ಬೆಂಗಳೂರು ರಸ್ತೆಯಲ್ಲಿ ಸುರಂಗ ರೀತಿಯ ಗುಂಡಿಗಳು; ಇವು ಕೆಂಪೇಗೌಡರು ಮಾಡಿದ್ದಲ್ಲ, ಜಿಬಿಎ ಮಾಡಿದ ಎಡವಟ್ಟು!

Published : Oct 30, 2026, 11:51 AM IST

ಬೆಂಗಳೂರಿನ ಮಲ್ಲತ್ತಹಳ್ಳಿ ವ್ಯಾಪ್ತಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡು ರಸ್ತೆಯಲ್ಲೇ ದಿಢೀರ್ ಭೂಮಿ ಕುಸಿದು ಬೃಹತ್ ಸುರಂಗದಂತಹ ಗುಂಡಿ ನಿರ್ಮಾಣವಾಗಿದೆ. ಕಾಂಕ್ರೀಟ್ ರಸ್ತೆಯ ಅಡಿಯಲ್ಲಿದ್ದ ಮಣ್ಣು ಕೊಚ್ಚಿ ಹೋಗಿದ್ದು, ಜಿಬಿಎ ಮತ್ತು ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ.

PREV
15
ಬೆಂಗಳೂರು ರಸ್ತೆಗಳಲ್ಲಿ ಸುರಂಗ ಮಾದರಿಯ ಗುಂಡಿಗಳು

ಬೆಂಗಳೂರಿನಲ್ಲಿ ಮೂಲಸೌಕರ್ಯದ ಅಧೋಗತಿ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ತಲುಪುತ್ತಿದೆ. ಇಷ್ಟು ದಿನ ರಸ್ತೆಗಳ ಮೇಲೆ ಬೃಹತ್ ಗುಂಡಿಗಳನ್ನು ನೋಡಿ ರೋಸಿಹೋಗಿದ್ದ ಬಫಂಗಿ ಸಾರ್ವಜನಿಕರಿಗೆ ಈಗ ದಿಢೀರ್ 'ರಸ್ತೆ ಕುಸಿತ' ಹಾಗೂ 'ಸುರಂಗ ಮಾದರಿಯ ಹಳ್ಳಗಳ' ಭೀತಿ ಎದುರಾಗಿದೆ. ನಗರದ ಮಲ್ಲತ್ತಹಳ್ಳಿ ವ್ಯಾಪ್ತಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡು ರಸ್ತೆಯಲ್ಲೇ ದಿಢೀರ್ ಭೂಮಿ ಕುಸಿದಿದ್ದು, ಸುಮಾರು 5 ಅಡಿ ಆಳ ಹಾಗೂ ಒಳಗಡೆ ಬೃಹತ್ ಸುರಂಗದಂತೆ ಮಣ್ಣು ಕುಸಿದಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

25
ಮೇಲ್ಭಾಗದಲ್ಲಿ ಹಳ್ಳ, ಒಳಗಡೆ 10 ಅಡಿ ವಿಸ್ತಾರದ ಸುರಂಗ!

ವಿಶ್ವೇಶ್ವರಯ್ಯ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಸುಮಾರು 5 ಅಡಿ ಆಳಕ್ಕೆ ರಸ್ತೆ ಕುಸಿದಿದೆ. ಆದರೆ, ಆಳಕ್ಕೆ ಇಳಿದು ಪರಿಶೀಲಿಸಿದರೆ ಒಳಗಡೆ ಸುಮಾರು 8 ರಿಂದ 10 ಅಡಿ ಅಗಲಕ್ಕೆ ಮಣ್ಣು ಕುಸಿದು ಬೃಹತ್ ಗುಹೆಯಂತಾಗಿದೆ. ಕಾಂಕ್ರೀಟ್ ಹಾಗೂ ಆಸ್ಫಾಲ್ಟ್ ರಸ್ತೆಯ ಕೆಳಗಿದ್ದ ಮಣ್ಣು ಕೊಚ್ಚಿ ಹೋಗಿದ್ದು, ಮೇಲ್ಭಾಗದ ತೆಳುವಾದ ರಸ್ತೆ ಪದರ ಮಾತ್ರ ಬಾಕಿ ಉಳಿದಿದೆ.

35
ರಸ್ತೆ ಸಂಪೂರ್ಣ ಕುಸಿದರೆ ಪ್ರಾಣಕ್ಕೇ ಕುತ್ತು

ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ದ್ವಿಚಕ್ರ ವಾಹನಗಳು, ಕಾರುಗಳು ಹಾಗೂ ಶಾಲಾ ಬಸ್‌ಗಳು ಸಂಚರಿಸುತ್ತವೆ. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಥವಾ ಭಾರೀ ವಾಹನಗಳು ಇದರ ಮೇಲೇರಿದರೆ ರಸ್ತೆ ಸಂಪೂರ್ಣ ಕುಸಿದು ಪ್ರಾಣಕ್ಕೇ ಕುತ್ತು ಬರುವುದು ಖಚಿತವಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗಾರರಾದ ಮುತ್ತಪ್ಪ ಅವರು ಕಳಪೆ ಕಾಮಗಾರಿ ಹಾಗೂ ರಸ್ತೆ ಗುಂಡಿಯಿಂದ ಆಗುತ್ತಿರುವ ಸಮಸ್ಯೆಯ ಕುರಿತು ಸಂಪೂರ್ಣ ವರದಿಯನ್ನು ಬಿಚ್ಚಿಟ್ಟಿದ್ದಾರೆ.

45
ಜಿಬಿಎ ಮತ್ತು ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯ!

ಈ ಭೀಕರ ಅನಾಹುತಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧಿಕಾರಿಗಳ ಬೇಜವಾಬ್ದಾರಿಯೇ ನೇರ ಕಾರಣ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಸಿದ ಬಳಿಕ ಸರಿಯಾಗಿ ಮಣ್ಣು ಮುಚ್ಚಿ, ಗಟ್ಟಿಗೊಳಿಸದೇ ಅವಸರದಲ್ಲಿ ರಸ್ತೆ ನಿರ್ಮಿಸಿದ್ದರಿಂದ ಮಳೆನೀರು ಮತ್ತು ಸೋರಿಕೆಯಾದ ನೀರು ಒಳಗಿನ ಮಣ್ಣನ್ನು ಕೊಚ್ಚಿಕೊಂಡು ಹೋಗಿದೆ. ಪರಿಣಾಮವಾಗಿ ನಡು ರಸ್ತೆಯಲ್ಲೇ ಅಧಿಕಾರಿಗಳು ‘ಸುರಂಗ’ ನಿರ್ಮಿಸಿದಂತಾಗಿದೆ.

55
ಸಾರ್ವಜನಿಕರ ಆಕ್ರೋಶ, ತಕ್ಷಣವೇ ದುರಸ್ತಿಗೆ ಆಗ್ರಹ!

'ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಮಿಷನ್ ದಂಧೆಯಲ್ಲಿ ಮುಳುಗಿದ್ದು, ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ರಾತ್ರಿ ವೇಳೆ ಕತ್ತಲಿನಲ್ಲಿ ಬರುವ ವಾಹನ ಸವಾರರಿಗೆ ಈ ಹಳ್ಳ ಕಾಣಿಸದೆ ಬಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತದೆ' ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ಕುಸಿದಿರುವ ರಸ್ತೆಯನ್ನು ವೈಜ್ಞಾನಿಕವಾಗಿ ದುರಸ್ತಿಗೊಳಿಸಿ, ಸಂಭಾವ್ಯ ಅನಾಹುತವನ್ನು ತಪ್ಪಿಸಬೇಕಿದೆ.

Read more Photos on
click me!

Recommended Stories