
ಗದಗ ಜಿಲ್ಲೆಯ ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಮನೆ ನಿರ್ಮಾಣದ ವೇಳೆ ಸಿಕ್ಕ ಚಿನ್ನದ ಬಿಂದಿಗೆಯ ವಿಚಾರ ಇದೀಗ ರಾಜ್ಯಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಗ್ರಾಮವೀಗ ಗೊಂದಲದ ಗೂಡಾಗಿದೆ. ಒಂದು ಕಡೆ ಇದು ಪುರಾತನ ನಿಧಿಯೇ ಎಂಬ ಚರ್ಚೆ ನಡೆದರೆ, ಮತ್ತೊಂದು ಕಡೆ ಇದು ರಿತ್ತಿ ಕುಟುಂಬದ ಪೂರ್ವಜರು ಹೂತಿಟ್ಟ ಚಿನ್ನ ಎಂಬ ವಾದ ಮುಂದಿಡಲಾಗುತ್ತಿದೆ. ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬ ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುತ್ತಿದ್ದ ವೇಳೆ, ಸುಮಾರು 470 ಗ್ರಾಂ ತೂಕದ ಸರಿಸುಮಾರು 65 ಲಕ್ಷ ಮೌಲ್ಯದ ಚಿನ್ನಾಭರಣಗಳಿಂದ ತುಂಬಿದ್ದ ಬಿಂದಿಗೆ ಪತ್ತೆಯಾಗಿತ್ತು. ಚಿನ್ನ ದೊರೆತ ತಕ್ಷಣವೇ ಕುಟುಂಬಸ್ಥರು ಯಾವುದೇ ಗೊಂದಲಕ್ಕೆ ಆಸ್ಪದ ಕೊಡದೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಚಿನ್ನವನ್ನು ಸರ್ಕಾರಿ ವಶಕ್ಕೆ ಹಸ್ತಾಂತರಿಸಿದ್ದು, ಈ ನಡೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿತ್ತು.
ಆದರೆ ದಿನಕಳೆದಂತೆ ಈ ಪ್ರಕರಣ ತೀವ್ರ ತಿರುವು ಪಡೆದುಕೊಂಡಿದೆ. ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಭಾರತೀಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು, “ಇದು ರಾಜರು ಅಥವಾ ಪುರಾತನ ಕಾಲದ ನಿಧಿಯಲ್ಲ. ಇದು ಇತ್ತೀಚಿನ ಕಾಲದ ಅಡುಗೆ ಮನೆಯ ಬಳಿ ಹೂತಿಟ್ಟ ಬಂಗಾರದ ಆಭರಣಗಳಾಗಿರಬಹುದು” ಎಂದು ಹೇಳಿಕೆ ನೀಡಿದ್ದು, ಇದರಿಂದ ಜಿಲ್ಲಾಡಳಿತವೇ ಗೊಂದಲಕ್ಕೆ ಸಿಲುಕಿದೆ. ಪುರಾತತ್ವ ಇಲಾಖೆಯ ಧಾರವಾಡ ವಲಯದ ಅಧೀಕ್ಷಕ ರಮೇಶ್ ಮೂಲಿಮನಿ ಮಾತನಾಡಿ, “ಹಳೆಯ ಕಾಲದಲ್ಲಿ ತಿಜೋರಿ ಅಥವಾ ಕಪಾಟುಗಳ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಮನೆ ಸದಸ್ಯರಿಗೆ ಗೊತ್ತಾಗುವಂತೆ ಅಡುಗೆ ಮನೆಯ ಒಲೆಯ ಬಳಿ ಬಂಗಾರವನ್ನು ಹೂತಿಟ್ಟು ರಕ್ಷಿಸುವ ಪದ್ಧತಿ ಇತ್ತು. ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನವೂ ಅದೇ ರೀತಿಯದ್ದಾಗಿರಬಹುದು” ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರಲ್ಲಿ ತೀವ್ರ ಗೊಂದಲಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ರಿತ್ತಿ ಕುಟುಂಬದ ಸದಸ್ಯರಾದ ಗಂಗವ್ವ ರಿತ್ತಿ, ಸಹೋದರ ಗುಡದಪ್ಪ ಬಾಗಲಿ ಮತ್ತು ತಾಯಿ ಗಿರಿಜಮ್ಮ ಬಾಗಲಿ ಮಾಧ್ಯಮಗಳ ಮುಂದೆ ಮಾತನಾಡಿ, “ನಾವು ಕಡುಬಡವರು. ಸಾಲ ಮಾಡಿಕೊಂಡು ಮನೆ ಕಟ್ಟುತ್ತಿದ್ದೇವೆ. ಪುರಾತತ್ವ ಇಲಾಖೆಯವರೇ ಇದು ನಿಧಿಯಲ್ಲ, ನಮ್ಮ ಪೂರ್ವಜರ ಬಂಗಾರ ಎಂದಿದ್ದಾರೆ. ಹಾಗಾದರೆ ನಮ್ಮ ಬಂಗಾರವನ್ನು ಸರ್ಕಾರ ನಮಗೆ ಮರಳಿ ನೀಡಬೇಕು. ಗೊತ್ತಿಲ್ಲದೆ ನಮ್ಮ ಮಗ ಸರ್ಕಾರಕ್ಕೆ ಮಾಹಿತಿ ನೀಡಿದ್ದಾನೆ” ಎಂದು ಮನವಿ ಮಾಡಿದ್ದಾರೆ. ಇತ್ತ, ಚಿನ್ನವನ್ನು ಸ್ವಇಚ್ಛೆಯಿಂದ ಸರ್ಕಾರಕ್ಕೆ ಒಪ್ಪಿಸಿದ ಬಳಿಕ ಅಧಿಕಾರಿ ನೀಡಿದ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಸದಸ್ಯರಾದ ಪೀರಸಾಬ ನದಾಫ್, ವಿರೂಪಾಕ್ಷಿ ಬೆಟಗೇರಿ ಸೇರಿದಂತೆ ಹಲವರು, “ಕೂಲಂಕಷವಾಗಿ ಪರಿಶೀಲನೆ ನಡೆಸದೇ ಅಧಿಕಾರಿಗಳು ಹೇಳಿಕೆ ನೀಡಿದ್ದು ತಪ್ಪು. ಇದರಿಂದ ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶನಿವಾರ ಚಿನ್ನ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಜಿಲ್ಲಾಡಳಿತ, ಚಿನ್ನವನ್ನು ವಶಕ್ಕೆ ಪಡೆದಿತ್ತು. ಆದರೆ ಭಾನುವಾರ ಪುರಾತತ್ವ ಇಲಾಖೆ ಅಧಿಕಾರಿಗಳು ಅದು ನಿಧಿಯಲ್ಲ ಎಂದು ಹೇಳಿದ ನಂತರ, ಚಿನ್ನವನ್ನು ಸರ್ಕಾರದ ಬಳಿ ಇಟ್ಟುಕೊಳ್ಳಬೇಕೋ ಅಥವಾ ಕುಟುಂಬಕ್ಕೆ ಮರಳಿ ನೀಡಬೇಕೋ ಎಂಬ ಗೊಂದಲ ಜಿಲ್ಲಾಡಳಿತವನ್ನು ಕಾಡುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಇದುವರೆಗೂ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ, ಚಿನ್ನ ಸಿಕ್ಕ ಸ್ಥಳವನ್ನು ಮಹಜರು ಮಾಡಿ, ಅಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಕುಟುಂಬಕ್ಕೆ ಸೂಚನೆ ನೀಡಲಾಗಿದೆ. ಪರಿಣಾಮವಾಗಿ, ಈಗ ಕುಟುಂಬದ ಕೈಯಲ್ಲಿ ಚಿನ್ನವೂ ಇಲ್ಲ, ಮನೆ ಕಟ್ಟುವ ಅವಕಾಶವೂ ಇಲ್ಲದೆ, ಬೀದಿಗೆ ಬರುವ ಸ್ಥಿತಿಗೆ ತಲುಪಿದೆ ಎಂಬ ನೋವಿನ ಸಂಗತಿ ಎದುರಾಗಿದೆ.
ಈ ಪ್ರಕರಣದ ಗಂಭೀರತೆಯನ್ನು ಗಮನಿಸಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. “ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಾದ ವಿಷಯ. ಕುಟುಂಬಕ್ಕೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಾಗುತ್ತದೆ” ಎಂದು ಅವರು ಏಷ್ಯನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ. ಇದೀಗ ರಿತ್ತಿ ಕುಟುಂಬ, “ಚಿನ್ನ ಬೇಡ. ನಮಗೆ ಇರಲು ಸೂರು ಮತ್ತು ಉದ್ಯೋಗ ಕೊಡಿ” ಎಂದು ಹೇಳುತ್ತಿದ್ದು, ಗ್ರಾಮಸ್ಥರೂ ಕೂಡ ಸರ್ಕಾರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹಿಂದೆಯೂ ನಿಧಿ ಸಿಕ್ಕ ಕುಟುಂಬಗಳು ಹಾಳಾಗಿವೆ ಎಂಬ ಮಾತು ಗ್ರಾಮದಲ್ಲಿ ಕೇಳಿಬರುತ್ತಿದ್ದು, ಚಿನ್ನವನ್ನು ಸರ್ಕಾರಕ್ಕೆ ಒಪ್ಪಿಸಿದ್ದು ಮಾದರಿ ನಡೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತ, ಪುರಾತತ್ವ ಇಲಾಖೆ ಅಧೀಕ್ಷಕ ರಮೇಶ್ ಮೂಲಿಮನಿ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೆಚ್ಚಾಗಿದ್ದು, “ನಿಧಿಯಲ್ಲ ಎಂದು ಹೇಳಿ ಗೊಂದಲ ಮೂಡಿಸಿದ್ದಾರೆ. ಮೂರು ದಿನವಾದರೂ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಕರೆಸಿ ಸ್ಪಷ್ಟನೆ ಕೊಡಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ, ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ಬಿಂದಿಗೆಯ ವಿಚಾರ ಇದೀಗ ಆಡಳಿತಾತ್ಮಕ ಗೊಂದಲ, ಅಧಿಕಾರಿಗಳ ಹೇಳಿಕೆಗಳ ವಿರುದ್ಧ ಆಕ್ರೋಶ ಮತ್ತು ಬಡ ಕುಟುಂಬದ ಭವಿಷ್ಯದ ಪ್ರಶ್ನೆಯಾಗಿ ಮಾರ್ಪಟ್ಟಿದ್ದು, ಸರ್ಕಾರದ ತ್ವರಿತ ಹಾಗೂ ಸ್ಪಷ್ಟ ನಿರ್ಧಾರಕ್ಕೆ ಎಲ್ಲರೂ ಕಾಯುತ್ತಿದ್ದಾರೆ.