ಮಂಗಳೂರು to ಬೆಂಗಳೂರು 5 ಗಂಟೆ ಜರ್ನಿ, ಶಿರಾಡಿ ಘಾಟ್ ಸುರಂಗ ಮಾರ್ಗ ರಸ್ತೆ-ರೈಲು ಜಂಟಿ ಯೋಜನೆಗೆ ಹಿನ್ನಡೆ!

Published : Jun 20, 2026, 12:27 PM IST

ಬೆಂಗಳೂರು-ಮಂಗಳೂರು ಪ್ರಯಾಣದ ಅವಧಿ ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ   ಅಡ್ಡಿ ಎದುರಾಗಿದೆ. ರಸ್ತೆ- ರೈಲು ಮಾರ್ಗಗಳ ಸುರಕ್ಷತಾ ಮಾನದಂಡಗಳಲ್ಲಿನ ವ್ಯತ್ಯಾಸದಿಂದಾಗಿ, ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ  ಪ್ರತ್ಯೇಕ ಸಮೀಕ್ಷೆ ನಡೆಸಲು ನಿರ್ಧರಿಸಿವೆ.

PREV
16
ಶಿರಾಡಿ ಘಾಟ್ ಸುರಂಗ ಮಾರ್ಗ

ಮಂಗಳೂರು: ಬೆಂಗಳೂರು ಮತ್ತು ಕರಾವಳಿಯ ಪ್ರಮುಖ ನಗರವಾದ ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ಕೇವಲ 5 ಗಂಟೆಗಳಿಗೆ ಇಳಿಸುವ ಮಹತ್ವಾಕಾಂಕ್ಷೆಯ "ಶಿರಾಡಿ ಘಾಟ್ ಸುರಂಗ ಮಾರ್ಗ" ಯೋಜನೆಗೆ ಈಗ ದೊಡ್ಡ ತಾಂತ್ರಿಕ ಅಡೆತಡೆ ಎದುರಾಗಿದೆ. ರಸ್ತೆ ಮತ್ತು ರೈಲು ಮಾರ್ಗ ಎರಡನ್ನೂ ಒಂದೇ ಸುರಂಗದಲ್ಲಿ ನಿರ್ಮಿಸುವ ಬೃಹತ್ ಪ್ರಸ್ತಾವನೆಗೆ ಭೌಗೋಳಿಕ ಏರಿಳಿತಗಳು ಸವಾಲಾಗಿ ಪರಿಣಮಿಸಿದ್ದು, ತಾಂತ್ರಿಕ ಕಾರಣಗಳಿಂದಾಗಿ ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ ಹಿಂದೆ ಸರಿಯುವ ಮುನ್ಸೂಚನೆ ನೀಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲು ನಿರ್ಧರಿಸಿವೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾಹಿತಿ ನೀಡಿದ್ದಾರೆ

26
ಜಂಟಿ ಸಮೀಕ್ಷೆಯಲ್ಲಿ ಎದುರಾದ ತಾಂತ್ರಿಕ ಅಡ್ಡಿ ಏನು?

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವ್ಯಾಪ್ತಿಯ ಸುಮಾರು 42 ಕಿಲೋಮೀಟರ್ ಉದ್ದದ ಅಪಾಯಕಾರಿ ಹಾಗೂ ತಿರುವುಗಳಿಂದ ಕೂಡಿದ ಮಾರ್ಗವನ್ನು ಸುರಂಗದ ಮೂಲಕ ನೇರವಾಗಿಸಲು ಇತ್ತೀಚೆಗೆ ಜಂಟಿ ಸರ್ವೆ ನಡೆಸಲಾಗಿತ್ತು. ಆದರೆ, ರಸ್ತೆ ಸಾರಿಗೆ ಮತ್ತು ರೈಲ್ವೆ ಇಲಾಖೆಗಳ ಸುರಕ್ಷತಾ ಮಾನದಂಡ ಹಾಗೂ ಇಳಿಜಾರು (Gradient) ನಿಯಮಗಳಲ್ಲಿ ಭಾರಿ ವ್ಯತ್ಯಾಸವಿರುವುದು ಈ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

36
ಗ್ರೇಡಿಯಂಟ್ ಸಮಸ್ಯೆ

ರಸ್ತೆ ಸಾರಿಗೆ ನಿಯಮ: ಹೆದ್ದಾರಿ ಇಲಾಖೆಯ ಮಾನದಂಡಗಳ ಪ್ರಕಾರ ಸುರಂಗ ರಸ್ತೆಗೆ 1:50 ಗ್ರೇಡಿಯಂಟ್ ಸಾಕಾಗುತ್ತದೆ. ಇದರ ಆಧಾರದ ಮೇಲೆ ಕೇವಲ 38 ಕಿಲೋಮೀಟರ್ ವ್ಯಾಪ್ತಿಯಲ್ಲೇ ಅತ್ಯಂತ ಯಶಸ್ವಿಯಾಗಿ ರಸ್ತೆ ಸುರಂಗವನ್ನು ನಿರ್ಮಿಸಬಹುದಾಗಿದೆ. ರಸ್ತೆ ಜೋಡಣೆಗೆ ಯಾವುದೇ ಪ್ರಮುಖ ತಾಂತ್ರಿಕ ಸಮಸ್ಯೆಗಳಿಲ್ಲ.

ರೈಲ್ವೆ ಇಲಾಖೆ ನಿಯಮ: ರೈಲ್ವೆಯ ಕಟ್ಟುನಿಟ್ಟಿನ ಸುರಕ್ಷತಾ ಮಾನದಂಡಗಳ ಪ್ರಕಾರ ಘಾಟ್ ವಿಭಾಗದಲ್ಲಿ ಭವಿಷ್ಯದ ದೃಷ್ಟಿಯಿಂದ 1:150 ಗ್ರೇಡಿಯಂಟ್ ಕಡ್ಡಾಯವಾಗಿದೆ (ಪ್ರಸ್ತುತ ಇದು 1:50 ರಷ್ಟಿದೆ). ಈ ಅಪೇಕ್ಷಿತ ಇಳಿಜಾರನ್ನು ಸಾಧಿಸಲು ರೈಲ್ವೆ ಇಲಾಖೆಗೆ ಬರೋಬ್ಬರಿ 88 ಕಿಲೋಮೀಟರ್ ಉದ್ದದ ಸುರಂಗ ಮಾರ್ಗದ ಅಗತ್ಯವಿದೆ.

ಒಂದೇ ಯೋಜನೆಯಡಿ 38 ಕಿ.ಮೀ ರಸ್ತೆ ಸುರಂಗ ಮತ್ತು 88 ಕಿ.ಮೀ ರೈಲು ಸುರಂಗವನ್ನು ಪರಸ್ಪರ ಜೋಡಿಸುವುದು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಅಸಾಧ್ಯ ಎಂಬ ತೀರ್ಮಾನಕ್ಕೆ ರೈಲ್ವೆ ಅಧಿಕಾರಿಗಳು ಬಂದಿದ್ದಾರೆ. ಹೀಗಾಗಿ ಎರಡೂ ಇಲಾಖೆಗಳು ಪ್ರತ್ಯೇಕವಾಗಿ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸುತ್ತಿವೆ ಎನ್ನಲಾಗಿದೆ

46
ರಸ್ತೆ ಯೋಜನೆ ಶೀಘ್ರ ಆರಂಭ; ರೈಲು ಯೋಜನೆ ವಿಳಂಬ ಸಾಧ್ಯತೆ

ಹೆದ್ದಾರಿ ಇಲಾಖೆಗೆ ಯಾವುದೇ ದೊಡ್ಡ ತಾಂತ್ರಿಕ ಅಡೆತಡೆಗಳಿಲ್ಲದ ಕಾರಣ, ರಸ್ತೆ ಸುರಂಗ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ಸಿದ್ಧತೆಗಳು ನಡೆದಿವೆ. ಪ್ರಸ್ತುತ ಜೋಡಣೆ (Alignment) ಕಾರ್ಯಗಳು ನಡೆಯುತ್ತಿದ್ದು, ಏರಿಳಿತದ ಅಂತಿಮ ನಕ್ಷೆ ಸಿದ್ಧವಾದ ತಕ್ಷಣವೇ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಆದರೆ, ರೈಲ್ವೆ ಇಲಾಖೆಯು ಸುರಕ್ಷತೆಯ ವಿಚಾರದಲ್ಲಿ ಕಟ್ಟುನಿಟ್ಟಿನ ನಿಲುವು ಹೊಂದಿರುವುದರಿಂದ ಕರಾವಳಿ ಭಾಗದ ರೈಲು ಸುರಂಗ ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಈ ಕಗ್ಗಂಟನ್ನು ಬಗೆಹರಿಸಲು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳೆ ರೈಲ್ವೆ ಹಾಗೂ ರಸ್ತೆ ಸಾರಿಗೆ ಸಚಿವರನ್ನು ಮತ್ತು ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸುವುದಾಗಿ ಸಂಸದ ಬ್ರಿಜೇಶ್ ಚೌಟ ಭರವಸೆ ನೀಡಿದ್ದಾರೆ.

56
ಬೆಂಗಳೂರು-ಮಂಗಳೂರು ಡಬ್ಲಿಂಗ್ ಹಾಗೂ ರೈಲ್ವೆ ನಿಗಮ ವಿಲೀನಕ್ಕೆ ಬೇಡಿಕೆ

ಮಂಗಳೂರು ಮತ್ತು ಬೆಂಗಳೂರು ನಡುವೆ ಪ್ರಸ್ತುತ ಕೇವಲ ಒಂದೇ ರೈಲು ಮಾರ್ಗ (Single Line) ಇರುವುದನ್ನು ಸಂಸದರು ಗಮನ ಸೆಳೆದಿದ್ದಾರೆ. "ರೈಲ್ವೆ ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸದೆ, ಕೇವಲ ಹೊಸ ರೈಲುಗಳನ್ನು ಓಡಿಸಬೇಕೆಂಬ ಸಾರ್ವಜನಿಕರ ಬೇಡಿಕೆಗಳು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಘಾಟ್ ವಿಭಾಗದಲ್ಲಿನ ಇಳಿಜಾರು ಸಂಬಂಧಿತ ಸವಾಲುಗಳನ್ನು ಶಾಶ್ವತವಾಗಿ ಪರಿಹರಿಸಬೇಕಾದರೆ ದೀರ್ಘಾವಧಿಯ ಯೋಜನೆಯ ಅಗತ್ಯವಿದೆ," ಎಂದು ಅವರು ಪ್ರತಿಪಾದಿಸಿದರು.

ಈ ನಿಟ್ಟಿನಲ್ಲಿ ಪ್ರಮುಖವಾಗಿ ಎರಡು ಸುಧಾರಣೆಗಳಾಗಬೇಕಿದೆ ಎಂದು ಒತ್ತಿಹೇಳಿದ್ದಾರೆ. ಅವೆಂದರೆ ರಸ್ತುತ ಇರುವ ಹಾಸನ-ಮಂಗಳೂರು ರೈಲ್ವೆ ನಿಗಮವನ್ನು (HMRDC) ಸಂಪೂರ್ಣವಾಗಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಗಳೂರು ಮತ್ತು ಮಂಗಳೂರು ನಡುವೆ ತುರ್ತಾಗಿ ದ್ವಿಪಥ ರೈಲು ಮಾರ್ಗವನ್ನು (Double Line) ಅಭಿವೃದ್ಧಿಪಡಿಸಬೇಕು.

66
ಹೈ-ಸ್ಪೀಡ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗುವ ವಿಶ್ವಾಸ

ಕರಾವಳಿ ಜನತೆಯ ಬಹುದಿನಗಳ ಕನಸಾದ ಬೆಂಗಳೂರು-ಮಂಗಳೂರು ನಡುವಿನ ವಂದೇ ಭಾರತ್ ರೈಲು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಸ್ತುತ ಹಲವು ತಾಂತ್ರಿಕ ಮೌಲ್ಯಮಾಪನಗಳನ್ನು ನಡೆಸುತ್ತಿದ್ದಾರೆ. ಈ ಹೈ-ಸ್ಪೀಡ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗುವ ವಿಶ್ವಾಸವಿದೆ ಎಂದು ಚೌಟ ಆಶಾವಾದ ವ್ಯಕ್ತಪಡಿಸಿದರು. ಒಮ್ಮೆ ವಂದೇ ಭಾರತ್ ರೈಲಿನ ವೇಳಾಪಟ್ಟಿ ಅಂತಿಮಗೊಂಡ ನಂತರ, ಪುತ್ತೂರು ರೈಲು ನಿಲ್ದಾಣದಲ್ಲಿ ಅದಕ್ಕೆ ಕಡ್ಡಾಯ ನಿಲುಗಡೆ (Stoppage) ನೀಡಬೇಕೆಂಬ ಸಾರ್ವಜನಿಕರ ಪ್ರಬಲ ಬೇಡಿಕೆಯನ್ನು ರೈಲ್ವೆ ಮಂಡಳಿಯ ಗಮನಕ್ಕೆ ತರಲಾಗುವುದು ಎಂದರು. ಇದೇ ವೇಳೆ, ಪುತ್ತೂರು ಎಪಿಎಂಸಿ ರೈಲ್ವೆ ಮೇಲ್ಸೇತುವೆ ಬಳಿ ಪ್ರಸ್ತಾವಿತ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಸಂಸದರು ಪತ್ರಕರ್ತರಿಗೆ ತಿಳಿಸಿದರು.

Read more Photos on
click me!

Recommended Stories