಿದು ಗುಡಿಸಿಲಿನಲ್ಲಿ ಬದುಕುತ್ತಿದ್ದು, ಆಡಳಿತ ವ್ಯವಸ್ಥೆಯ ಕ್ರೂರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿವೆ.

26
ತೆಂಗಿನ ಗರಿ, ಮಣ್ಣಿನ ಗೋಡೆಗಳೇ ಇವರ ಆಸರೆ

ಬ್ಯಾಳಾರಹುಂಡಿ ಗ್ರಾಮದ ಸಿದ್ದಮ್ಮ ಎಂಬ ವೃದ್ಧೆಯ ಬದುಕು ಅಕ್ಷರಶಃ ನರಕವಾಗಿದೆ. ಬಿರುಕು ಬಿಟ್ಟ ಮಣ್ಣಿನ ಗೋಡೆಗಳು ಎಲ್ಲಿ ತಮ್ಮ ಮೇಲೆ ಬಿದ್ದು ಪ್ರಾಣ ಹಾರಿಹೋಗುತ್ತದೆಯೋ ಎಂಬ ಭೀತಿಯಲ್ಲೇ ಈ ವೃದ್ಧೆ ಕಾಲ ಕಳೆಯುತ್ತಿದ್ದಾರೆ. ಮನೆಯ ಮೇಲೆ ಸರಿಯಾದ ಹಂಚು ಅಥವಾ ಸಿಮೆಂಟ್ ಶೀಟ್ ಇಲ್ಲದೆ, ಕೇವಲ ತೆಂಗಿನ ಗರಿಗಳನ್ನೇ ಮೇಲ್ಚಾವಣಿಯನ್ನಾಗಿ ಮಾಡಿಕೊಳ್ಳಲಾಗಿದೆ. ಮಳೆ ಬಂದಾಗ ನೀರು ಒಳಗೆ ಸೋರದಂತೆ ಪ್ಲಾಸ್ಟಿಕ್ ಟಾರ್ಪಲ್ ಹಾಕಿ ಅದರ ಅಡಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ.

36
20 ವರ್ಷಗಳ ಸುದೀರ್ಘ ಕಾಯುವಿಕೆ:

ಸುಮಾರು 20 ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಇವರ ಮನೆ ಕುಸಿದು ಬಿದ್ದಿತ್ತು. ಅಂದಿನಿಂದ ಇಂದಿನವರೆಗೂ ಸಿದ್ದಮ್ಮ ಮತ್ತು ಅವರ ಕುಟುಂಬ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳ ಮೆಟ್ಟಿಲು ಹತ್ತಿ ಸುಸ್ತಾಗಿದೆ. ಆದರೆ, ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಇತ್ತ ಮನೆ ದುರಸ್ತಿ ಮಾಡಲು ಹಣವಿಲ್ಲದೆ, ಅತ್ತ ಸರ್ಕಾರದ ಕಡೆಯಿಂದ ಹೊಸ ಮನೆ ಮಂಜೂರಾಗದೆ ಈ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ.

46
ಪಂಚಾಯಿತಿ ನಿರ್ಲಕ್ಷ್ಯಕ್ಕೆ ನಾಗರಾಜೇಗೌಡರ ಕುಟುಂಬವೂ ಬಲಿ:

ಸಿದ್ದಮ್ಮ ಮಾತ್ರವಲ್ಲದೆ, ಅದೇ ಗ್ರಾಮದ ನಾಗರಾಜೇಗೌಡ ಎಂಬುವವರ ಸ್ಥಿತಿಯೂ ಭಿನ್ನವಾಗಿಲ್ಲ. ವಾಸಿಸಲು ಸೂಕ್ತವಾದ ಮನೆ ಇಲ್ಲದೆ ಇವರೂ ಪರದಾಡುತ್ತಿದ್ದಾರೆ. ಮನೆ ಮಂಜೂರು ಮಾಡಿಕೊಡುವಂತೆ ನವಿಲೂರು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಮಾತ್ರ ಭರವಸೆ ನೀಡಿ ಹೋಗುತ್ತಾರೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

56
'ಮನೆ ಕೊಡಿ ಇಲ್ಲ ವಿಷ ಕೊಡಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತಿರುವ ಗ್ರಾಮಸ್ಥರು, 'ನಮಗೆ ಗೌರವಯುತವಾಗಿ ಬದುಕಲು ಒಂದು ಸೂರು ನೀಡಿ, ಇಲ್ಲವಾದರೆ ಒಂದು ತೊಟ್ಟು ವಿಷ ಕೊಟ್ಟು ನಮ್ಮನ್ನು ಸಾಯಿಸಿ ಬಿಡಿ' ಎಂದು ಭಾವುಕರಾಗಿ ನುಡಿಯುತ್ತಿದ್ದಾರೆ. ಸರ್ಕಾರಿ ಯೋಜನೆಗಳು ಕೇವಲ ಪ್ರಭಾವಿಗಳ ಪಾಲಾಗುತ್ತಿವೆಯೇ ಹೊರತು ನಮ್ಮಂತಹ ಬಡವರಿಗೆ ತಲುಪುತ್ತಿಲ್ಲ ಎಂಬುದು ಇವರ ಗಂಭೀರ ಆರೋಪ.

66
ಚುನಾವಣೆ ಬಹಿಷ್ಕಾರದ ಎಚ್ಚರಿಕೆ:

ಇಷ್ಟು ವರ್ಷಗಳ ಕಾಲ ಸಂಕಷ್ಟ ಅನುಭವಿಸಿದರೂ ಸ್ಪಂದಿಸದ ವ್ಯವಸ್ಥೆಯ ವಿರುದ್ಧ ಈ ಕುಟುಂಬಗಳು ಈಗ ಸಿಡಿದೆದ್ದಿವೆ. ಬರುವ ಚುನಾವಣೆಯಲ್ಲಿ ನಾವು ಯಾರೊಬ್ಬರಿಗೂ ಮತ ಹಾಕುವುದಿಲ್ಲ ಎಂದು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ಇರುವುದು ರಾಜ್ಯ ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಬಡ ಕುಟುಂಬಗಳಿಗೆ ನ್ಯಾಯ ಒದಗಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories