ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್, ಮೇಯರ್ ಶಿವಕುಮಾರ್ ಉಪಸ್ಥಿತರಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಕಾಲ ಜಂಬೂಸವಾರಿ ಮೆರವಣಿಗೆ ಕೇವಲ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ ಅದ್ದೂರಿಯಾಗಿ ಜರಗಿತು.
750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ಗಜರಾಜ ’ಅಭಿಮನ್ಯು’ ಹೊತ್ತು ಸಾಗಿದ್ದು ಕಣ್ಮನ ಸೆಳೆಯುವಂತಿತ್ತು. ಕಾವೇರಿ ಹಾಗೂ ಚೈತ್ರಾ ‘ಕುಮ್ಕಿ’ ಆನೆಗಳಾಗಿ ಅಭಿಮನ್ಯುವಿಗೆ ಸಾಥ್ ನೀಡಿದವು.
ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ 47 ಸ್ತಬ್ಧಚಿತ್ರಗಳು, 50 ಜನಪದ ಕಲಾತಂಡಗಳು ಸೇರಿದಂತೆ 100ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದ್ದು ಜಂಬೂಸವಾರಿಗೆ ಇನ್ನಷ್ಟು ಮೆರಗು ತಂದುಕೊಟ್ಟಿತ್ತು. ಅಭಿಮನ್ಯು ಸತತ ಮೂರನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿರುವುದ ವಿಶೇಷ.
ಈ ಮಧ್ಯೆ, ಅಂತಾರಾಜ್ಯ ವಾಹನಗಳಿಗೆ ಮೈಸೂರು ನಗರ ಮತ್ತು ಕೆಆರ್‌ಎಸ್ ಪ್ರವೇಶ ತೆರಿಗೆಯಿಂದ ವಿನಾಯ್ತಿ ನೀಡಿರುವುದು, ಶಾಲೆಗಳಿಗೆ ಮಧ್ಯಂತರ ರಜೆ ಸಿಕ್ಕಿರುವುದು, ವಾರಾಂತ್ಯದ ಜೊತೆಗೆ ಸರ್ಕಾರಿ ರಜೆಗಳು ಸಾಲು, ಸಾಲಾಗಿ ಬಂದಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ಐತಿಹಾಸಿಕ ಕ್ಷಣಕ್ಕೆ ಅರಮನೆ ನಗರಿ ಸಾಕ್ಷಿಯಾಗಿದೆ.