ಕಲ್ಯಾಣ ಕರ್ನಾಟಕದ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕೊಪ್ಪಳದಲ್ಲಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಸಚಿವರ ಕಾರನ್ನು ಅಡ್ಡಗಟ್ಟಿ ಪ್ರತಿಭಟಿಸಿದರೆ, ರಾಯಚೂರಿನಲ್ಲಿ ಕೋಟಿಗಳ ಯೋಜನೆ ವಿಫಲವಾದ ಹಿನ್ನೆಲೆ, ಪಿಡಿಒ ಕಚೇರಿಗೆ ಮುತ್ತಿಗೆ ಹಾಕಿದರು.
ಕೊಪ್ಪಳ/ರಾಯಚೂರು (ಏ.22): ಬಿಸಿಲ ನಾಡು ಖ್ಯಾತಿಯ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈಗ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹನಿ ನೀರಿಗಾಗಿ ಮೈಲುಗಟ್ಟಲೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀರಿನ ಬವಣೆಯ ವಿರುದ್ಧ ಜನರ ಆಕ್ರೋಶದ ಕಟ್ಟೆ ಒಡೆದಿದ್ದು, ಕೊಪ್ಪಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾರನ್ನೇ ತಡೆದು ಮಹಿಳೆಯರು ಪ್ರತಿಭಟಿಸಿದರೆ, ರಾಯಚೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ವಿನೂತನ ಹೋರಾಟ ನಡೆಸಿದ್ದಾರೆ.
26
ಕೊಪ್ಪಳ: ಸಚಿವರ ಕಾರು ತಡೆದ ಖಾಲಿ ಕೊಡಗಳು
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಇಂದು ಹೈಡ್ರಾಮಾ ನಡೆದಿದೆ. ನವಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲು ತೆರಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮಹಿಳೆಯರು ಶಾಕ್ ನೀಡಿದ್ದಾರೆ. ನೀರಿನ ಸಮಸ್ಯೆ ತಾಳಲಾರದೆ ಆಕ್ರೋಶಗೊಂಡಿದ್ದ ಗ್ರಾಮದ ಮಹಿಳೆಯರು, ಸಚಿವರ ಕಾರಿನ ಮುಂದೆ ಖಾಲಿ ಕೊಡಗಳನ್ನು ಹಿಡಿದು ಅಡ್ಡ ನಿಂತು ಪ್ರತಿಭಟನೆ ನಡೆಸಿದರು.
36
ಕಾಮಗಾರಿ ಕೈಬಿಡಿ, ಕುಡಿಯಲು ನೀರು ಕೊಡಿ
'ನಮಗೆ ಅಭಿವೃದ್ಧಿ ಕಾಮಗಾರಿಗಳಿಗಿಂತ ಮೊದಲು ಕುಡಿಯಲು ನೀರು ಕೊಡಿ' ಎಂದು ಮಹಿಳೆಯರು ಸಚಿವರ ಮುಂದೆ ಅಳಲು ತೋಡಿಕೊಂಡರು. ಈ ವೇಳೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಚಿವರು ಮಹಿಳೆಯರ ಮನವೊಲಿಸಲು ಯತ್ನಿಸಿದರಾದರೂ, ಕೂಡಲೇ ಶಾಶ್ವತ ಪರಿಹಾರ ಕಲ್ಪಿಸುವಂತೆ ಮಹಿಳೆಯರು ಪಟ್ಟು ಹಿಡಿದರು.
ಇನ್ನೊಂದೆಡೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾಮದಲ್ಲಿ ನೀರಿನ ಸಮಸ್ಯೆ ವಿಕೋಪಕ್ಕೆ ಹೋಗಿದೆ. ಈ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಬರೋಬ್ಬರಿ 11 ಕೋಟಿ ರೂಪಾಯಿ ವೆಚ್ಚದಲ್ಲಿ 'ಬಹುಗ್ರಾಮ ಕುಡಿಯುವ ನೀರಿನ ಯೋಜನೆ' ಜಾರಿಯಲ್ಲಿದೆ. ಆದರೆ, ಕಳೆದ ಒಂದು ವಾರದಿಂದ ಈ ಯೋಜನೆಯ ಎರಡು ಮೋಟಾರುಗಳು ಸುಟ್ಟು ಹೋಗಿದ್ದು, ಪಲಕನಮರಡಿ, ಮದರಕಲ್, ವಂದಲಿ ಮತ್ತು ದೇವರಗುಡ್ಡ ಗ್ರಾಮಗಳು ಸಂಪೂರ್ಣವಾಗಿ ಬಾಯಾರಿಕೆಯಿಂದ ತತ್ತರಿಸುತ್ತಿವೆ.
56
ಪಿಡಿಒ ವಿರುದ್ಧ ಗ್ರಾಮಸ್ಥರ ಆಕ್ರೋಶ:
ಮೋಟಾರು ಸುಟ್ಟು ಹೋಗಿದ್ದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ತಿಮ್ಮಣ್ಣ ಅವರು ಕ್ಯಾರೆ ಎನ್ನುತ್ತಿಲ್ಲ ಎಂಬುದು ಗ್ರಾಮಸ್ಥರ ಗಂಭೀರ ಆರೋಪ. ಮೋಟಾರು ರಿಪೇರಿ ಮಾಡಿಸಿ ಎಂದು ಕೇಳಿದರೆ, 'ಪಂಚಾಯತ್‌ನಲ್ಲಿ ಅನುದಾನವಿಲ್ಲ' ಎಂಬ ಹಾರಿಕೆ ಉತ್ತರ ನೀಡಿ ದುರ್ವರ್ತನೆ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇದರಿಂದ ಬೇಸತ್ತ ಜನರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯತ್ ಕಚೇರಿ ಮುಂದೆ ಜಮಾಯಿಸಿ ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಸರ್ಕಾರದ ಗಮನ ಸೆಳೆದರು.
66
ತುರ್ತು ನೀರು ಒದಗಿಸುತ್ತಾ ಜಿಲ್ಲಾಡಳಿತ
ಕೋಟಿ ಕೋಟಿ ರೂಪಾಯಿ ವೆಚ್ಚದ ಯೋಜನೆಗಳು ಕಾಗದದ ಮೇಲೆ ಕಾಣಿಸುತ್ತಿದ್ದರೂ, ಜನರ ಗಂಟಲು ಮಾತ್ರ ಒಣಗುತ್ತಿದೆ. ಅಧಿಕಾರಿಗಳ ಸಮನ್ವಯದ ಕೊರತೆ ಮತ್ತು ನಿರ್ಲಕ್ಷ್ಯದಿಂದಾಗಿ ಜನರು ರಸ್ತೆಗಿಳಿದು ಹೋರಾಡುವಂತಾಗಿದೆ. ಇನ್ನಾದರೂ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ.