ಹುಬ್ಬಳ್ಳಿ ವೀರಶೈವ ಲಿಂಗಾಯತ ಏಕತಾ ಸಮಾವೇಶ, ಒಗ್ಗಟ್ಟಿನ ವೇದಿಕೆಯಲ್ಲಿ ಭಿನ್ನಮತದ ಸ್ಫೋಟ! ಯಾರು ಏನು ಹೇಳಿದ್ರು ನೋಡಿ

Published : Sep 19, 2025, 08:00 PM IST

Veerashaiva Lingayat ಹುಬ್ಬಳ್ಳಿಯಲ್ಲಿ ನಡೆದ ವೀರಶೈವ–ಲಿಂಗಾಯತ ಏಕತಾ ಸಮಾವೇಶವು ಒಗ್ಗಟ್ಟಿನ ಕರೆ ನೀಡಿದರೂ, ವೇದಿಕೆಯಲ್ಲೇ ಗೊಂದಲಕ್ಕೆ ಸಾಕ್ಷಿಯಾಯಿತು. ಜಾತಿ ಸಮೀಕ್ಷೆ ಮತ್ತು ಪ್ರತ್ಯೇಕ ಧರ್ಮದ ವಿಚಾರವಾಗಿ ಮುಖಂಡರ ನಡುವೆ ಭಿನ್ನಾಭಿಪ್ರಾಯ, ಬಸವರಾಜ ಬೊಮ್ಮಾಯಿ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದರು.

PREV
110
ಮಹಾರಾಷ್ಟ್ರ ಶಿವ ಸಂಘಟನೆ ಮಾತಿಗೆ ತೀವ್ರ ಆಕ್ಷೇಪ

ಹುಬ್ಬಳ್ಳಿ: ನೆಹರೂ ಮೈದಾನದಲ್ಲಿ ಭವ್ಯವಾಗಿ ಆಯೋಜಿಸಲಾಗಿದ್ದ ವೀರಶೈವ–ಲಿಂಗಾಯತ ಏಕತಾ ಸಮಾವೇಶವು ಹಲವು ಬಣ್ಣಗಳನ್ನು ತಳೆದಿತ್ತು. ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಈ ಸಮಾವೇಶದಲ್ಲಿ ಒಗ್ಗಟ್ಟು, ಏಕತೆ, ಪ್ರತ್ಯೇಕ ಧರ್ಮದ ಹಕ್ಕು, ಜಾತಿ ಸಮೀಕ್ಷೆ ಹಾಗೂ ಸಮಾಜದ ಸಮಸ್ಯೆಗಳ ಕುರಿತಂತೆ ಹಲವು ಮುಖಂಡರು ಮತ್ತು ಮಠಾಧೀಶರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆದರೆ, ವೇದಿಕೆಯ ಮೇಲೂ, ಸಭಾಂಗಣದಲ್ಲೂ ಗೊಂದಲದ ವಾತಾವರಣ ಉಂಟಾಯಿತು. ವೇದಿಕೆ ಮೇಲೆ ಮಹಾರಾಷ್ಟ್ರ ಶಿವ ಸಂಘಟನೆ ಮಾತಿಗೆ ತೀವ್ರ ಆಕ್ಷೇಪ. ವೇದಿಕೆ ಮೇಲೆ ಬಸವರಾಜ ಬೊಮ್ಮಾಯಿ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು.

210
ಮಹಾರಾಷ್ಟ್ರ ಶಿವ ಸಂಘಟನೆಯ ಹೇಳಿಕೆ

ಸಮಾವೇಶದಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರದ ಶಿವ ಸಂಘಟನೆಯೊಬ್ಬ ಮುಖಂಡರು ತಮ್ಮ ಭಾಷಣದಲ್ಲಿ “ಜಾತಿ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಬಾರದು, ವೀರಶೈವ–ಲಿಂಗಾಯತ ಎಂದು ಬರೆಯಬೇಕು” ಎಂದು ಕರೆ ನೀಡಿದರು. ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನೂ ಪ್ರಸ್ತಾಪಿಸಿ, “ಹಿಂದುತ್ವ ಪ್ರತಿಪಾದಿಸುವ ಅಮಿತ್ ಶಾ ಅವರ ಧರ್ಮವೂ ಬೇರೆ” ಎಂದು ಉಲ್ಲೇಖಿಸಿದರು.

ಈ ಮಾತಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಮಗೆ ಶಿಷ್ಟಾಚಾರ ಹೇಳಿದ್ದಿರಿ, ಆದರೆ ಈಗ ನೀವು ಅದನ್ನೇ ಉಲ್ಲಂಘಿಸಿದ್ದೀರಿ. ನಾವು ಮಾತನಾಡಲು ಆರಂಭಿಸಿದರೆ ಇದಕ್ಕಿಂತ ಹೆಚ್ಚು ಮಾತನಾಡುತ್ತೇವೆ” ಎಂದು ವೇದಿಕೆಯಲ್ಲಿ ಎದ್ದು ಹೇಳಿದರು. ಬೊಮ್ಮಾಯಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಬ್ಬರೂ ಆಕ್ರೋಶದಿಂದ ವೇದಿಕೆಯಿಂದ ಹೊರಡುವ ಸ್ಥಿತಿಗೆ ಬಂದರು.

310
ಶಂಕರ ಬಿದರಿ: ಒಕ್ಕಟ್ಟೇ ಶಕ್ತಿ, ಒಡಕೇ ವಿನಾಶ

ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, “ಇದು ಪುನರುತ್ಥಾನದ ಸಮಾವೇಶ. 57 ಜಾತಿಗಳಿಗೆ ಸೂಕ್ತ ಮೀಸಲಾತಿ ದೊರಕಿಸುವ ಕಾರ್ಯ ಮಹಾಸಭೆಯ ಗುರಿ. ಕೆಲವರಿಗೆ ಸಿಗಬೇಕಾಗಿದ್ದ 2ಎ ಸೌಲಭ್ಯವೂ ನಮ್ಮ ಹೋರಾಟದಿಂದ ಸಾಧ್ಯವಾಗುತ್ತದೆ. ಒಕ್ಕಟ್ಟಾಗಿ ಬಂದರೆ ಶಕ್ತಿ, ಒಡಕಾದರೆ ವಿನಾಶ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು” ಎಂದು ಕರೆ ನೀಡಿದರು.

410
ಶಿವ ಸಂಘಟನೆ ಕಾರ್ಯಕರ್ತರ ಆಕ್ರೋಶ

ಮಹಾರಾಷ್ಟ್ರದ ಶಿವ ಸಂಘಟನೆಯ ಕಾರ್ಯಕರ್ತರು ತಮ್ಮ ಅಧ್ಯಕ್ಷ ಮನೋಹರ್ ದೊಂಡೆ ಅವರನ್ನು ಹಿಂದಿನ ಸಾಲಿನಲ್ಲಿ ಕುಳ್ಳಿರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ನಾಯಕನಿಗೆ ಅಪಮಾನ ಮಾಡಲಾಗಿದೆ ಎಂದು ಕಿಡಿಕಾರಿದರು. ವೇದಿಕೆ ಕೆಳಗೆ ನಿಂತು ಸಂಘಟಕರ ವಿರುದ್ಧ ಆಕ್ರೋಶ ತೋರಿದ ಅವರು, ಕೊನೆಗೆ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಶಾಂತವಾದರು.

510
ಶೆಟ್ಟರ್ ಹೇಳಿಕೆಗೆ ಸ್ವಾಮೀಜಿ ಅತೃಪ್ತಿ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಭಾಷಣದಲ್ಲಿ, “ಲಿಂಗಾಯತ ಹಿಂದೂ ಧರ್ಮದ ಭಾಗವಾಗಿದೆ. ವೀರಶೈವ–ಲಿಂಗಾಯತ ಎರಡೂ ಒಂದೇ. ಇನ್ನೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿಲ್ಲ. ಜಾತಿ ಸಮೀಕ್ಷೆ ಪಾರದರ್ಶಕವಾಗಿರಬೇಕು” ಎಂದರು. ಆದರೆ ಅವರ ಮಾತಿಗೆ ದಿಂಗಾಲೇಶ್ವರ ಶ್ರೀ ಅತೃಪ್ತಿ ವ್ಯಕ್ತಪಡಿಸಿದರು. “ಇದು ಏಕತಾ ಸಮಾವೇಶ. ಇಲ್ಲಿ ಗೊಂದಲ ಮೂಡಿಸುವ ಮಾತು ಬೇಡ” ಎಂದು ಅವರು ಸಲಹೆ ನೀಡಿದರು.

610
ಈಶ್ವರ್ ಖಂಡ್ರೆ: ಜಾತಿ ಸಮೀಕ್ಷೆಯಲ್ಲಿ ವೀರಶೈವ–ಲಿಂಗಾಯತ ಎಂದು ಬರೆಯಬೇಕು

ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಾಸ್ತಾವಿಕ ಭಾಷಣದಲ್ಲಿ, “ವೀರಶೈವ–ಲಿಂಗಾಯತ ಸಮಾಜ ಕವಲುದಾರಿಯಲ್ಲಿದೆ. ನಿರುದ್ಯೋಗ, ಬಡತನ ಸಮಸ್ಯೆಗಳು ಕಾಡುತ್ತಿವೆ. ಇದರ ಪರಿಹಾರ ಸಂಘಟನೆಯಲ್ಲಿದೆ. ಮಠಾಧೀಶರು ತಮ್ಮ ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಾಗಿ ಬರಬೇಕು. ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮ ಪಡೆಯುವ ಕಾಲ ಸನ್ನಿಹಿತವಾಗಿದೆ. ಜಾತಿ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ವೀರಶೈವ–ಲಿಂಗಾಯತ ಅಂತಲೇ ಬರೆಯಬೇಕು” ಎಂದು ಕರೆ ನೀಡಿದರು.

710
ಸಿದ್ದಗಂಗಾ ಶ್ರೀ: ಇದು ಶಕ್ತಿ ಪ್ರದರ್ಶನವಲ್ಲ, ಭಕ್ತಿ ಪ್ರದರ್ಶನ

ಸಿದ್ದಗಂಗಾ ಮಠದ ಶ್ರೀಗಳು ಮಾತನಾಡಿ, “ಹಾನಗಲ್ ಕುಮಾರಸ್ವಾಮಿಗಳ ಕನಸು ಇಂದು ನನಸಾಗಿದೆ. ಎಲ್ಲರನ್ನೂ ಒಟ್ಟುಗೂಡಿಸಿ ಐಕ್ಯತಾ ಸಮಾವೇಶ ನಡೆಸಿರುವುದು ಐತಿಹಾಸಿಕ. ಪರಸ್ಪರ ಜಗಳಗಳನ್ನು ದೂರ ಮಾಡಿ, ಮೇಲು–ಕೀಳು ಭಾವನೆ ತೊಡೆದು ಹಾಕಬೇಕು. ಇದು ಶಕ್ತಿ ಪ್ರದರ್ಶನವಲ್ಲ, ಭಕ್ತಿ ಪ್ರದರ್ಶನ. ಇಂತಹ ವಾತಾವರಣ ಇನ್ನಷ್ಟು ಬೆಳೆಯಬೇಕು” ಎಂದು ಹೇಳಿದರು.

810
ಬೊಮ್ಮಾಯಿ: ಆಂತರಿಕ ಆತ್ಮ ಸಮೀಕ್ಷೆ ಅಗತ್ಯ

ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮಾತಾಡಿ, “ನಮ್ಮಲ್ಲಿ ಒಗ್ಗಟ್ಟಿಲ್ಲ. ಒಗ್ಗಟ್ಟಿದ್ದರೆ ಯಾರೂ ನಮ್ಮನ್ನು ಮುಟ್ಟಲು ಸಾಧ್ಯವಿಲ್ಲ. ಜಾತಿ ಸಮೀಕ್ಷೆ ಮುಖ್ಯವಲ್ಲ, ನಮ್ಮ ಆಂತರಿಕ ಆತ್ಮ ಸಮೀಕ್ಷೆ ಮುಖ್ಯ. ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮುಂದುವರಿಯಬೇಕು” ಎಂದರು.

910
ವಿಜಯಾನಂದ ಕಾಶಪ್ಪನವರ್: ಪ್ರತ್ಯೇಕ ಧರ್ಮ ಹುಟ್ಟು ಹಾಕೋ ಶಕ್ತಿ ನಮ್ಮಲ್ಲಿದೆ

ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು, “ನಾವು ಎಲ್ಲರೂ ವೀರರೂ, ಶೂರರೂ ಹೌದು. ಪ್ರತ್ಯೇಕ ಧರ್ಮ ಹುಟ್ಟು ಹಾಕೋ ಶಕ್ತಿ ನಮ್ಮಲ್ಲಿದೆ. ವೈಯಕ್ತಿಕ ಹಿತಾಸಕ್ತಿ ಬಿಟ್ಟು ಸಮಾಜದ ಹಿತಾಸಕ್ತಿ ಕಡೆಗೆ ತಿರುಗಬೇಕು. ನಮ್ಮನ್ನು ಯಾರಾದರೂ ಧರ್ಮದ ಅಡಿಯಲ್ಲಿ ಇರಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ” ಎಂದು ಕಿಡಿಕಾರಿದರು.

1010
ಭವ್ಯ ಏಕತಾ ಸಮಾವೇಶ

ಈ ಸಮಾವೇಶವು ಫಕೀರ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ನಡೆದಿದ್ದು, ರಂಭಾಪುರಿ ಶ್ರೀ, ಶ್ರೀಶೈಲ ಜಗದ್ಗುರು, ಕಾಶಿ, ಉಜ್ಜಿ ಜಗದ್ಗುರು, ಸಿದ್ದಗಂಗಾ ಶ್ರೀ ಸೇರಿದಂತೆ ಸಾವಿರಾರು ಮಠಾಧೀಶರ ಸಾನಿಧ್ಯತೆ ದೊರೆಯಿತು. ಮಾಜಿ ಸಿಎಂ ಶೆಟ್ಟರ್, ಬೊಮ್ಮಾಯಿ, ಸಚಿವರಾದ ಶರಣಬಸಪ್ಪ ದರ್ಶನಾಪುರ್, ಈಶ್ವರ್ ಖಂಡ್ರೆ, ಶಂಕರ ಬಿದರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶಿವಲಿಂಗಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಯಿತು.

Read more Photos on
click me!

Recommended Stories