ಹನೂರು ಎನ್‌ಕೌಂಟರ್ ಸೇಡು: ಕಾಡಿಗೆ ಬೆಂಕಿ ಹಚ್ಚಿ, ಶಿಬಿರಗಳನ್ನೇ ಸ್ಫೋಟಿಸಿದ ಕಳ್ಳಬೇಟೆಗಾರರು; ಅರಣ್ಯ ಇಲಾಖೆಗೆ ಆತಂಕ!

Published : Aug 20, 2026, 10:47 AM IST

ಹನೂರು ಎನ್‌ಕೌಂಟರ್ ಬಳಿಕ, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜಿಲೆಟಿನ್ ಬಳಸಿ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸುತ್ತಿದ್ದು, 10 ಎಕರೆ ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಈ ಕೇಸಿನ ತನಿಖೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ಬರಬಹುದು.

PREV
16

ಚಾಮರಾಜನಗರ: ಹನೂರು ತಾಲೂಕಿನ ಅರಣ್ಯದಲ್ಲಿ ನಡೆದ ಎನ್‌ಕೌಂಟರ್ ಬೆನ್ನಲ್ಲೇ ಭುಗಿಲೆದ್ದಿರುವ ಕಿಚ್ಚು ಈಗ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಕಾವೇರಿ ವನ್ಯಧಾಮ ಮಾತ್ರವಲ್ಲದೆ, ಇದೀಗ ಮಲೆ ಮಹದೇಶ್ವರ (MM Hills) ವನ್ಯಧಾಮಕ್ಕೂ ಕಿಡಿಗೇಡಿಗಳ ಅಟ್ಟಹಾಸ ವ್ಯಾಪಿಸಿದೆ. ಅರಣ್ಯ ರಕ್ಷಣಾ ಶಿಬಿರಗಳನ್ನು ಜಿಲೆಟಿನ್, ಡೈನಾಮೈಟ್ ಬಳಸಿ ಸ್ಫೋಟಿಸುತ್ತಿರುವುದು ಹಾಗೂ ಕಾಡಿಗೆ ಬೆಂಕಿ ಹಚ್ಚುತ್ತಿರುವ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ಅಖಾಡಕ್ಕಿಳಿಯುವ ಸಾಧ್ಯತೆಯಿದೆ.

26

ಶಿಲುವೆಪುರ ಅರಣ್ಯದಲ್ಲಿ 10 ಎಕರೆ ಕಾಡಿಗೆ ಬೆಂಕಿ!

ಕೊಳ್ಳೇಗಾಲ ತಾಲೂಕಿನ ಶಿಲುವೆಪುರ ಅರಣ್ಯ ವ್ಯಾಪ್ತಿಗೆ ನುಗ್ಗಿರುವ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ್ದು, ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಇದರ ಜೊತೆಗೆ ಜಾಗೇರಿ ಬಳಿಯಿದ್ದ ಕಳ್ಳಬೇಟೆ ತಡೆ ಶಿಬಿರವನ್ನೂ ಧ್ವಂಸಗೊಳಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಈ ದುಷ್ಕೃತ್ಯದ ವಿಡಿಯೋಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿದ್ದು, ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳಲ್ಲಿ ತೀವ್ರ ಆತಂಕ ಮನೆಮಾಡಿದೆ.

36

ಜಿಲೆಟಿನ್, ಡೈನಾಮೈಟ್ ಬ್ಲಾಸ್ಟ್: ಸ್ಥಳಕ್ಕೆ 'ಆ್ಯಂಟಿ ನಕ್ಸಲ್ ಫೋರ್ಸ್' ಭೇಟಿ ಸಾಧ್ಯತೆ

ಅರಣ್ಯದ ಒಳಗಿರುವ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸಲು ದುಷ್ಕರ್ಮಿಗಳು ಮಾರಕ ಜಿಲೆಟಿನ್ ಮತ್ತು ಡೈನಾಮೈಟ್ ಕಡ್ಡಿಗಳನ್ನು ಬಳಸಿರುವುದು ಭದ್ರತಾ ಪಡೆಗಳನ್ನು ಬೆಚ್ಚಿಬೀಳಿಸಿದೆ.

ದಟ್ಟ ಅರಣ್ಯದಲ್ಲಿ ಸ್ಫೋಟಕಗಳನ್ನು ಬಳಸಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಪೊಲೀಸರ ಜೊತೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ತಂಡವು ಕಳ್ಳಬೇಟೆ ತಡೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಸ್ಫೋಟಕಗಳು ಇವರಿಗೆ ಎಲ್ಲಿಂದ ಪೂರೈಕೆಯಾಗುತ್ತಿವೆ? ಇದರ ಹಿಂದೆ ನಕ್ಸಲ್ ಅಥವಾ ಸಂಘಟಿತ ಕಳ್ಳಬೇಟೆ ಜಾಲಗಳ ಕೈವಾಡವಿದೆಯೇ ಎಂಬ ಆಯಾಮದಲ್ಲೂ ಮಾಹಿತಿ ಕಲೆಹಾಕಲಾಗುತ್ತಿದೆ.

46

8 ಶಿಬಿರಗಳು, 3 ವಸತಿ ಗೃಹ, ಜೀಪ್ ಧ್ವಂಸ: ACF ಮರಿಸ್ವಾಮಿ ಹೇಳಿಕೆ

ಘಟನೆಯ ಕುರಿತು ಕಾವೇರಿ ವನ್ಯಧಾಮದ ಎಸಿಎಫ್ (ACF) ಮರಿಸ್ವಾಮಿ ಅವರು ಮಾಹಿತಿ ನೀಡಿ, "ವನ್ಯಧಾಮದಲ್ಲಿ ಒಟ್ಟು 28 ಕಳ್ಳಬೇಟೆ ತಡೆ ಶಿಬಿರಗಳಿದ್ದು, ಈ ಪೈಕಿ 8 ಶಿಬಿರಗಳನ್ನು ಜಿಲೆಟಿನ್ ಮತ್ತು ಡೈನಾಮೈಟ್ ಬಳಸಿ ತೀವ್ರವಾಗಿ ಹಾನಿಗೊಳಿಸಲಾಗಿದೆ. 3 ಸಿಬ್ಬಂದಿ ವಸತಿ ಗೃಹ, ಸೋಲಾರ್ ಫೆನ್ಸಿಂಗ್, ಬ್ಯಾಟರಿಗಳು ಹಾಗೂ ಒಂದು ಇಲಾಖಾ ಜೀಪ್ ಅನ್ನು ನಾಶಮಾಡಲಾಗಿದೆ" ಎಂದು ತಿಳಿಸಿದ್ದಾರೆ.

56

'ನಾವು ರೈತರ ಮೇಲೆ ಯಾವುದೇ ಆರೋಪ ಮಾಡುತ್ತಿಲ್ಲ. ಆದರೆ ಅಕ್ರಮ ಕಳ್ಳಬೇಟೆಯಲ್ಲಿ ತೊಡಗಿರುವ ದುಷ್ಕರ್ಮಿಗಳೇ ದ್ವೇಷದಿಂದ ಇಂತಹ ಕೃತ್ಯ ಎಸಗಿದ್ದಾರೆ. ಕಾಡಿನಲ್ಲಿ ಹಲವು ಕಾಲುದಾರಿಗಳಿದ್ದು, ರಾತ್ರಿ ವೇಳೆ ನುಗ್ಗಿ ಸ್ಫೋಟಿಸುತ್ತಿದ್ದಾರೆ. ಈ ಶಿಬಿರಗಳ ನಾಶದಿಂದ ಮಾನವ-ವನ್ಯಪ್ರಾಣಿ ಸಂಘರ್ಷ ತಡೆಯುವುದು ಕಷ್ಟವಾಗಲಿದ್ದು, ಅರಣ್ಯ ರಕ್ಷಣೆಗೆ ಭಾರೀ ಹಿನ್ನಡೆಯಾಗಲಿದೆ. ದಾಳಿಗಳ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಇಲಾಖೆಗೆ ತಿಳಿಸಬೇಕು' ಕಾವೇರಿ ವನ್ಯಧಾಮ ಎಸಿಎಫ್ ಮರಿಸ್ವಾಮಿ ಎಂದು ತಿಳಿಸಿದರು.

66

ತನಿಖೆ ತೀವ್ರ, ಅರಣ್ಯದಲ್ಲಿ ಹೈ ಅಲರ್ಟ್

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ರಾಮಾಪುರ ಮತ್ತು ಹನೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅರಣ್ಯದ ಒಳಗಿರುವ ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಕಾಡು ನಾಶ ಮತ್ತು ಸ್ಫೋಟದಲ್ಲಿ ಭಾಗಿಯಾದ ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಪೊಲೀಸರು ಹಾಗೂ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ಆರಂಭಿಸಿವೆ.

Read more Photos on
click me!

Recommended Stories