ಬೆಳಗಾವಿ ಶಿವಂ ಅಸೋಸಿಯೇಟ್ಸ್ 4500 ಕೋಟಿ ರೂ ಹಗರಣ ಸಿಐಡಿಗೆ, ಪ್ರಕರಣ ಬೆಳಕಿಗೆ ಬರಲು ಕಾರಣ 15 ಸಾವಿರ ಬಂದೂಕು!

Published : May 17, 2026, 12:35 PM IST

ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪದಡಿ ಬಂಧನಕ್ಕೊಳಗಾಗಿದ್ದು, ಪ್ರಕರಣದ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ. ಆರ್‌ಬಿಐ ನಿಯಮ ಉಲ್ಲಂಘಿಸಿ, 'ಅಕ್ಯೂಮೆನ್' ಆ್ಯಪ್ ಮೂಲಕ 35 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿ ವಂಚಿಸಿದ ಆರೋಪ ಇವರ ಮೇಲಿದೆ.

PREV
18
ಸಿಐಡಿ ತನಿಖೆ ಆರಂಭ

ಬೆಳಗಾವಿ: ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪದಡಿ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಿಐಡಿ ತನಿಖೆ ವೇಗ ಪಡೆದುಕೊಂಡಿದೆ. ಪ್ರಕರಣದ ತನಿಖೆಗೆ ಸಿಐಡಿ ಡಿಐಜಿ ಡಾ. ಭೀಮಾಶಂಕರ ಗುಳೇದ್ ಸ್ವತಃ ಅಖಾಡಕ್ಕಿಳಿದಿದ್ದು, ಬೆಂಗಳೂರಿನಿಂದ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿದ್ದಾರೆ. ಜಿಲ್ಲಾಡಳಿತದ ವರದಿ ಹಾಗೂ ಪೊಲೀಸ್ ತನಿಖೆಯ ಪ್ರಗತಿ ಕುರಿತು ಅವರು ಮಾಹಿತಿ ಸಂಗ್ರಹಿಸಲಿದ್ದು, ಬಳಿಕ ಮುಂದಿನ ಕ್ರಮಗಳ ಬಗ್ಗೆ ಸಿಐಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

28
ಆರ್‌ಬಿಐ ನಿಯಮ ಉಲ್ಲಂಘಿನೆ

ಆರ್‌ಬಿಐ ನಿಯಮ ಉಲ್ಲಂಘಿಸಿ ಸುಮಾರು 35 ಸಾವಿರ ಜನರಿಂದ ಸಾವಿರಾರು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಶಿವಾನಂದ ನೀಲಣ್ಣವರನ್ನು ಶುಕ್ರವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಉಪವಿಭಾಗಾಧಿಕಾರಿ ಶ್ರವಣ ನಾಯಿಕ ಅವರ ನೇತೃತ್ವದಲ್ಲಿ ಕಂದಾಯ, ಸಹಕಾರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಶಿವಾನಂದ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ದೀರ್ಘಕಾಲ ಪರಿಶೀಲನೆ ನಡೆಸಿದರು. ದಿನಪೂರ್ತಿ ನಡೆದ ತಪಾಸಣೆಯ ಬಳಿಕ ರಾತ್ರಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಎಸಿಪಿ ಸತ್ಯ ನಾಯಿಕ ಹಾಗೂ ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ಬಂಧನ ಮಾಡಲಾಯಿತು. ಬಂಧನದ ಬಳಿಕ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮೊದಲು ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.

38
ವಿಶಾಲ ದಾಖಲೆಗಳ ಪತ್ತೆ, ಡಿಜಿಟಲ್ ಸಾಧನಗಳ ಜಪ್ತಿ

ಶಿವಬಸವ ನಗರದಲ್ಲಿರುವ ಕಚೇರಿಯಲ್ಲಿ ಸುಮಾರು 12 ಗಂಟೆಗಳ ಕಾಲ ನಡೆದ ಪರಿಶೀಲನೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳು ಪತ್ತೆಯಾಗಿವೆ. ಎರಡು ಮೂಟೆಗಳಷ್ಟು ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್, ಪೆನ್‌ಡ್ರೈವ್ ಸೇರಿದಂತೆ ಹಲವು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಆನ್‌ಲೈನ್ ಹಣದ ವ್ಯವಹಾರಗಳ ಕುರಿತಂತೆ ವಿಶೇಷವಾಗಿ ಪರಿಶೀಲನೆ ನಡೆಸಲಾಗಿದೆ.

48
FIR ವಿವರಗಳು ಮತ್ತು ಆರೋಪಗಳು

ಈ ಪ್ರಕರಣದಲ್ಲಿ ಬಡ್ಸ್ ಆ್ಯಕ್ಟ್ ಸೆಕ್ಷನ್ 21 ಹಾಗೂ ಕೆಪಿಐಡಿ ಕಾಯ್ದೆಯ ಸೆಕ್ಷನ್ 9 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನಿರ್ದೇಶನದ ಮೇರೆಗೆ ಸಹಕಾರ ಇಲಾಖೆಯ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. FIR ಪ್ರಕಾರ, 2016ರಲ್ಲಿ ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಸಂಸ್ಥೆ ಆರಂಭಿಸಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಲಾಗಿದೆ. ಹೆಚ್ಚಿನ ಬಡ್ಡಿ ಮತ್ತು ಲಾಭದ ಆಮಿಷವೊಡ್ಡಿ ಸಾವಿರಾರು ಕೋಟಿ ರೂಪಾಯಿ ಹಣ ಸಂಗ್ರಹಿಸಿ, ಅದರ ಒಂದು ಭಾಗವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಉಳಿದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡು ವಂಚನೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

58
‘ಅಕ್ಯೂಮೆನ್’ ಆ್ಯಪ್ ಮೂಲಕ ಹಣ ಸಂಗ್ರಹ

ಶಿವಾನಂದ ನೀಲಣ್ಣವರ ‘ಅಕ್ಯೂಮೆನ್’ ಎಂಬ ಆ್ಯಪ್ ಅಭಿವೃದ್ಧಿಪಡಿಸಿ ಅದರ ಮೂಲಕ ಜನರಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ. ಈ ಆ್ಯಪ್ ಮೂಲಕವೇ ಸುಮಾರು 35 ಸಾವಿರ ಜನರಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ತನಿಖೆಗೆ ಕಾರಣವಾದ ಹೇಳಿಕೆ

“ನನ್ನ ಬಳಿ 15 ಸಾವಿರ ಬಂದೂಕುಗಳಿವೆ” ಎಂಬ ಶಿವಾನಂದ ನೀಡಿದ ವಿವಾದಾತ್ಮಕ ಹೇಳಿಕೆಯೇ ತನಿಖೆಗೆ ಪ್ರಮುಖ ಕಾರಣವಾಯಿತು. ಈ ಕುರಿತು ಅನಾಮಧೇಯ ವ್ಯಕ್ತಿಯೊಬ್ಬರು ಸೆಬಿಗೆ ಪತ್ರ ಬರೆದಿದ್ದು, ಅದು ಸಿಐಡಿಗೆ ರವಾನೆಯಾಯಿತು. ನಂತರ ಸಿಐಡಿ ಸೂಚನೆ ಮೇರೆಗೆ ಪ್ರಾಥಮಿಕ ಪರಿಶೀಲನೆ ಆರಂಭವಾಗಿದ್ದು, ವಂಚನೆಯ ಜಾಲ ಬಯಲಾಗಿದೆ.

68
ಡ್ರೈವರ್ ಆಗಿ ವೃತ್ತಿ ಆರಂಭ ಐಸ್ ಕ್ರೀಂ ವ್ಯಾಪಾರಿ

ಶಿವಾನಂದ ನೀಲಣ್ಣವರ ಮೂಲತಃ ಹುಬ್ಬಳ್ಳಿ ಬಳಿಯ ಉಣಕಲ್ ಗ್ರಾಮದವನು. ತಂದೆ ಮಾಜಿ ಸೈನಿಕ, ಅಪ್ಪನ ನಿಧನ ನಂತರ ಸಹೋದರನಿಗೆ ಉದ್ಯೋಗ ಸಿಕ್ಕಿತ್ತು. ಹೀಗಾಗಿ ಬೆಳಗಾವಿಗೆ ಎಲ್ಲರೂ ಶಿಫ್ಟ್ ಆಗಿದ್ದರು. ಆರಂಭದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಆತ, ನಂತರ ಐಸ್ ಕ್ರೀಂ ವ್ಯಾಪಾರ, ಫ್ಯಾಕ್ಟರಿ ಆರಂಭಿಸಿದ. 2016ರಲ್ಲಿ ಸಾಲ ಪಡೆದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬಳಿಕ ಜನರಿಂದ ಠೇವಣಿ ಸಂಗ್ರಹಿಸಲು ಮುಂದಾದ. ಶಿವಾನಂದ ನೀಲಣ್ಣವರ ಚಾರ್ಟರ್ಡ್ ಅಕೌಂಟೆಂಟ್ ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ ಸುಮಾರು ₹300 ರಿಂದ ₹400 ಕೋಟಿ ಮೊತ್ತದ ಬ್ಯಾಲೆನ್ಸ್ ಶೀಟ್ ಪತ್ತೆಯಾಗಿದೆ. ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್, ಮೀನುಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದೇವೆ ಎಂದು ಆತ ಹೇಳಿಕೊಂಡಿದ್ದರೂ, ಅದರ ಬಗ್ಗೆ ಸ್ಪಷ್ಟ ದಾಖಲೆಗಳು ಅನುಮಾನಾಸ್ಪದವಾಗಿವೆ.

78
ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ

ಈ ಪ್ರಕರಣ ಕೇವಲ ಬೆಳಗಾವಿಗೆ ಸೀಮಿತವಾಗದೇ ಅಂತರ್ ಜಿಲ್ಲೆ ಹಾಗೂ ಅಂತರ್ ರಾಜ್ಯ ಮಟ್ಟಕ್ಕೆ ವ್ಯಾಪಿಸಿರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಹೂಡಿಕೆ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡುವಂತೆ ಮನವಿ ಮಾಡಲಾಗಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ಸೆಕ್ಷನ್‌ಗಳನ್ನು ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.

88
ಬಂಧನದ ವೇಳೆ ಓಂ ನಮಃ ಶಿವಾಯ ಎಂದ ಶಿವಾನಂದ

ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲು ಶಿಫಾರಸು ಮಾಡುವುದಾಗಿ ಹೇಳಿದ್ದರು. ಪ್ರಾಥಮಿಕ ತನಿಖೆಯಲ್ಲಿ ಸಂಸ್ಥೆ ಆರ್‌ಬಿಐಯಲ್ಲಿ ನೋಂದಾಯಿತವಾಗಿಲ್ಲ ಎಂಬುದು ಬಹಿರಂಗವಾಗಿದೆ. ಬಂಧನದ ವೇಳೆ ಶಿವಾನಂದ ನೀಲಣ್ಣವರ, “ಓಂ ನಮಃ ಶಿವಾಯ… ಎಲ್ಲರಿಗೂ ಒಳ್ಳೆಯದಾಗಲಿ. ಕೋಟ್ಯಂತರ ರೂಪಾಯಿ ವಂಚನೆ ಆರೋಪ ಸತ್ಯವೋ ಸುಳ್ಳೋ ನನಗೆ ಗೊತ್ತಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಬಂಧನದ ಸಮಯದಲ್ಲಿ ಕೊರಳಲ್ಲಿದ್ದ ರುದ್ರಕ್ಷಿ ಮಾಲೆ, ಚಿನ್ನದ ಉಂಗುರ, ಸರ ತೆಗೆಸಿ ಕುಟುಂಬಸ್ಥರಿಗೆ ಪೊಲೀಸರು ನೀಡಿದರು.

₹4,500 ಕೋಟಿ ವಂಚನೆ ಆರೋಪ ಪ್ರಕರಣವು ರಾಜ್ಯದ ಗಮನ ಸೆಳೆದಿದ್ದು, ಸಾವಿರಾರು ಹೂಡಿಕೆದಾರರ ಭವಿಷ್ಯ ಪ್ರಶ್ನಾರ್ಥಕವಾಗಿದೆ. ಸಿಐಡಿ ತನಿಖೆ ಮುಂದುವರಿದಂತೆ ಇನ್ನಷ್ಟು ಮಹತ್ವದ ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ.

Read more Photos on
click me!

Recommended Stories