ದತ್ತಪೀಠದಲ್ಲಿ ಹೊಸ ವಿವಾದ, ಸುಪ್ರೀಂ ಆದೇಶ ಉಲ್ಲಂಘಿಸಿ ಗುಹೆಯೊಳಗೆ ಹೊಸ ಆಚರಣೆ, ಮುಜಾವರ್‌ಗಳು ವಿವಾಹಿತರಾಗಿರಬಾರದು!

Published : Feb 04, 2026, 04:18 PM IST

ಚಿಕ್ಕಮಗಳೂರಿನ ವಿವಾದಿತ ದತ್ತಪೀಠದ ಗುಹೆಯೊಳಗೆ 'ಕಲಮೆ ತಯ್ಯಬಾ' ಎಂಬ ಹೊಸ ಆಚರಣೆ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ನಿಯಮಬಾಹಿರವಾಗಿ ಮುಜಾವರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿವೆ.

PREV
15
ಮತ್ತೆ ಮುನ್ನೆಲೆಗೆ ಬಂದ ಕಾಫಿನಾಡ ದತ್ತಪೀಠ ವಿವಾದ

ಚಿಕ್ಕಮಗಳೂರು: ಜಿಲ್ಲೆಯ ಕಾಫಿನಾಡು ಪ್ರದೇಶದಲ್ಲಿರುವ ವಿವಾದಿತ ದತ್ತಪೀಠ ಮತ್ತೊಮ್ಮೆ ರಾಜಕೀಯ ಹಾಗೂ ಧಾರ್ಮಿಕ ಚರ್ಚೆಗಳ ಕೇಂದ್ರಬಿಂದುವಾಗಿದೆ. ಸುಪ್ರೀಂ ಕೋರ್ಟ್ ಆದೇಶಗಳಿದ್ದರೂ, ದತ್ತಪೀಠದ ಗುಹೆಯೊಳಗೆ ಹೊಸ ಧಾರ್ಮಿಕ ಆಚರಣೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

25
ಕಲಮೆ ತಯ್ಯಬಾ ಎಂಬ ಹೊಸ ಆಚರಣೆ

ಜನವರಿ 23ರಂದು ದತ್ತಪೀಠದ ಗುಹೆಯ ಒಳಭಾಗದಲ್ಲಿ ‘ಕಲಮೆ ತಯ್ಯಬಾ’ ಎಂಬ ಹೊಸ ಆಚರಣೆ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಇದು ಸುಪ್ರೀಂ ಕೋರ್ಟ್ ಆದೇಶಗಳಿಗೆ ವಿರುದ್ಧವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿ.ಎಚ್.ಪಿ) ಹಾಗೂ ಬಜರಂಗದಳ ಮುಖಂಡರು ದೂರಿದ್ದಾರೆ. ದತ್ತಪೀಠ ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಯಾವುದೇ ಹೊಸ ಆಚರಣೆಗಳಿಗೆ ಅವಕಾಶ ನೀಡಲಾಗಿರಲಿಲ್ಲ. ಆದರೆ, ಸಮಿತಿಯ ಅವಧಿ ಮುಗಿದ ತಕ್ಷಣವೇ ಈ ರೀತಿಯ ಹೊಸ ಆಚರಣೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂಬುದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

35
ಗುಹೆಯ ಒಳಭಾಗದಲ್ಲೇ ಹೊಸ ಆಚರಣೆಗೆ ಹೇಗೆ?

ಈ ಬಗ್ಗೆ ಪ್ರತಿಕ್ರಿಯಿಸಿದ ವಿ.ಎಚ್.ಪಿ ಮತ್ತು ಬಜರಂಗದಳ ಮುಖಂಡರು, “ನಮಗೆ ದತ್ತಪೀಠದ ಗುಹೆ ಮುಂಭಾಗದಲ್ಲಿ ಹೋಮ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಹೀಗಾಗಿ ನಾವು ಪಕ್ಕದಲ್ಲಿರುವ ಶೆಡ್‌ನಲ್ಲಿ ಹೋಮ ನೆರವೇರಿಸಿದ್ದೇವೆ. ಆದರೆ ಇದೀಗ ಗುಹೆಯ ಒಳಭಾಗದಲ್ಲೇ ಹೊಸ ಆಚರಣೆಗೆ ಹೇಗೆ ಅನುಮತಿ ನೀಡಲಾಗಿದೆ?” ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ, ದತ್ತಪೀಠದಲ್ಲಿ ಪೂಜೆ ಸಲ್ಲಿಸುವ ವ್ಯವಸ್ಥೆಗೂ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಸಂಘಟನೆಗಳು ಮುಂದಿಟ್ಟಿವೆ. ಎಂಡೋಮೆಂಟ್ ಕಮಿಷನರ್ ನ್ಯಾಯಾಲಯದಲ್ಲಿ ದತ್ತಪೀಠದ ಹಿಂದಿನ ಮುಜಾವರ್ ದಿ. ಸಯ್ಯದ್ ಪಿರ್ ಮೊಹಮ್ಮದ್ ಶಾಖಾದ್ರಿ ಅವರು, “ಮುಜಾವರ್‌ಗಳು ಅವಿವಾಹಿತರಾಗಿರಬೇಕು ಹಾಗೂ 25 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಪೂಜೆ ಮಾಡುವಂತಿಲ್ಲ” ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದ್ದರು ಎಂದು ವಿ.ಎಚ್.ಪಿ ನಾಯಕರು ಉಲ್ಲೇಖಿಸಿದ್ದಾರೆ.

45
ಮುಜಾವರ್‌ಗಳು ವಿವಾಹಿತರು

ಆದರೆ ಪ್ರಸ್ತುತ ದತ್ತಪೀಠದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಮುಜಾವರ್‌ಗಳು ವಿವಾಹಿತರಾಗಿದ್ದು, ಅವರಿಗೆ ಮಕ್ಕಳು ಹಾಗೂ ಮೊಮ್ಮಕ್ಕಳೂ ಇದ್ದಾರೆ. ಅವರು ಕಳೆದ 35 ವರ್ಷಗಳಿಂದ ಮುಜಾವರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ನ್ಯಾಯಾಲಯದ ಮುಂದೆ ನೀಡಲಾಗಿದ್ದ ಹೇಳಿಕೆಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದಕ್ಕೆ ವಿರುದ್ಧವಾಗಿ, ದತ್ತಪೀಠದಲ್ಲಿ ಪ್ರಸ್ತುತ ಪೂಜೆ ಸಲ್ಲಿಸುತ್ತಿರುವ ಹಿಂದೂ ಯುವಕರು ಅವಿವಾಹಿತರಾಗಿದ್ದು, ನಿಯಮಾನುಸಾರ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ. ಹೀಗಾಗಿ ದತ್ತಪೀಠದ ಆಚರಣೆ ಹಾಗೂ ಪೂಜಾ ವ್ಯವಸ್ಥೆಯಲ್ಲಿ ಸ್ಪಷ್ಟತೆ ತರಬೇಕು ಹಾಗೂ ನಿಯಮಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಮುಜಾವರ್‌ಗಳನ್ನು ತಕ್ಷಣವೇ ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

55
ದತ್ತಪೀಠದಲ್ಲಿ ನಡೆಯುತ್ತಿರುವ ಹೊಸ ಆಚರಣೆಗಳ ಬಗ್ಗೆ ತನಿಖೆಗೆ ಒತ್ತಡ

ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ದತ್ತಪೀಠದಲ್ಲಿ ನಡೆಯುತ್ತಿರುವ ಹೊಸ ಆಚರಣೆಗಳ ಬಗ್ಗೆ ತನಿಖೆ ನಡೆಸಿ, ಸುಪ್ರೀಂ ಕೋರ್ಟ್ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಗ್ರಹಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ವಿವಾದಿತ ದತ್ತಪೀಠದಲ್ಲಿ ಮತ್ತೆ ಉಂಟಾಗಿರುವ ಈ ಬೆಳವಣಿಗೆಗಳು, ಜಿಲ್ಲಾಡಳಿತಕ್ಕೆ ಹೊಸ ಸವಾಲಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ದಿಕ್ಕು ತಾಳಲಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Read more Photos on
click me!

Recommended Stories