ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದ 'ಪ್ರಬುದ್ಧ ಅಕಾಡೆಮಿ' ಮೇಲ್ಚಾವಣಿ ತಿಂಗಳಲ್ಲೇ ಕುಸಿತ: ಕಳಪೆ ಕಾಂಗ್ರೆಸ್ ಎಂದ ಜೆಡಿಎಸ್!

Published : Mar 02, 2026, 05:28 PM IST

ಕಲಬುರಗಿಯಲ್ಲಿ ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದ ‘ಪ್ರಬುದ್ಧ ಅಕಾಡೆಮಿ’ ಮೇಲ್ಚಾವಣಿ ಕುಸಿದಿದೆ. ವಿದ್ಯಾರ್ಥಿಗಳು ಅಭ್ಯಾಸ ನಿರತರಾಗಿದ್ದ ವೇಳೆ ನಡೆದ ಈ ಘಟನೆಯು ಕಳಪೆ ಕಾಮಗಾರಿಯ ಆರೋಪಕ್ಕೆ ಕಾರಣವಾಗಿದ್ದು, ಜೆಡಿಎಸ್ ಪಕ್ಷವು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

PREV
16
ಕಲಬುರಗಿಯ 'ಪ್ರಬುದ್ಧ ಅಕಾಡೆಮಿ'

ಕಲಬುರಗಿ (ಮಾ.02): ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಅತ್ಯಂತ ಸಡಗರದಿಂದ ಉದ್ಘಾಟನೆಗೊಂಡಿದ್ದ ಕಲಬುರಗಿಯ 'ಪ್ರಬುದ್ಧ ಅಕಾಡೆಮಿ' (ಪರೀಕ್ಷಾ ಪೂರ್ವ ತರಬೇತಿ ಕೇಂದ್ರ) ಈಗ ವಿವಾದದ ಕೇಂದ್ರಬಿಂದುವಾಗಿದೆ. ಉದ್ಘಾಟನೆಯಾಗಿ ತಿಂಗಳು ಕಳೆಯುವ ಮೊದಲೇ ಅಕಾಡೆಮಿಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ಜಾತ್ಯಾತೀತ ಜನತಾದಳ (ಜೆಡಿಎಸ್), ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

26
ಸ್ವಲ್ಪದರಲ್ಲೇ ತಪ್ಪಿದ ಪ್ರಾಣಾಪಾಯ

ಪ್ರಬುದ್ಧ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳು ಅಭ್ಯಾಸ ನಿರತರಾಗಿದ್ದ ವೇಳೆ ಇದ್ದಕ್ಕಿದ್ದಂತೆ ಮೇಲ್ಚಾವಣಿಯ ಭಾಗವೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಅಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಘಟನೆಯಿಂದ ಅಕಾಡೆಮಿಯಲ್ಲಿದ್ದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಸಚಿವರು ದೇಶದಲ್ಲೇ ಪ್ರಪ್ರಥಮ ಎಂದು ಬಣ್ಣಿಸಿದ್ದ ಕಟ್ಟಡದ ಸ್ಥಿತಿ ಇಷ್ಟು ಬೇಗ ಹೀಗಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

36
'ಕಮಿಷನ್ ಕಾಂಗ್ರೆಸ್ ಸರ್ಕಾರ' - ಜೆಡಿಎಸ್ ಕಿಡಿ

ಈ ಘಟನೆಯ ಫೋಟೋಗಳನ್ನು ಹಂಚಿಕೊಂಡಿರುವ ಜೆಡಿಎಸ್, ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ. 'ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಕಳಪೆ! ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಉದ್ಘಾಟನೆಗೊಂಡು ತಿಂಗಳು ಸಹ ಕಳೆದಿಲ್ಲ, ಆಗಲೇ ಮೇಲ್ಚಾವಣಿ ಕುಸಿದಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಇಂತಹ ಕಳಪೆ ಕಾಮಗಾರಿಗಳಿಂದ ವ್ಯರ್ಥವಾಗುತ್ತಿದೆ' ಎಂದು ಜೆಡಿಎಸ್ ಆರೋಪಿಸಿದೆ. ಅಲ್ಲದೆ, ವಿದ್ಯಾರ್ಥಿನಿಯ ಪ್ರಾಣಕ್ಕೆ ಅಪಾಯ ಬಂದಿದ್ದರೂ ಸರ್ಕಾರ ಮೌನವಾಗಿರುವುದು ಸರಿಯಲ್ಲ ಎಂದು ಟೀಕಿಸಿದೆ.

46
ಅದ್ದೂರಿ ಕನಸು, ಕಳಪೆ ವಾಸ್ತವ?

ಕಳೆದ ಜನವರಿ 24ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರು 'ಪ್ರಬುದ್ಧ ಅಕಾಡೆಮಿ'ಯ ಬಗ್ಗೆ ಅತ್ಯಂತ ಹೆಮ್ಮೆಯಿಂದ ಪೋಸ್ಟ್ ಮಾಡಿದ್ದರು. 'ಕಲ್ಯಾಣ ಕರ್ನಾಟಕದ ಯುವಸಮುದಾಯದ ಭವಿಷ್ಯಕ್ಕೆ ಇದೊಂದು ಭದ್ರ ಬುನಾದಿ. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ 500 ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತ ಮತ್ತು ಗುಣಮಟ್ಟದ ತರಬೇತಿ ನೀಡಲಾಗುತ್ತದೆ' ಎಂದು ತಿಳಿಸಿದ್ದರು.

56
ಮಳೆಗಾಲಕ್ಕೂ ಮುಂಚೆ ಕಟ್ಟಡ ಮೇಲ್ಛಾವಣಿ ಕುಸಿತ

ಆಧುನಿಕ ತಂತ್ರಜ್ಞಾನ, ಡಿಜಿಟಲ್ ಲೈಬ್ರರಿ, ಸುಸಜ್ಜಿತ ಗ್ರಂಥಾಲಯ, ಮೆಂಟರಿಂಗ್ ಕೊಠಡಿಗಳು ಮತ್ತು 500 ವಿದ್ಯಾರ್ಥಿಗಳ ಸಾಮರ್ಥ್ಯದ ಈ ಕೇಂದ್ರವು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ ಎಂದು ಸರ್ಕಾರ ಬಿಂಬಿಸಿತ್ತು. ಆದರೆ, ಮೊದಲ ಮಳೆಗಾಲ ಅಥವಾ ಅಲ್ಪ ಅವಧಿಯಲ್ಲೇ ಕಟ್ಟಡದ ಮೇಲ್ಚಾವಣಿ ಕುಸಿಯುತ್ತಿರುವುದು ಕಾಮಗಾರಿಯ ಗುಣಮಟ್ಟದ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಮೂಡಿಸಿದೆ.

66
ಹೊಣೆಗಾರಿಕೆ ಯಾರದ್ದು?

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಕನಸಿಗೆ ಈ ಕೇಂದ್ರ ಆಸರೆಯಾಗಬೇಕಿತ್ತು. ಆದರೆ, ಈಗ ಕಟ್ಟಡವೇ ಕುಸಿಯುತ್ತಿರುವುದು ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಸರ್ಕಾರ ಕೂಡಲೇ ಈ ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ, ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Read more Photos on
click me!

Recommended Stories