Bidadi township: ಬಿಡದಿ ಟೌನ್‌ಶಿಪ್‌ ರೈತರಿಗೆ ಬಂಪರ್ ಪರಿಹಾರ: ಪ್ರತಿ ಎಕರೆಗೆ ₹2.30 ಕೋಟಿ ಚೆಕ್ ವಿತರಣೆ!

Published : Jun 19, 2026, 08:17 PM IST

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸರ್ಕಾರವು ಪರಿಹಾರ ಚೆಕ್ ವಿತರಣೆ ಆರಂಭಿಸಿದೆ. ಪ್ರತಿ ಎಕರೆಗೆ 2.30 ಕೋಟಿ ರೂ. ಹಾಗೂ ಬೆಳೆಗಳಿಗೆ ಪ್ರತ್ಯೇಕ ಪರಿಹಾರ ನೀಡಲಾಗುತ್ತಿದ್ದು, ಶಾಸಕ ಬಾಲಕೃಷ್ಣ ಅವರು ರೈತರಿಗೆ ಹಣ ಖಾತೆಗೆ ಜಮೆಯಾಗುವ ಭರವಸೆ ನೀಡಿದ್ದಾರೆ. ಈ ಗ್ರಾಮಗಳ ಹಣ ವಿತರಣೆ ಆಗಿದೆ.

PREV
16

ರಾಮನಗರ (ಜೂ.19): ರಾಜ್ಯದ ಬಹುಚರ್ಚಿತ ಬಿಡದಿ ಟೌನ್‌ಶಿಪ್ (Bidadi Township) ಯೋಜನೆಯ ಜಟಾಪಟಿಗಳ ನಡುವೆಯೇ, ಭೂಮಿ ಕಳೆದುಕೊಳ್ಳುವ ರೈತರಿಗೆ ಭೂ ಪರಿಹಾರದ ಚೆಕ್ ವಿತರಿಸುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBDA) ವತಿಯಿಂದ ಯೋಜನೆಯ ಪಾಲುದಾರರು ಹಾಗೂ ಭೂಮಿ ನೀಡಲು ಸಮ್ಮತಿಸಿರುವ ರೈತರಿಗೆ ಶನಿವಾರ ಸಾಂಕೇತಿಕವಾಗಿ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು. ಒಂದು ಎಕರೆಗೆ 2.30 ಕೋಟಿ ಪರಿಹಾರವನ್ನು ನೀಡಿದೆ.

26

ರಾಮನಗರದ ಕಂದಾಯ ಭವನದಲ್ಲಿರುವ ಜಿಬಿಡಿಎ (GBDA) ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹಾಗೂ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜು ಅವರು ಫಲಾನುಭವಿ ರೈತರಿಗೆ ಚೆಕ್ ಹಸ್ತಾಂತರಿಸಿದರು. ಮೊದಲ ಹಂತದಲ್ಲಿ ಯೋಜನೆಗೆ ಒಪ್ಪಿಗೆ ನೀಡಿರುವ ಕೆಂಪಯ್ಯನಪಾಳ್ಯ ಗ್ರಾಮದ 7 ಮಂದಿ ಭೂ ಮಾಲೀಕರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಯಿತು.

36

ಎಕರೆಗೆ 2.30 ಕೋಟಿ ರೂಪಾಯಿ ಪರಿಹಾರ!

ರೈತರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವು ಭಾರಿ ಕುತೂಹಲ ಮೂಡಿಸಿದೆ. ಅಂತಿಮ ಅಧಿಸೂಚನೆಗೆ ಒಳಪಟ್ಟಿರುವ ಗ್ರಾಮಗಳಲ್ಲಿ ಪ್ರತಿ ಎಕರೆ ಜಮೀನಿಗೆ ಬರೋಬ್ಬರಿ 2 ಕೋಟಿ 30 ಲಕ್ಷದ 7 ಸಾವಿರ ರೂಪಾಯಿ ಪರಿಹಾರ ಹಣವನ್ನು ನಿಗದಿಪಡಿಸಲಾಗಿದೆ. ಕೇವಲ ಭೂಮಿಗೆ ಮಾತ್ರವಲ್ಲದೆ, ಜಮೀನಿನಲ್ಲಿ ಬೆಳೆದ ಬೆಳೆಗಳಿಗೂ ಪ್ರತ್ಯೇಕ ಮತ್ತು ವೈಜ್ಞಾನಿಕವಾಗಿ ಹೆಚ್ಚಿನ ಪರಿಹಾರವನ್ನು ನೀಡಲಾಗುತ್ತಿದೆ.

46

ಬೆಳೆಗಳ ಪರಿಹಾರದ ವಿವರ ಇಂತಿದೆ:

  • ತೆಂಗಿನ ಮರ (ಒಂದಕ್ಕೆ): ₹40,446
  • ಮಾವಿನ ಗಿಡ (ಒಂದಕ್ಕೆ): ₹62,000
  • ಅಡಿಕೆ ಮರ (ಒಂದಕ್ಕೆ): ₹7,440
  • ಬಾಳೆ (ಪ್ರತಿ ಎಕರೆಗೆ): ₹10.86 ಲಕ್ಷ
  • ರೇಷ್ಮೆ (ಪ್ರತಿ ಎಕರೆಗೆ): ₹14 ಲಕ್ಷ
  • ಹಲಸು (ಪ್ರತಿ ಎಕರೆಗೆ): ₹42,750
  • ಹುಣಸೆ (ಪ್ರತಿ ಎಕರೆಗೆ): ₹53,310 
     

ವಿಶೇಷವೆಂದರೆ, ಕೇವಲ ಒಂದು ಗುಂಟೆ ಜಮೀನು ಕಳೆದುಕೊಳ್ಳುವ ಸಣ್ಣ ರೈತರಿಗೂ ನ್ಯಾಯ ಒದಗಿಸಲು ಜಿಬಿಡಿಎ ಮುಂದಾಗಿದೆ. ಅಂತಹ ರೈತರಿಗೆ 5 ಲಕ್ಷ ರೂಪಾಯಿಗಳ ಇಡಿಗಂಟು ಪರಿಹಾರ ನೀಡಲು ನಿರ್ಧರಿಸಲಾಗಿದೆ.

56

ಶಾಸಕ ಬಾಲಕೃಷ್ಣ ಅವರ ಸವಾಲು:

ಚೆಕ್ ವಿತರಿಸಿ ಮಾತನಾಡಿದ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ವಿರೋಧ ಪಕ್ಷಗಳ ಟೀಕೆಗೆ ಕಡಕ್ ಉತ್ತರ ನೀಡಿದ್ದಾರೆ. "ಯೋಜನೆಗೆ ಒಪ್ಪಿಗೆ ನೀಡಿ ನೋಟಿಸ್ ಪಡೆದಿರುವ ರೈತರಿಗೆ ಒಂದು ವಾರದೊಳಗೆ ಅವರ ಖಾತೆಗೆ ಹಣ ಸಂದಾಯವಾಗಲಿದೆ. ಒಂದು ವೇಳೆ ರೈತರಿಗೆ ಹಣ ಕೊಡಿಸಲು ಸಾಧ್ಯವಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ" ಎಂದು ಸವಾಲು ಹಾಕಿದ್ದಾರೆ. ರೈತರಿಗೆ ಯಾವುದೇ ಆತಂಕ ಬೇಡ, ಸರ್ಕಾರ ಅವರ ಬೆನ್ನಿಗಿದೆ ಎಂದು ಅವರು ಭರವಸೆ ನೀಡಿದರು.

66

ಯಾವ ಗ್ರಾಮಗಳಿಗೆ ಮೊದಲ ಹಂತದ ಪರಿಹಾರ?

ಸದ್ಯ ಟೌನ್‌ಶಿಪ್ ಯೋಜನೆಯ ಒಟ್ಟು 9 ಗ್ರಾಮಗಳ ಪೈಕಿ ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ವಡೇರಹಳ್ಳಿ ಗ್ರಾಮಗಳ ಒಟ್ಟು 519 ಎಕರೆ ಪ್ರದೇಶಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ನಾಳೆಯಿಂದ ಅಂತಿಮ ಅಧಿಸೂಚನೆಗೆ ಒಳಪಟ್ಟಿರುವ ಈ ಗ್ರಾಮಗಳ ಉಳಿದ ರೈತರಿಗೂ ಹಂತ ಹಂತವಾಗಿ ಪರಿಹಾರ ನೀಡಲು ಜಿಬಿಡಿಎ ಸರ್ವ ಸಿದ್ಧತೆ ಮಾಡಿಕೊಂಡಿದೆ. ಟೌನ್‌ಶಿಪ್ ವಿರೋಧದ ನಡುವೆಯೂ ರೈತರು ಸ್ವಯಂಪ್ರೇರಿತರಾಗಿ ಭೂಮಿ ನೀಡಲು ಮುಂದೆ ಬರುತ್ತಿರುವುದು ಮತ್ತು ಸರ್ಕಾರ ಆಕರ್ಷಕ ಪರಿಹಾರ ನೀಡುತ್ತಿರುವುದು ಯೋಜನೆಯ ವೇಗವನ್ನು ಹೆಚ್ಚಿಸಿದೆ.

Read more Photos on
click me!

Recommended Stories