ಲಕ್ಕುಂಡಿ: ನಿಧಿ ಸಿಕ್ಕ ಜಾಗದಲ್ಲಿ ದೊಡ್ಡ ಸರ್ಪ ಎದ್ದಿದೆ, ಒಂದಲ್ಲ ಒಂದು ದಿನ ಕಚ್ಚುತ್ತೆ, ನಮಗೆ ಆ ಜಾಗ ಬೇಡವೆಂದ ಕುಟುಂಬ!

Published : Jan 12, 2026, 03:52 PM IST

ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದಿದೆ. ನಿಧಿ ಸಿಕ್ಕ ಜಾಗವನ್ನು 'ಅಪಶಕುನ' ಎಂದು ಪರಿಗಣಿಸಿರುವ ರಿತ್ತಿ ಕುಟುಂಬ, ಆ ಜಾಗ ತಮಗೆ ಬೇಡವೆಂದು ಹೇಳಿದೆ. ಬದಲಾಗಿ, ಅಲ್ಲಿ ದೇವಸ್ಥಾನ ನಿರ್ಮಿಸಿ, ತಮಗೆ ಬೇರೆಡೆ ವಾಸಿಸಲು ವ್ಯವಸ್ಥೆ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

PREV
17
ರಿತ್ತಿ ಕುಟುಂಬದ ಹೊಸ ಬೇಡಿಕೆ

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಚಿನ್ನದ ನಿಧಿ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಲಕ್ಷ್ಮೀ ದೇವಾಲಯದ ಹಿಂಭಾಗದಲ್ಲಿರುವ ರಿತ್ತಿ ಕುಟುಂಬದ ಜಾಗದಲ್ಲಿ ಚಿನ್ನದ ನಿಧಿ ಪತ್ತೆಯಾಗಿರುವುದರಿಂ ಈ ಪ್ರದೇಶವು ರಾಜ್ಯಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ, ನಿಧಿ ಸಿಕ್ಕಿರುವ ಜಾಗವನ್ನು ತಮ್ಮ ವಶದಲ್ಲಿರಲು ಕುಟುಂಬ ನಿರಾಕರಿಸಿದ್ದು, ಅದನ್ನು ‘ಅಪಶಕುನದ ಜಾಗ’ ಎಂದು ಪರಿಗಣಿಸಿ, ಅಲ್ಲಿ ದೇವಸ್ಥಾನ ನಿರ್ಮಿಸಬೇಕು ಎಂಬ ಹೊಸ ಬೇಡಿಕೆಯನ್ನು ಮುಂದಿಟ್ಟಿದೆ.

27
“ನಮಗೆ ಆ ಜಾಗ ಬೇಡ” – ರಿತ್ತಿ ಕುಟುಂಬದ ಮನವಿ

ರಿತ್ತಿ ಕುಟುಂಬದ ಸದಸ್ಯರ ಹೇಳಿಕೆಯಂತೆ, ನಿಧಿ ಪತ್ತೆಯಾದ ಬಳಿಕ ಆ ಜಾಗದಲ್ಲಿ ಅನಾಹುತಗಳು ಸಂಭವಿಸುವ ಭಯ ಕಾಡುತ್ತಿದೆ. “ಆ ಜಾಗದಿಂದ ದೊಡ್ಡ ಸರ್ಪ ಎದ್ದಿದೆ. ಒಂದಲ್ಲ ಒಂದು ದಿನ ಕಚ್ಚಬಹುದು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ನಮಗೆ ಒಬ್ಬನೇ ಮಗ ಇದ್ದಾನೆ. ಅವನ ಭವಿಷ್ಯ ನಮಗೆ ಮುಖ್ಯ. ಹೀಗಾಗಿ ಆ ಜಾಗ ನಮಗೆ ಬೇಡ” ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದೇ ವೇಳೆ, “ಹೀಗಾಗಿ ಆ ಬೆಂಕಿ ದೇವರಿಗೆ ಇರಲಿ. ನಮಗೆ ಬೇರೆ ಕಡೆ ಜೀವನ ನಡೆಸಲು ದಾರಿ ಮಾಡಿಕೊಡಿ. ಆ ದಾರಿಯಲ್ಲಿ ಬೆಂಕಿಕಟ್ಟಿಕೊಂಡು ಮುಂದೆ ಹೋದ್ರೆ ಚರ್ಮ ಸುಡುತ್ತೆ. ಹೀಗಾಗಿ ತಾಯಿ ಮತ್ತು ಮಗನಿಗೆ ಸುರಕ್ಷಿತ ಸ್ಥಳದಲ್ಲಿ ಮನೆ ಕಟ್ಟಿಸಿಕೊಡಬೇಕು” ಎಂದು ಅವರು ಮನವಿ ಮಾಡಿದ್ದಾರೆ.

37
ದೇವಸ್ಥಾನ ಅಭಿವೃದ್ಧಿಗೆ ಜಾಗ ವಶಕ್ಕೆ ಪಡೆಯಲಿ

ನಿಧಿ ಪತ್ತೆಯಾದ ಜಾಗವನ್ನು ಸರ್ಕಾರ ವಶಕ್ಕೆ ಪಡೆದು, ಅಲ್ಲಿ ದೇವಸ್ಥಾನ ನಿರ್ಮಿಸಿ ಅಥವಾ ಈಗಿರುವ ಲಕ್ಷ್ಮೀ ದೇವಾಲಯವನ್ನು ಅಭಿವೃದ್ಧಿಪಡಿಸಬೇಕು ಎಂಬುದು ರಿತ್ತಿ ಕುಟುಂಬದ ಮುಖ್ಯ ಬೇಡಿಕೆಯಾಗಿದೆ. ಈ ಕುರಿತು ಅವರು ಏಷ್ಯಾನೆಟ್ ಸುವರ್ಣ ಮಾಧ್ಯಮದ ಮುಂದೆ ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ.

47
ನಿಧಿ ಪತ್ತೆ ಕುರಿತು ಅಧಿಕಾರಿಗಳ ಸ್ಪಷ್ಟನೆ

ಈ ಕುರಿತು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಮಾತನಾಡಿ, “ಲಕ್ಕುಂಡಿಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸುವ ಸಂದರ್ಭದಲ್ಲಿ ಈ ನಿಧಿ ಪತ್ತೆಯಾಗಿದೆ. ಕಲ್ಯಾಣ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಕಾಲದಲ್ಲಿ ಇಲ್ಲಿ ಟಂಕಸಾಲೆ (ಚಿನ್ನದ ನಾಣ್ಯ ತಯಾರಿಕಾ ಕೇಂದ್ರ) ಇದ್ದುದನ್ನು ಶಾಸನಗಳು ಸೂಚಿಸುತ್ತವೆ. ಎರಡು ದಿನ ರಜೆ ಇದ್ದ ಕಾರಣ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ. ನಿನ್ನೆ ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಯಿಂದ ಸ್ವಲ್ಪ ಗೊಂದಲ ಉಂಟಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ ಎಂದರು.

57
ಕಾನೂನು ಮತ್ತು ಮಾನವೀಯತೆ ಆಧಾರಿತ ನಿರ್ಧಾರ

ಪ್ರಾಚ್ಯವಸ್ತು ಇಲಾಖೆಗೆ ಸಂಬಂಧಿಸಿದ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಿಧಿ ಸಿಕ್ಕ ಜಾಗದಲ್ಲಿ ಉತ್ಖನನ ನಡೆಸುವ ಬಗ್ಗೆ ಚರ್ಚೆ ನಡೆಯಲಿದೆ. ಪ್ರಸ್ತುತ ಆ ಜಾಗಕ್ಕೆ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಹಾರದ ವಿಚಾರವನ್ನೂ ಚರ್ಚಿಸಿ, ಕಾನೂನು ಮತ್ತು ಮಾನವೀಯತೆ ಆಧಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

67
ಶಾಸಕ ಸಿ.ಸಿ. ಪಾಟೀಲ ಪ್ರತಿಕ್ರಿಯೆ

ಲಕ್ಕುಂಡಿಯಲ್ಲಿ ಚಿನ್ನ ಸಿಕ್ಕ ಘಟನೆ ಕುರಿತು ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಪ್ರತಿಕ್ರಿಯಿಸಿ, “ನನ್ನ ಜೀವನದಲ್ಲಿ ಕಂಡ ಮೊದಲ ಘಟನೆ ಇದಾಗಿದೆ. ರಿತ್ತಿ ಕುಟುಂಬ ಪ್ರಾಮಾಣಿಕವಾಗಿ ಸರ್ಕಾರಕ್ಕೆ ನಿಧಿಯನ್ನು ಒಪ್ಪಿಸಿದೆ. ಇಂತಹ ಕುಟುಂಬದ ತೊಂದರೆಯನ್ನು ಸರ್ಕಾರವೇ ಪರಿಹರಿಸಬೇಕು” ಎಂದು ಹೇಳಿದರು. ಆ ಕುಟುಂಬಕ್ಕೆ ಮನೆ ಇಲ್ಲ ಎಂದು ಕೇಳಿದ್ದೇನೆ. ನಿಧಿ ಸಿಕ್ಕ ಜಾಗದಲ್ಲಿ ಉತ್ಖನನ ನಡೆದರೆ, ಪಂಚಾಯ್ತಿಯಿಂದ ಜಾಗ ಕೊಡಿಸಿ ಅವರಿಗೆ ಮನೆ ನಿರ್ಮಿಸಿಕೊಡಬೇಕು. ಅವರು ನೆಮ್ಮದಿಯಿಂದ ಜೀವನ ನಡೆಸಲು ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ಅವರು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದು, “ಸುಮಾರು ಅರ್ಧ ಕಿಲೋ ಬಂಗಾರ ಪತ್ತೆಯಾಗಿದೆ. ರಿತ್ತಿ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಬೇಕು” ಎಂದು ಅಭಿಪ್ರಾಯಪಟ್ಟರು.

77
ಸ್ಥಳ ಪರಿಶೀಲನೆ ಮತ್ತು ಸನ್ಮಾನ

ನರಗುಂದ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಧಿ ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಸಿ.ಸಿ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪ್ರಾಮಾಣಿಕತೆ ಮೆರೆದ ರಿತ್ತಿ ಕುಟುಂಬವನ್ನು ಶಾಲು ಹೊದಿಸಿ ಗೌರವಿಸಿದರು. ಒಟ್ಟಿನಲ್ಲಿ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ಘಟನೆ ಕೇವಲ ಪುರಾತತ್ವದ ದೃಷ್ಟಿಯಿಂದ ಮಾತ್ರವಲ್ಲದೆ, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ರಿತ್ತಿ ಕುಟುಂಬದ ಭಯ, ನಂಬಿಕೆ ಮತ್ತು ಭವಿಷ್ಯದ ಆತಂಕವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಶಾಶ್ವತ ಹಾಗೂ ನ್ಯಾಯಸಮ್ಮತ ಪರಿಹಾರ ನೀಡಬೇಕೆಂಬ ಒತ್ತಾಯ ಇದೀಗ ಹೆಚ್ಚಾಗಿದೆ.

Read more Photos on
click me!

Recommended Stories