ಬೆಂಗಳೂರು ಹೊರವಲಯದ ಆನೇಕಲ್-ಅತ್ತಿಬೆಲೆ ರಸ್ತೆಯ ರೈಲ್ವೆ ಹಳಿ ಮೇಲೆ ಬಿಎಂಟಿಸಿ ಬಸ್ ಕೆಟ್ಟು ನಿಂತು ಆತಂಕ ಸೃಷ್ಟಿಸಿತ್ತು. ಸುಮಾರು 30 ನಿಮಿಷಗಳ ಕಾಲ ರೈಲು ಮತ್ತು ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ನಂತರ ಸ್ಥಳೀಯರು ಬಸ್ ತಳ್ಳಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ರೈಲ್ವೆ ಹಳಿ ಮೇಲೆ ಬಿಎಂಟಿಸಿ ಬಸ್ ಒಂದು ಕೆಟ್ಟು ನಿಂತು ಕೆಲಕಾಲ ಸಾರ್ವಜನಿಕರಿಗೆ ಆತಂಕ ಉಂಟುಮಾಡಿದ್ದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಿಂದ ಅತ್ತಿಬೆಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ನಡೆದಿದೆ.
25
ಆನೇಕಲ್ - ಅತ್ತಿಬೆಲೆ ರಸ್ತೆ
ಆನೇಕಲ್ - ಅತ್ತಿಬೆಲೆ ರಸ್ತೆಯ ಹಾಲ್ದೇನಹಳ್ಳಿ ಬಳಿಯ ರೈಲ್ವೆ ಮಾರ್ಗದಲ್ಲಿ ಚೆನ್ನೈ ಧರ್ಮಪುರಿ ಸೇರಿದಂತೆ ತಮಿಳುನಾಡು ಕಡೆ ಹೋಗುವ ಅನೇಕ ಎಕ್ಸ್‌ಪ್ರೆಸ್ ರೈಲುಗಳು ಸಹ ಸಂಚಾರ ಮಾಡುತ್ತವೆ. ರೈಲು ಹಳಿಗಳ ಮೇಲೆಯೇ ಬಸ್ ನಿಂತಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು.
35
ಅಂಡರ್ ಪಾಸ್
ಈ ಮಾರ್ಗದಲ್ಲಿಅಂಡರ್ ಪಾಸ್ ಮಾಡುವಂತೆ ಸಾರ್ವಜನಿಕರು ಸುಮಾರು 20 ವರ್ಷಗಳಿಂದ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೂ ಅರ್ಜಿಗಳನ್ನು ಹಾಕಿ ಬೇಸತ್ತು ಹೋಗಿದ್ದಾರೆ. ಬಸ್ ನಿಂತಿರುವ ವಿಷಯ ತಿಳಿದು ರೈಲು ಬಂದ್ರೆ ಏನಾಗುತ್ತೆ ಎಂದು ಆತಂಕ ಸೃಷ್ಟಿಯಾಗಿತ್ತು.
ಟ್ರ್ಯಾಕ್ ಮಧ್ಯೆ ಬಸ್ ಕೆಟ್ಟು ನಿಂತಿದ್ದರಿಂದ ಸುಮಾರು 30 ನಿಮಿಷಗಳ ಕಾಲ ರೈಲ್ವೆ ಸಂಚಾರ ಹಾಗೂ ರಸ್ತೆ ಸಂಚಾರ ಎರಡು ಸಹ ಸ್ಥಗಿತವಾಗಿತ್ತು. ಅಲ್ಲದೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಅನಂತರ ಸ್ಥಳೀಯರೆಲ್ಲರೂ ಸೇರಿ ಬಸ್ಸನ್ನು ತಳ್ಳಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಬಸ್ ನಡುರಸ್ತೆಯಲ್ಲಿಯೇ ನಿಂತಿದ್ದರಿಂದ ಎರಡೂ ಬದಿಯಲ್ಲಿ ಅರ್ಧ ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಉಂಟಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗೆ ರೈಲು ಡಿಕ್ಕಿ ಹೊಡೆದಿತ್ತು.