ಧಾರವಾಡದ ಹೊರವಲಯದಲ್ಲಿ 21 ವರ್ಷದ ಝಕಿಯಾ ಮುಲ್ಲಾ ಎಂಬ ಯುವತಿಯ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮದುವೆಯಾಗಬೇಕಿದ್ದ ಸಂಬಂಧಿ ಸಾಬೀರ್ ಮುಲ್ಲಾ ಎಂಬಾತನೇ, ಮದುವೆ ವಿಚಾರವಾಗಿ ನಡೆದ ಜಗಳದಲ್ಲಿ ಆಕೆಯ ವೇಲ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಧಾರವಾಡ (ಜ.22): ನಗರದ ಹೊರಹೊಲಯದ ಮನಸೂರು ರಸ್ತೆಯ ಡೈರಿಯೊಂದರ ಬಳಿ ಪತ್ತೆಯಾಗಿದ್ದ 21 ವರ್ಷದ ಯುವತಿ ಝಕಿಯಾ ಮುಲ್ಲಾ ಹತ್ಯೆ ಪ್ರಕರಣವನ್ನು ಧಾರವಾಡ ಗ್ರಾಮೀಣ ಪೊಲೀಸರು ಭೇದಿಸಿದ್ದಾರೆ. ಯುವತಿಯನ್ನು ಮದುವೆಯಾಗಬೇಕಿದ್ದ ಸಾಬೀರ್ ಮುಲ್ಲಾ ಎನ್ನುವವನೇ ವೇಲ್‌ನಿಂದ ಕತ್ತು ಹಿಸುಕಿ ಈ ಭೀಕರ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
25
ಘಟನೆಯ ಹಿನ್ನೆಲೆ
ಧಾರವಾಡದ ಗಾಂಧಿ ಚೌಕ ನಿವಾಸಿಯಾಗಿದ್ದ ಝಕಿಯಾ ಮುಲ್ಲಾ ಪ್ಯಾರಾಮೆಡಿಕಲ್ ಓದ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದರು. ಜನವರಿ 20ರ ಸಂಜೆ ಲ್ಯಾಬ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಬಂದಿದ್ದ ಯುವತಿ ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಆದರೆ, ಮರುದಿನ ಬೆಳಿಗ್ಗೆ ಶಾಸಕ ವಿನಯ್ ಕುಲಕರ್ಣಿ ಡೈರಿ ಬಳಿ ಯುವತಿಯ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಬೇರೆ ಕಡೆ ಹತ್ಯೆ ಮಾಡಿ ಇಲ್ಲಿ ಶವ ಎಸೆದಿರಬಹುದು ಎಂದು ಶಂಕಿಸಲಾಗಿತ್ತು.
35
ಪೊಲೀಸರಿಗೆ ಮಾಹಿತಿ ನೀಡಿದ್ದನೇ ಆರೋಪಿ!
ಈ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ವಿಚಾರವೆಂದರೆ, ಹತ್ಯೆ ನಡೆದ ಸ್ಥಳದಲ್ಲಿದ್ದ ಆರೋಪಿ ಸಾಬೀರ್ ಮುಲ್ಲಾ ತಾನೇ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದನು. ಆ ನಂತರ ಸ್ಥಳಕ್ಕೆ ಪೊಲೀಸರು ಬಂದಾಗಲೂ ಅಲ್ಲೇ ಇದ್ದು ಏನೂ ಅರಿಯದವನಂತೆ ನಟಿಸಿದ್ದನು. ಆದರೆ, ಆತನ ನಡವಳಿಕೆಯ ಮೇಲೆ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಝಕಿಯಾ ಮತ್ತು ಸಾಬೀರ್ ಮುಲ್ಲಾ ಸಂಬಂಧಿಕರಾಗಿದ್ದು, ಇವರಿಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ಮಾತುಕತೆ ನಡೆಸಿದ್ದರು. ಜನವರಿ 20ರ ಸಂಜೆ ಇಬ್ಬರೂ ಹೊರಗಡೆ ಸುತ್ತಾಡಲು ಹೋಗಿದ್ದರು. ಈ ವೇಳೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜೋರು ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಸಾಬೀರ್, ಯುವತಿಯ ವೇಲ್‌ನಿಂದಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
55
ಇನ್ನೊಬ್ಬ ಆರೋಪಿಯ ವಿಚಾರಣೆ
ಸದ್ಯ ಸಾಬೀರ್ ಮುಲ್ಲಾನನ್ನು ಬಂಧಿಸಿರುವ ಪೊಲೀಸರು, ಈ ಕೃತ್ಯದಲ್ಲಿ ಆತನಿಗೆ ಮತ್ಯಾರಾದರೂ ಸಾಥ್ ನೀಡಿದ್ದಾರೆಯೇ ಎಂಬ ನಿಟ್ಟಿನಲ್ಲಿ ಮತ್ತೋರ್ವ ಯುವಕನನ್ನು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ವಿದ್ಯಾಕಾಶಿಯಲ್ಲಿ ನಡೆದ ಈ ಭೀಕರ ಹತ್ಯೆ ಜನರಲ್ಲಿ ಆತಂಕ ಮೂಡಿಸಿದ್ದು, ಮದುವೆಯಾಗಬೇಕಿದ್ದವನೇ ಪ್ರಾಣ ತೆಗೆದಿರುವುದು ದುರದೃಷ್ಟಕರ.