ಬೆಳಗಾವಿ: ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ, ನಾಳೆ ಆರೋಪಿಗಳಿಗೆ ಶಿಕ್ಷೆ ಪ್ರಕಟ

Published : Feb 03, 2026, 04:22 PM IST

ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಅಮಾನವೀಯ ಪ್ರಕರಣದಲ್ಲಿ, 12 ಆರೋಪಿಗಳು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇಂದು ಪ್ರಕಟವಾಗಬೇಕಿದ್ದ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನಾಳೆಗೆ ಮುಂದೂಡಿದ್ದು, ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.

PREV
15
ಶಿಕ್ಷೆಯ ಅಂತಿಮ ಘೋಷಣೆ ನಾಳೆ

ಬೆಳಗಾವಿ: ಮಗ ಯುವತಿಯೊಂದಿಗೆ ಓಡಿ ಹೋದ ಎಂಬ ಕಾರಣಕ್ಕೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ದೇಶವ್ಯಾಪಿ ಸಂಚಲನ ಸೃಷ್ಟಿಸಿದ್ದ ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದ ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಅಮಾನವೀಯ ಪ್ರಕರಣದ ಶಿಕ್ಷೆ ತೀರ್ಪನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಕುರಿತಂತೆ ಆದೇಶ ಹೊರಡಿಸಿದ್ದು, ಇಂದು ಪ್ರಕಟವಾಗಬೇಕಿದ್ದ ಶಿಕ್ಷೆಯ ಪ್ರಮಾಣವನ್ನು ನಾಳೆಗೆ ಕಾಯ್ದಿರಿಸಿದೆ.

25
ಕೋರ್ಟ್‌ಗೆ ಆರೋಪಿಗಳ ಹಾಜರಿ, ಭದ್ರತಾ ವ್ಯವಸ್ಥೆ

ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು ಶಿಕ್ಷೆ ಕುರಿತ ತೀರ್ಪನ್ನು ಕಾಯ್ದಿರಿಸಿದ್ದು, ಶಿಕ್ಷೆಯ ಅಂತಿಮ ಘೋಷಣೆ ನಾಳೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿದ್ದ ಎಲ್ಲಾ 12 ಮಂದಿ ಆರೋಪಿಗಳನ್ನು ಪೊಲೀಸರು ಮತ್ತೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ಇಂದು ಬೆಳಿಗ್ಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಪೊಲೀಸ್ ವಾಹನಗಳಲ್ಲಿ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಬೆಳಗಾವಿ ಜಿಲ್ಲಾ ಕೋರ್ಟ್ ಆವರಣದಲ್ಲಿ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಸುಮಾರು 11 ಗಂಟೆಗೆ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಮಧ್ಯಾಹ್ನದ ಬಳಿಕ ಶಿಕ್ಷೆ ಪ್ರಕಟವಾಗಲಿದೆ ಎಂಬ ನಿರೀಕ್ಷೆ ಇದ್ದರೂ, ನ್ಯಾಯಾಲಯ ಶಿಕ್ಷೆ ತೀರ್ಪನ್ನು ನಾಳೆಗೆ ಮುಂದೂಡಿತು.

35
ದೇಶವನ್ನೇ ಬೆಚ್ಚಿಬೀಳಿಸಿದ ವಂಟಮೂರಿ ಘಟನೆ

ಈ ಪ್ರಕರಣವು 2023ರ ಡಿಸೆಂಬರ್ 11ರಂದು ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿತ್ತು. ಪ್ರೀತಿಸಿದ ಯುವತಿಯೊಂದಿಗೆ ಮನೆ ಬಿಟ್ಟು ಮಗ ಪರಾರಿಯಾಗಿದ್ದ. ಇವರಿಬ್ಬರ ಪ್ರೀತಿಗೆ ಯುವತಿ ಮನೆಯಲ್ಲಿ ವಿರೋಧ ಇತ್ತು. ಆಕೆಗೆ ಬೇರೊಬ್ಬ ಯುವಕನ ಜೊತೆಗೆ ನಿಶ್ಚಿತಾರ್ಥ ಮಾಡಿದ್ದರು. ಆದರೆ ಪ್ರೇಮಿಗಳು ಓಡಿಹೋಗಿದ್ದರು. ಹೀಗಾಗಿ ಯುವತಿಯ ಕುಟುಂಬಸ್ಥರು ಆ ಯುವಕನ ಮನೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಬಳಿಕ ಅಮಾನವೀಯವಾಗಿ ಅವನ ತಾಯಿಯನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ನಡೆಸಲಾಗಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆಯ ಮೇಲಿನ ಈ ಕ್ರೌರ್ಯವು ಮಾನವೀಯತೆಗೂ ಮೀರಿದ ಕೃತ್ಯ ಎಂದು ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸದ್ಯ ಈಗ ಈ ಘಟನೆಗೆ ಕಾರಣವಾಗಿದ್ದ ವಂಟಮೂರಿ ಗ್ರಾಮದ ಪ್ರೇಮಿಗಳ ಮದುವೆಯನ್ನು ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಮಾಡಲಾಗಿದೆ.

45
ಆರೋಪಿಗಳು ದೋಷಿ ಎಂದು ಸಾಬೀತು

ಈ ಘಟನೆ ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಕರ್ನಾಟಕ ಹೈಕೋರ್ಟ್ ಈ ಘಟನೆಯನ್ನು ತೀಕ್ಷ್ಣವಾಗಿ ಖಂಡಿಸಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿತ್ತು. ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಪೊಲೀಸರು ಮತ್ತು ಸಿಐಡಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು.

ಈ ಪ್ರಕರಣದಲ್ಲಿ ಓರ್ವ ಬಾಲಾಪರಾಧಿ ಸೇರಿ ಒಟ್ಟು 13 ಮಂದಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಸುಧೀರ್ಘವಾಗಿ ಎರಡು ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ, ಬಾಲಾಪರಾಧಿಯನ್ನು ಹೊರತುಪಡಿಸಿ ಉಳಿದ 12 ಮಂದಿ ಆರೋಪಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಸದ್ಯ ಈ ಎಲ್ಲಾ 12 ಮಂದಿ ಆರೋಪಿಗಳು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದು, ಶಿಕ್ಷೆಯ ಪ್ರಮಾಣದ ಘೋಷಣೆಗೆ ಕಾಯುತ್ತಿದ್ದಾರೆ.

55
ಶಿಕ್ಷೆ ಘೋಷಣೆಗೆ ನಾಳೆ ಅಂತಿಮ ಕ್ಷಣ

ವಂಟಮೂರಿ ಪ್ರಕರಣವು ಮಹಿಳೆಯರ ಮೇಲಿನ ಹಿಂಸಾಚಾರ ಮತ್ತು ಸಾಮಾಜಿಕ ಕ್ರೌರ್ಯದ ವಿರುದ್ಧ ನ್ಯಾಯಾಂಗದ ಮಹತ್ವದ ಪರೀಕ್ಷೆಯಾಗಿ ಪರಿಣಮಿಸಿದೆ. ದೇಶದ ಗಮನ ಸೆಳೆದ ಈ ಪ್ರಕರಣದಲ್ಲಿ ನ್ಯಾಯಾಲಯ ನೀಡಲಿರುವ ಶಿಕ್ಷೆಯ ಪ್ರಮಾಣದ ಕುರಿತು ಸಾರ್ವಜನಿಕರು ಹಾಗೂ ಮಹಿಳಾ ಸಂಘಟನೆಗಳು ಕಾದುನೋಡುತ್ತಿವೆ. ನಾಳೆ ಪ್ರಕಟವಾಗಲಿರುವ ಶಿಕ್ಷೆ ತೀರ್ಪು, ಇಂತಹ ಅಮಾನವೀಯ ಕೃತ್ಯಗಳಿಗೆ ತಡೆಯೊಡ್ಡುವ ದೃಢ ಸಂದೇಶವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Read more Photos on
click me!

Recommended Stories