ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಲಿರುವ ಚಿನ್ನಯ್ಯ, ಶಿವಮೊಗ್ಗ ಜೈಲಿನಿಂದ ಬೆಳ್ತಂಗಡಿಗೆ ಕರೆತಂದ ಪೊಲೀಸರು

Published : Sep 18, 2025, 03:24 PM IST

ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆರೋಪಿ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಗ್ಲೆಗುಡ್ಡ ಕಾಡಿನಲ್ಲಿ ಮತ್ತಷ್ಟು ಮಾನವ ಮೂಳೆಗಳ ಅವಶೇಷಗಳು ಪತ್ತೆಯಾಗಿದ್ದು, ತನಿಖೆಯನ್ನು ದಾರಿತಪ್ಪಿಸುತ್ತಿರುವ ಆರೋಪದ ಮೇಲೆ ಹೊಸ ದೂರುಗಳು ದಾಖಲಾಗಿವೆ.

PREV
15
ಬೆಳ್ತಂಗಡಿಗೆ ಚಿನ್ನಯ್ಯ ವಾಪಸ್

ಬೆಳ್ತಂಗಡಿ: ಹಲವು ವರ್ಷಗಳಿಂದ ಧರ್ಮಸ್ಥಳ ಪ್ರದೇಶದಲ್ಲಿ ನಡೆದಿರುವ ಅಸಹಜ ಸಾವುಗಳ ತನಿಖೆಯ ಭಾಗವಾಗಿ, ಧರ್ಮಸ್ಥಳ ಬುರುಡೆ ಪ್ರಕರಣ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಆರೋಪಿ ಚಿನ್ನಯ್ಯನನ್ನು ಪೊಲೀಸರು ಇಂದು ಬೆಳ್ತಂಗಡಿಗೆ ಕರೆದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಶಿವಮೊಗ್ಗ ಜೈಲಿನಲ್ಲಿ ಬಂಧನದಲ್ಲಿದ್ದ ಚಿನ್ನಯ್ಯನನ್ನು ಬೆಳ್ತಂಗಡಿ ಪೊಲೀಸರ ತಂಡ ಸೆಪ್ಟೆಂಬರ್ 6 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇಂದು ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶ ವಿಜಯೇಂದ್ರ ಅವರ ಮುಂದೆ ಹಾಜರುಪಡಿಸಲಾಗುತ್ತಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿನ್ನಯ್ಯನನ್ನು ಕೋರ್ಟ್ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದ್ದು, ತಪ್ಪೊಪ್ಪಿಗೆ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ. ಈ ವೇಳೆ ಚಿನ್ನಯ್ಯ ಈಗಲೂ ಪೊಲೀಸ್ ವಾಹನದಲ್ಲೇ ಕೋರ್ಟ್ ಆವರಣದಲ್ಲಿ ಕುಳಿತಿರುವುದಾಗಿ ಮೂಲಗಳು ತಿಳಿಸಿವೆ.

25
ಬಂಗ್ಲೆಗುಡ್ಡ ಕಾಡಿನಲ್ಲಿ ಎಸ್ಐಟಿ ಶೋಧ

ಪ್ರಕರಣದ ತನಿಖೆಗಾಗಿ ಎಸ್ಐಟಿ ಬಂಗ್ಲೆಗುಡ್ಡ ಕಾಡಿನಲ್ಲಿ ಶೋಧ ಕಾರ್ಯ ಮುಂದುವರೆಸಿದ್ದು, ಅಲ್ಲಿಂದ ಮತ್ತೆರಡು ಜಾಗಗಳಲ್ಲಿ ಮಾನವ ಮೂಳೆಗಳ ಅವಶೇಷಗಳು ಪತ್ತೆಯಾಗಿವೆ. ಬುರುಡೆ ಸೇರಿದಂತೆ ಹಲವು ಮೂಳೆಗಳನ್ನು ಫಾರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಸೋಕೋ ತಂಡ ಮಣ್ಣು ಹಾಗೂ ಮೂಳೆಗಳ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಫರೆನ್ಸಿಕ್ ಸೈನ್ಸ್ ಲ್ಯಾಬ್ (FSL) ಗೆ ಕಳುಹಿಸಲು ತಯಾರಿ ನಡೆದಿದೆ. ಭೂಮಿಯ ಮೇಲೆ ಚದುರಿಕೊಂಡ ಸ್ಥಿತಿಯಲ್ಲಿ ಅವಶೇಷಗಳು ಪತ್ತೆಯಾಗಿದ್ದು, ಅವುಗಳ ಮಹಜರು ಪ್ರಕ್ರಿಯೆಯನ್ನೂ ನಡೆಸಲಾಗಿದೆ.

35
ಅಸಹಜ ಸಾವುಗಳ ಕುರಿತು ದೂರು

ಈ ನಡುವೆ ಸಿಪಿಐಎಂ ಮುಖಂಡ ಬಿ.ಎಂ. ಭಟ್ ಅವರು ಧರ್ಮಸ್ಥಳ ಠಾಣೆ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನಡೆದ ಅಸಹಜ ಸಾವುಗಳ ಕುರಿತು ತನಿಖೆ ನಡೆಸಬೇಕೆಂದು ಎಸ್ಐಟಿಗೆ ದೂರು ನೀಡಿದ್ದಾರೆ. ಎಸ್ಐಟಿ ಆದೇಶದಲ್ಲೇ ಇಂತಹ ಪ್ರಕರಣಗಳ ತನಿಖೆಯ ಉಲ್ಲೇಖ ಇರುವುದರಿಂದ, ದೂರು ಆಧರಿಸಿ ಅಧಿಕಾರಿಗಳು ಮುಂದಿನ ತನಿಖಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

45
ವಿಠಲ ಗೌಡ ವಿರುದ್ಧ ದೂರು

ಇದರ ಜೊತೆಗೆ, ಧರ್ಮಸ್ಥಳ ಗ್ರಾಮಸ್ಥರಾದ ಸಂದೀಪ್ ರೈ ಅವರು ಚಿನ್ನಯ್ಯನ ಮಾವ ವಿಠಲ ಗೌಡ ವಿರುದ್ಧ ಹೊಸದಾಗಿ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ವಿಠಲ ಗೌಡ ತನಿಖೆಯನ್ನು ತಪ್ಪು ದಾರಿಗೆ ಎಳೆದುಕೊಂಡು ಹೋಗುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪ ಇದಾಗಿದೆ. ವಿಚಾರಣೆ ಮುಗಿದ ಬಳಿಕ ವಿಠಲ ಗೌಡ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿ, ತನಿಖೆಯ ಹಾದಿಯನ್ನು ತಪ್ಲಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಸಾಕ್ಷ್ಯ ನಾಶ ಮಾಡಲು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದರ ಮೇಲೂ ಗಂಭೀರ ಆರೋಪ ಕೇಳಿಬಂದಿದೆ. ಎಸ್ಐಟಿ ಅಧಿಕಾರಿಗಳು ಈ ದೂರು ಸ್ವೀಕರಿಸಿದ್ದು, ವಿಠಲ ಗೌಡನ ವಿರುದ್ಧ ತನಿಖೆ ನಡೆಸುವ ಸಾಧ್ಯತೆ ಇದೆ.

55
ಬಂಗ್ಲೆಗುಡ್ಡ ಕಾಡಿನಲ್ಲಿ ಮೂಳೆ ಅವಶೇಷಗಳ ಪತ್ತೆ

ಧರ್ಮಸ್ಥಳ ಬುರುಡೆ ಪ್ರಕರಣವು ದಿನೇದಿನೇ ಹೊಸ ತಿರುವು ಪಡೆಯುತ್ತಿದ್ದು, ಆರೋಪಿ ಚಿನ್ನಯ್ಯ ವಿಚಾರಣೆ, ಬಂಗ್ಲೆಗುಡ್ಡ ಕಾಡಿನಲ್ಲಿ ಮೂಳೆ ಅವಶೇಷಗಳ ಪತ್ತೆ, ಹಾಗೂ ಗ್ರಾಮಸ್ಥರಿಂದ ಬಂದಿರುವ ಹೊಸ ದೂರುಗಳ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಸ್ಐಟಿ ತನಿಖೆಯ ಫಲಿತಾಂಶ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದರ ಮೇಲೆ ಸಾರ್ವಜನಿಕರ ಕಣ್ಣು ನೆಟ್ಟಿದೆ.

Read more Photos on
click me!

Recommended Stories