ಶಿವಮೊಗ್ಗದಲ್ಲಿ, 22 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಮಹಿಳೆಯೊಬ್ಬಳು, ತನ್ನ ಪತಿಗೆ ರಹಸ್ಯವಾಗಿ ವಿಚ್ಛೇದನ ನೀಡಿ ಆತನ ಆಪ್ತ ಸ್ನೇಹಿತನನ್ನೇ ಮದುವೆಯಾಗಿದ್ದಾಳೆ. ಈ ವಿಷಯ ತಿಳಿದು ಆಕ್ರೋಶಗೊಂಡ ಮೊದಲ ಪತಿ, ತನ್ನ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗ (ಡಿ.28): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸಿನಿಮಾ ಕಥೆಯನ್ನೂ ಮೀರಿಸುವಂತಹ ವಿಚಿತ್ರ ಘಟನೆಯೊಂದು ಜರುಗಿದೆ. ತನ್ನ ಪತ್ನಿ ತನಗೆ ತಿಳಿಯದಂತೆ ವಿಚ್ಛೇದನ ಪಡೆದು, ತನ್ನದೇ ಆಪ್ತ ಸ್ನೇಹಿತನನ್ನು ಮದುವೆಯಾದ ವಿಷಯ ತಿಳಿದ ಪತಿ, ಆಕ್ರೋಶಗೊಂಡು ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
26
ವಿಕ್ರಂ ಮತ್ತು ಆತನ ಪತ್ನಿ
ನಗರದ ಮಿಳ್ಳಘಟ್ಟ ಬಡಾವಣೆಯ ನಿವಾಸಿ ವಿಕ್ರಂ ಮತ್ತು ವಿನೋದ್ ಖಾಸಗಿ ಲಾರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಪ್ತ ಸ್ನೇಹಿತರು. ವಿಕ್ರಂಗೆ ಛಾಯಾ ಎಂಬಾಕೆಯೊಂದಿಗೆ 22 ವರ್ಷಗಳ ದಾಂಪತ್ಯ ಜೀವನವಿತ್ತು. ಇವರಿಗೆ 18 ವರ್ಷದ ಮಗ ಹಾಗೂ 14 ವರ್ಷದ ಮಗಳಿದ್ದಾರೆ. ವಿನೋದ್ ಒಳ್ಳೆಯ ಸ್ನೇಹಿತನಾಗಿದ್ದ ಕಾರಣ ಆಗಾಗ್ಗೆ ವಿಕ್ರಂ ಮನೆಗೆ ಬಂದು ಹೋಗುತ್ತಿದ್ದನು.
36
ವಿಕ್ರಂನಿಂದ ಡಿವೋರ್ಸ್
ಈ ವೇಳೆ ವಿನೋದ್ ಮತ್ತು ಛಾಯಾ ನಡುವೆ ಪ್ರೇಮಾಂಕುರವಾಗಿತ್ತು. ಇದು ವಿಕ್ರಂ ಗಮನಕ್ಕೆ ಬರುವ ಮೊದಲೇ ಛಾಯಾ ಎರಡು ತಿಂಗಳ ಹಿಂದೆ ರಹಸ್ಯವಾಗಿ ಗಂಡನಿಂದ ವಿಚ್ಛೇದನ ಪಡೆದಿದ್ದಳು. ಕಳೆದೆರಡು ವಾರಗಳ ಹಿಂದೆಯಷ್ಟೇ ಆಕೆ ತನ್ನ ಮೊದಲ ಪತಿಯ ಸ್ನೇಹಿತ ವಿನೋದ್‌ನನ್ನು ಮದುವೆಯಾಗಿದ್ದಳು.
ತನ್ನ ಪತ್ನಿ ತನಗೆ ಮೋಸ ಮಾಡಿ ಸ್ನೇಹಿತನನ್ನು ಮದುವೆಯಾಗಿದ್ದಾಳೆ ಎಂಬ ವಿಷಯ ತಿಳಿದ ವಿಕ್ರಂ ರೊಚ್ಚಿಗೆದ್ದಿದ್ದನು. ನಿನ್ನೆ ಸಂಜೆ ವಿನೋದ್ ಮನೆಗೆ ಹೋದಾಗ ಅಲ್ಲಿ ಪತ್ನಿ ಛಾಯಾ ಕಾಣಿಸಿದ್ದಾಳೆ. ಬಳಿಕ ವಿನೋದ್‌ಗೆ ಕರೆ ಮಾಡಿದಾಗ ಎಲ್ಲಿದ್ದಾನೆಂದು ತಿಳಿಸದುಕೊಂಡಿದ್ದಾನೆ.
ನಂತರ ವಿನೋದ್ ಮಲವಗೊಪ್ಪದ ಪೆಟ್ರೋಲ್ ಬಂಕ್ ಬಳಿ ಇರುವುದನ್ನು ತಿಳಿದ ವಿಕ್ರಂ, ಅಲ್ಲಿಗೆ ತೆರಳಿ ಜಗಳ ತೆಗೆದಿದ್ದಾನೆ. ಈ ವೇಳೆ ತೀವ್ರ ಕೋಪಗೊಂಡಿದ್ದ ವಿಕ್ರಂ, ವಿನೋದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
56
ಗಾಯಾಳು ವಿನೋದ್‌ಗೆ ಚಿಕಿತ್ಸೆ
ತೀವ್ರವಾಗಿ ಗಾಯಗೊಂಡ ವಿನೋದ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯ MICU ವಿಭಾಗದಲ್ಲಿರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
66
ವಿಕ್ರಂಗೆ ಸಹಕರಿಸಿದ ಜಗನ್ನಾಥ್
ಪ್ರಕರಣದ ಮುಖ್ಯ ಆರೋಪಿ ವಿಕ್ರಂ ಮತ್ತು ಆತನಿಗೆ ಸಹಕರಿಸಿದ ಜಗನ್ನಾಥ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ. 22 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅನೈತಿಕ ಸಂಬಂಧದಿಂದ ಬೆಂಕಿ ಬಿದ್ದಿರುವುದು ಮಲೆನಾಡಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.