ಶಿವಮೊಗ್ಗದ ಸೊರಬ ತಾಲೂಕಿನಲ್ಲಿ ಕೆರೆ ಒತ್ತುವರಿ ನೆಪವೊಡ್ಡಿ ಬಡ ರೈತನ 500ಕ್ಕೂ ಹೆಚ್ಚು ಅಡಿಕೆ ಮರಗಳನ್ನು ತಾಲೂಕು ಆಡಳಿತ ಏಕಾಏಕಿ ನೆಲಸಮ ಮಾಡಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡಿದ್ದಕ್ಕೆ ದ್ವೇಷದ ರಾಜಕಾರಣದಿಂದ ಈ ಕೃತ್ಯ ಎಸಗಲಾಗಿದೆ ಎಂದು ರೈತನ ಪುತ್ರ ಆರೋಪಿಸಿದ್ದಾರೆ.
ಶಿವಮೊಗ್ಗ: 'ಮಕ್ಕಳಂತೆ 20 ವರ್ಷಗಳಿಂದ ರಕ್ತ ಬೆವರು ಸುರಿಸಿ ಸಾಕಿದ್ದೆವು. 25 ಲಕ್ಷ ರೂಪಾಯಿ ಸಾಲ-ಸೋಲ ಮಾಡಿ ಬೆಳೆಸಿದ ಫಸಲು ಬರುವ ತೋಟವನ್ನೇ ಕಣ್ಣೆದುರು ಕೊಚ್ಚಿ ಹಾಕಿದ್ದಾರೆ. ನಮಗೆ ಉಳಿದುಕೊಳ್ಳಲು ಬೇರೆ ಜಮೀನಿಲ್ಲ, ಈಗ ಸಾಯಲು ವಿ*ಷ ಕುಡಿಯೋದೊಂದೇ ದಾರಿ...' – ಇದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ತೆವರ ತೆಪ್ಪ ಗ್ರಾಮದ ಬಡ ರೈತ ದಂಪತಿ ಮಂಜಪ್ಪ ಮತ್ತು ಪರಸಪ್ಪ ಕಣ್ಣೀರಿಟ್ಟಿದ್ದಾರೆ.
ಶಿವಮೊಗ್ಗ ತಾಲ್ಲೂಕು ಆಡಳಿತವು ಕೆರೆ ಜಾಗ ಒತ್ತುವರಿ ನೆಪವೊಡ್ಡಿ ಜೆಸಿಬಿ ಯಂತ್ರಗಳನ್ನು ಬಳಸಿ ರೈತರ 1 ಎಕರೆ 15 ಗುಂಟೆ ಜಮೀನಿನಲ್ಲಿದ್ದ ಸುಮಾರು 500ಕ್ಕೂ ಅಧಿಕ ಅಡಿಕೆ ಮರಗಳನ್ನು ಏಕಾಏಕಿ ನೆಲಸಮ ಮಾಡಿದ್ದು, ಜಿಲ್ಲೆಯಾದ್ಯಂತ ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ.
25
ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡಿದ್ದೇ ತಪ್ಪಾಯ್ತಾ?
ತೋಟ ಕಳೆದುಕೊಂಡ ಮಂಜಪ್ಪ ಅವರ ಪುತ್ರ ದೇವರಾಜ್ ಆನವಟ್ಟಿ ಬ್ಲಾಕ್ ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಉಪಾಧ್ಯಕ್ಷರಾಗಿದ್ದು, ಆಡಳಿತ ವೈಫಲ್ಯದ ಬಗ್ಗೆ ಮಾತನಾಡಿದ್ದರು.
'ನಮ್ಮ ಭಾಗದ ಕಬ್ಬನಹಳ್ಳಿ ಬಳಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಬ್ಲಾಸ್ಟಿಂಗ್‌ನಿಂದ ಮನೆಗಳು ಬಿರುಕು ಬಿಟ್ಟಿದ್ದವು, ಬೋರ್‌ವೆಲ್‌ಗಳು ಬತ್ತಿ ಹೋಗಿದ್ದವು. ಇಷ್ಟೇ ಅಲ್ಲದೆ ಪೂರ್ವಜರ ಸ್ಮಶಾನ ಜಾಗವನ್ನೇ ಕಬಳಿಸಲು ಸಂಚು ರೂಪಿಸಲಾಗಿತ್ತು. ಇದರ ವಿರುದ್ಧ ನಾನು ಧ್ವನಿ ಎತ್ತಿದ್ದೆ. ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೂ ತಂದಿದ್ದೆ. ಈ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು, ಸ್ಥಳೀಯ ಕೆಲವರ ಕುಮ್ಮಕ್ಕಿನಿಂದ ಲೋಕಾಯುಕ್ತಕ್ಕೆ ದೂರು ಕೊಡಿಸಿ, ಯಾವುದೇ ನೋಟಿಸ್ ಅಥವಾ ಹೈಕೋರ್ಟ್ ಮೇಲ್ಮನವಿಗೂ ಅವಕಾಶ ನೀಡದೆ ಏಕಾಏಕಿ ತೋಟ ನಾಶ ಮಾಡಿದ್ದಾರೆ' ಎಂದು ದೇವರಾಜ್ ಆಕ್ರೋಶ ಹೊರಹಾಕಿದ್ದಾರೆ.
35
ಸ್ವಪಕ್ಷದ ಸಚಿವರ ವಿರುದ್ಧವೇ ಕಾಂಗ್ರೆಸ್ ಕಾರ್ಯಕರ್ತ ಕಿಡಿ:
'ನಾನು, ನನ್ನ ತಂದೆ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರು. ಆದರೆ ನಮ್ಮ ಸಂಕಷ್ಟಕ್ಕೆ ಪಕ್ಷದ ಒಬ್ಬ ಮುಖಂಡನಾಗಲಿ, ಸಚಿವರಾಗಲಿ ಕನಿಷ್ಠ ಒಂದು ಫೋನ್ ಮಾಡಿ ಸಾಂತ್ವನ ಹೇಳಲಿಲ್ಲ. ಬೇರೆ ಪಕ್ಷದವರು ಬಂದು ನೆರವಾಗುತ್ತಿದ್ದಾರೆ. ಅಧಿಕಾರದಲ್ಲಿರುವ ನಮ್ಮ ಪಕ್ಷದವರೇ ನಮ್ಮನ್ನು ಉಳಿಸಲಿಲ್ಲ ಎಂದರೆ ಜನಸಾಮಾನ್ಯರಿಗೆ ಯಾವ ನ್ಯಾಯ ಸಿಗುತ್ತೆ? ಬೆಂಗಳೂರಿನಲ್ಲಿ ಕೆಂಪೇಗೌಡ ಬಸ್ ನಿಲ್ದಾಣವೇ ಮೊದಲು ಕೆರೆಯಾಗಿತ್ತು, ಅಲ್ಲಿನ ಒತ್ತುವರಿ ತೆರವು ಮಾಡಲು ಆಗದ ಅಧಿಕಾರಿಗಳಿಗೆ ಬಡ ರೈತನ 1 ಎಕರೆ ಜಮೀನು ಮಾತ್ರ ಕಾಣಿಸಿತಾ?' ಎಂದು ದೇವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಣಗಳ ರಾಶಿಯಂತೆ ಬಿದ್ದಿವೆ ಅಡಿಕೆ ಮರಗಳು - ಸ್ಥಳಕ್ಕೆ ಬಿಜೆಪಿ ನಾಯಕರ ದೌಡು:
ವಿಷಯ ತಿಳಿಯುತ್ತಿದ್ದಂತೆ ದೆಹಲಿಯಿಂದ ನೇರವಾಗಿ ಆಗಮಿಸಿದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಸಂತ್ರಸ್ತ ರೈತ ಕುಟುಂಬವನ್ನು ಭೇಟಿ ಮಾಡಿ ವೈಯಕ್ತಿಕವಾಗಿ ಆರ್ಥಿಕ ಪರಿಹಾರ ನೀಡಿ ಸಾಂತ್ವನ ಹೇಳಿದರು.
ಸಂಸದ ಬಿ.ವೈ. ರಾಘವೇಂದ್ರ ಕಿಡಿ: 'ತೀರ್ಥಹಳ್ಳಿಯಲ್ಲಿ ಸಿಎಂ ಒಬ್ಬ ರೈತನ ಒಂದು ಗುಂಟೆ ಜಾಗವನ್ನೂ ಮುಟ್ಟಲ್ಲ' ಎನ್ನುತ್ತಾರೆ. ಆದರೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಅಡಿಕೆ ಗೊನೆಗಳು ಬಲಿಯುವ ಹೊತ್ತಿನಲ್ಲಿ ತಾಯಿಯ ರುಂಡ ಕಡಿದಂತೆ 500 ಮರಗಳನ್ನು ಕಡಿಯಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಅಧಿಕಾರದ ದರ್ಪ ಮತ್ತು ರಾಕ್ಷಸ ಕೃತ್ಯ' ಎಂದು ವಾಗ್ದಾಳಿ ನಡೆಸಿದರು.
55
ಜಿಲ್ಲಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ
ಮಾಜಿ ಸಚಿವ ಹಾಲಪ್ಪ ಆಕ್ರೋಶ: 'ಮಹಾಭಾರತ ಯುದ್ಧದಲ್ಲಿ ಸೈನಿಕರ ಹೆಣಗಳು ಬಿದ್ದಂತೆ ಅಡಿಕೆ ಮರಗಳು ಬಿದ್ದಿವೆ. 20 ವರ್ಷಗಳ ಕಾಲ ಸುಮ್ಮನಿದ್ದು, ಈಗ ಲೋಕಾಯುಕ್ತದ ಅಂತಿಮ ಆದೇಶವೂ ಬರುವ ಮುನ್ನ ತಹಸೀಲ್ದಾರ್ ಜೆಸಿಬಿ ತಂದು ಕೆಡವಿರುವುದು ಅಕ್ಷಮ್ಯ ಅಪರಾಧ. ಸಚಿವರೇ ಇದಕ್ಕೆ ನೇರ ಹೊಣೆ' ಎಂದು ಆಕ್ರೋಶ ಹೊರಹಾಕಿದರು.
ಈ ಸಂಬಂಧ ತಾಲೂಕು ಆಡಳಿತ ಮತ್ತು ದ್ವೇಷದ ರಾಜಕಾರಣದ ವಿರುದ್ಧ ಜಿಲ್ಲೆಯಾದ್ಯಂತ ಉಗ್ರ ಹೋರಾಟ ರೂಪಿಸುವುದಾಗಿ ರೈತ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ.