ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹಕ್ಕೆ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಸಾಗಿಸುವ ಯತ್ನ ವಿಫಲವಾಗಿದೆ. ಜೈಲಿನ ಗೋಡೆಯ ಮೇಲಿಂದ ಎಸೆದ ಗಾಂಜಾ, ಮೊಬೈಲ್ ಫೋನ್‌ಗಳಿದ್ದ ಪೊಟ್ಟಣಗಳನ್ನು ಪಡೆಯಲು ಯತ್ನಿಸಿದ ಇಬ್ಬರು ಕೈದಿಗಳನ್ನು ಹಾಗೂ ಹೊರಗಿನಿಂದ ವಸ್ತುಗಳನ್ನು ಎಸೆದ ಮೂವರು ಯುವಕರನ್ನು ಬಂಧಿಸಲಾಗಿದೆ.
ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಒಳಗೆ ಸಾಗಿಸಲು ನಡೆದ ಯತ್ನವನ್ನು ಜೈಲು ಸಿಬ್ಬಂದಿ ಮತ್ತು ಪೊಲೀಸರು ವಿಫಲಗೊಳಿಸಿದ್ದಾರೆ. ಕಾರಾಗೃಹದ ಗೋಡೆ ಮೇಲಿಂದ ಕಪ್ಪು ಬಣ್ಣದ ಟೇಪ್‌ನಿಂದ ಸುತ್ತಿದ್ದ ಅನುಮಾನಾಸ್ಪದ ಪೊಟ್ಟಣಗಳನ್ನು ಪಡೆದುಕೊಳ್ಳಲು ಯತ್ನಿಸುತ್ತಿದ್ದ ಇಬ್ಬರು ವಿಚಾರಣಾಧೀನ ಕೈದಿಗಳನ್ನು ಜೈಲು ಸಿಬ್ಬಂದಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತರನ್ನು ಮೊಹಮದ್ ಖಲಂದರ್ ಮತ್ತು ಅಬ್ದುಲ್ ಆಸೀಫ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಸೋಗಾನೆ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಶಂಕಾಸ್ಪದ ಚಲನವಲನ ಗಮನಿಸಿದ ಜೈಲು ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ಪಡೆದುಕೊಂಡರು.
25
ಕೈದಿಗಳಿಂದ ಗಾಂಜಾ, ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳ ಜಪ್ತಿ
ತಪಾಸಣೆಯ ವೇಳೆ ಮೊಹಮದ್ ಖಲಂದರ್‌ನಿಂದ ಒಂದು ಸ್ಮಾರ್ಟ್‌ಫೋನ್, ಸಿಮ್ ಕಾರ್ಡ್, ಎರಡು ಸಿಗರೇಟ್ ಪ್ಯಾಕೆಟ್‌ಗಳು ಹಾಗೂ ಸುಮಾರು 170 ಗ್ರಾಂ ತೂಕದ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಕೈದಿ ಅಬ್ದುಲ್ ಆಸೀಫ್‌ನಿಂದ ಸುಮಾರು 230 ಗ್ರಾಂ ಗಾಂಜಾ ಹಾಗೂ ಒಂದು ಲೈಟರ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಜೈಲು ಆಡಳಿತದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಇಬ್ಬರು ಕೈದಿಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
35
ಹೊರಗಿನಿಂದ ವಸ್ತು ಎಸೆದ ಪ್ರಕರಣ – ಮೂವರು ಯುವಕರು ಬಂಧನ
ಇನ್ನೊಂದೆಡೆ, ಕಾರಾಗೃಹದ ಗೋಡೆ ಒಳಗೆ ನಿಷೇಧಿತ ವಸ್ತುಗಳನ್ನು ಹೊರಗಿನಿಂದ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಠಾಣೆಯ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರನ್ನು ಶಿವಮೊಗ್ಗ ನಗರದ ಟಿಪ್ಪು ನಗರ ನಿವಾಸಿ ಇಮ್ರಾನ್ ಪಾಷಾ @ ಇಮ್ಮು (25), ಸೈಯ್ಯದ್ ಮಲ್ಲಿಕ್ @ ತಬ್ರೇಜ್ @ ತಂಬಲ್ (22) ಹಾಗೂ ಅಂಬೇಡ್ಕರ್ ನಗರದ ಅಲ್ಲಾ ಬಕಶ್ @ ಪೊಟ್ಯಾಟೋ (20) ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಜನವರಿ 30ರಂದು ಕಾರಾಗೃಹದ ಆವರಣಕ್ಕೆ ಹೊರಗಿನಿಂದ ಕಪ್ಪು ಟೇಪ್‌ನಿಂದ ಸುತ್ತಿದ್ದ ಪೊಟ್ಟಣಗಳನ್ನು ಎಸೆಯಲಾಗಿತ್ತು. ಜೈಲು ಸಿಬ್ಬಂದಿ ಮತ್ತು ಪೊಲೀಸರು ವಶಪಡಿಸಿಕೊಂಡ ಪೊಟ್ಟಣಗಳಲ್ಲಿ ಒಂದು ಸಣ್ಣ ಕೀಪ್ಯಾಡ್ ಮೊಬೈಲ್ ಫೋನ್, ಅಂದಾಜು 22 ಗ್ರಾಂ ತೂಕದ ಗಾಂಜಾ, ನಾಲ್ಕು ಸಿಗರೇಟ್ ಪ್ಯಾಕೆಟ್‌ಗಳು ಹಾಗೂ ಒಂದು ಕಪ್ಪು ಬಣ್ಣದ ಚಾರ್ಜಿಂಗ್ ಕೇಬಲ್ ಇದ್ದವು. ಈ ಅಕ್ರಮ ಜಾಲದ ಹಿಂದೆ ಇನ್ನಾರು ಇದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾರಾಗೃಹದಲ್ಲಿ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದ್ದು, ನಿಷೇಧಿತ ವಸ್ತುಗಳ ಸಾಗಣೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
55
ಕಾರಾಗೃಹ ಸೆಂಟ್ರಲ್ ಕಮಾಂಡ್ ಸೆಂಟರ್
ಇತ್ತೀಚೆಗೆ ರಾಜ್ಯದ ಪ್ರಮುಖ ಕಾರಾಗೃಹಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕಾರಾಗೃಹ ಸೆಂಟ್ರಲ್ ಕಮಾಂಡ್ ಸೆಂಟರ್ ತೆರೆಯಲಾಗಿದೆ. ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಮಾಂಡ್ ಸೆಂಟರ್ ಜತೆ ಬೆಂಗಳೂರು, ಬೆಂಗಳೂರು ದಕ್ಷಿಣ(ರಾಮನಗರ), ಶಿವಮೊಗ್ಗ, ಮೈಸೂರು, ಮಂಗಳೂರು, ಕಲಬುರಗಿ, ಧಾರವಾಡ, ಬೆಳಗಾವಿ ಮತ್ತು ಬಳ್ಳಾರಿ ಕಾರಾಗೃಹದಲ್ಲಿ ಅಳವಡಿಸಿರುವ ಎಐ ಆಧಾರಿತ 1076 ಸಿಸಿ ಕ್ಯಾಮೆರಾಗಳನ್ನು ಸಂಪರ್ಕ ಕಲ್ಪಿಸಲಾಗಿದೆ. ಕಮಾಂಡ್ ಸೆಂಟರ್‌ನಿಂದ ಜೈಲಿನ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುತ್ತದೆ.