ದಾವಣಗೆರೆ ಪೊಲೀಸರ ಮೇಲೆ ಕೈ ಹಾಕಿದ ಪೈಲ್ವಾನ್ ಪುತ್ರರು! ಮಹಿಳಾ ಆಯೋಗ ಮೌನಕ್ಕೆ ವ್ಯಾಪಕ ಆಕ್ರೋಶ

Published : Feb 02, 2026, 05:31 PM IST

ದಾವಣಗೆರೆಯಲ್ಲಿ ಕಾಂಗ್ರೆಸ್ ಮುಖಂಡ ಆಯೂಬ್ ಪೈಲ್ವಾನ್ ಪುತ್ರರು ಮಹಿಳಾ ಸಿಪಿಐ ಸೇರಿದಂತೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಘಟನೆ ಬಳಿಕ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಈ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದೆ.

PREV
16
ಆರೋಪಿಗಳ ಬಂಧನಕ್ಕೆ ವಿಶೇಷ ತಂಡ

ದಾವಣಗೆರೆಯಲ್ಲಿ ಮಹಿಳಾ ಸಿಪಿಐ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯ ಮೇಲೆ ನಡೆದ ಹಲ್ಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನ ದಾವಣಗೆರೆ ದಕ್ಷಿಣ ಬ್ಲಾಕ್ ಅಧ್ಯಕ್ಷ ಆಯೂಬ್ ಪೈಲ್ವಾನ್ ಪುತ್ರರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದು, ಘಟನೆ ಬಳಿಕ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

26
ಆಯೂಬ್ ಪೈಲ್ವಾನ್ ವಿಚಾರಣೆ, ನೋಟಿಸ್ ನೀಡಿ ಬಿಡುಗಡೆ

ಘಟನೆಯ ಸಂಬಂಧ ಆಯೂಬ್ ಪೈಲ್ವಾನ್ ಅವರು ತಮ್ಮ ಮಕ್ಕಳಿಗೆ ಪರಾರಿಯಾಗಲು ಸಹಕರಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಪೊಲೀಸರು ಶನಿವಾರ ಬೆಳಗ್ಗೆ ಅವರನ್ನು ವಶಕ್ಕೆ ಪಡೆದು ಬಡಾವಣೆ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಬಿಎನ್‌ಎಸ್ ಸೆಕ್ಷನ್ 35ರ ಅಡಿಯಲ್ಲಿ ನೋಟಿಸ್ ನೀಡಿದ ಪೊಲೀಸರು, ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅವರನ್ನು ಬಿಡುಗಡೆ ಮಾಡಿದ್ದಾರೆ.

36
ಪ್ರಕರಣದ ಹಿನ್ನೆಲೆ

ಜನವರಿ 31ರಂದು ದಾವಣಗೆರೆ ಜಿಲ್ಲಾಸ್ಪತ್ರೆ ಸಮೀಪ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ ಆಯೂಬ್ ಪೈಲ್ವಾನ್ ಪುತ್ರರಾದ ಹುಸೇನ್, ಹಸೇನ್ ಹಾಗೂ ಹಮ್ಜಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಲು ತೆರಳಿದ ವೇಳೆ ಘಟನೆ ತೀವ್ರ ತಿರುವು ಪಡೆದುಕೊಂಡಿದೆ. ಬಂಧನಕ್ಕೆ ಬಂದ ಪೊಲೀಸರ ವಿರುದ್ಧ ಆಯೂಬ್ ಪೈಲ್ವಾನ್ ಪುತ್ರರು ಉದ್ಧಟತನ ಪ್ರದರ್ಶಿಸಿದ್ದು, ಬಡಾವಣೆ ಠಾಣೆಯ ಸಿಪಿಐ ಗಾಯತ್ರಿ, ಪೇದೆ ಕೆಂಚಪ್ಪ ಹಾಗೂ ಪೇದೆ ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೇದೆ ಹರೀಶ್ ಅವರ ಕೊರಳಪಟ್ಟಿ ಹಿಡಿದು ಹಮ್ಜಾ ಹಲ್ಲೆ ನಡೆಸಿದ್ದು, ಅವರನ್ನು ಬಿಡಿಸಲು ಮುಂದಾದ ಸಿಪಿಐ ಗಾಯತ್ರಿ ಅವರೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಮನೆಯ ಹೊರಗಡೆಯಲ್ಲಿಯೂ ಮಹಿಳಾ ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವೇಳೆ ಸ್ಥಳದಲ್ಲಿದ್ದ ಆಯೂಬ್ ಪೈಲ್ವಾನ್ ಅವರು ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳದೇ ಪೊಲೀಸರ ವಿರುದ್ಧವೇ ಹರಿಹಾಯ್ದಿದ್ದಾರೆ ಎಂಬ ಆರೋಪವೂ ದಾಖಲಾಗಿದೆ.

46
ಒಬ್ಬ ಆರೋಪಿ ಬಂಧನ, ಇಬ್ಬರಿಗಾಗಿ ಶೋಧ

ಪ್ರಕರಣದ ಸಂಬಂಧ ಆರೋಪಿ ಹಸೇನ್‌ನನ್ನು ಪೊಲೀಸರು ಬಂಧಿಸಿದ್ದು, ಹುಸೇನ್ ಹಾಗೂ ಹಮ್ಜಾ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ದಾವಣಗೆರೆ ಎಸ್‌ಪಿ ಉಮಾಪ್ರಶಾಂತ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಪಿ, ಯಾರೇ ಆರೋಪಿಯಾಗಿದ್ದರೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, “ಆರೋಪಿಗಳು ಯಾರೇ ಆಗಿರಲಿ, ತಪ್ಪು ಮಾಡಿದರೆ ಕಾನೂನಿನ ಪ್ರಕಾರ ಜೈಲಿಗೆ ಹೋಗಲೇಬೇಕು” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

56
ಮಹಿಳಾ ಆಯೋಗದ ಮೌನಕ್ಕೆ ಬಿಜೆಪಿ ಆಕ್ರೋಶ

ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ನಡೆದ ಹಲ್ಲೆ ಪ್ರಕರಣದ ಕುರಿತು ರಾಜ್ಯ ಮಹಿಳಾ ಆಯೋಗ ಸ್ಪಂದಿಸದಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜಯಮ್ಮ ಹೆಚ್.ಸಿ. ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, “ಈ ಘಟನೆ ಇಡೀ ಹೆಣ್ಣು ಕುಲಕ್ಕೆ ಮಾಡಿದ ಅಪಮಾನ” ಎಂದು ಕಿಡಿಕಾರಿದರು. “ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಫೇಸ್‌ಬುಕ್ ಹಾಗೂ ಟ್ವಿಟರ್‌ಗಳಿಗೆ ಸೀಮಿತವಾಗಿದ್ದಾರೆ. ಮಹಿಳಾ ಅಧಿಕಾರಿಗೆ ತೊಂದರೆ ಆದಾಗ ಒಂದು ಹೇಳಿಕೆಯನ್ನೂ ನೀಡಿಲ್ಲ. ತಕ್ಷಣವೇ ಆರೋಪಿಗಳ ಬಂಧನಕ್ಕೆ ಮಹಿಳಾ ಆಯೋಗವು ಎಸ್‌ಪಿಗೆ ಸೂಚನೆ ನೀಡಬೇಕು” ಎಂದು ಆಗ್ರಹಿಸಿದರು.

66
ಗಡಿಪಾರಿಗೆ ಒತ್ತಾಯ

ಆರೋಪಿಗಳನ್ನು ತಕ್ಷಣ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ ಅವರು, “ಸಿಪಿಐ ಗಾಯತ್ರಿ ಅವರ ಜೊತೆಗೆ ಇಡೀ ರಾಜ್ಯದ ಹೆಣ್ಣುಮಕ್ಕಳು ನಿಂತಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ” ಎಂದು ಎಚ್ಚರಿಸಿದರು. ಸಚಿವರ ಬೆಂಬಲವಿದೆ ಎಂಬ ಕಾರಣಕ್ಕೆ ಆರೋಪಿಗಳು ಹಾರಾಡುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ ಜಯಮ್ಮ, “ಸಚಿವರು ಚಿವಟೋದು ತೂಗೋದು ಎರಡನ್ನೂ ಮಾಡಬಾರದು. ಕಾನೂನು ಎಲ್ಲರಿಗೂ ಒಂದೇ” ಎಂದು ಕಠಿಣ ಸಂದೇಶ ನೀಡಿದರು.

Read more Photos on
click me!

Recommended Stories